Shubman Gill: ಹಾರ್ದಿಕ್ ಪಾಂಡ್ಯ ಜೊತೆ ಮನಸ್ತಾಪದ ವದಂತಿ ಬಗ್ಗೆ ಶುಭಮನ್ ಗಿಲ್ ಸ್ಪಷ್ಟನೆ
ಶುಕ್ರವಾರ ನಡೆದ ಐಪಿಎಲ್ 2025ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 20 ರನ್‌ಗಳ ಭರ್ಜರಿ ಗೆಲುವಿನ ಮೂಲಕ ಕ್ವಾಲಿಫೈಯರ್ 2 ಆಡಲು ಅರ್ಹತೆ ಪಡೆದುಕೊಂಡಿದೆ. ಎರಡು ವರ್ಷ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಬಳಿಕ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡರು. ಇದರಿಂದ ಗುಜರಾತ್ ಟೈಟನ್ಸ್ ತಂಡದ ಅಭಿಮಾನಿಗಳಿಗೆ ಪಾಂಡ್ಯ ಮೇಲೆ ಸಹಜವಾಗಿಯೇ ಬೇಸರವಿದೆ.
ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ನಡುವೆ ಮನಸ್ತಾಪ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಹಾರ್ದಿಕ್ ಮತ್ತು ಗಿಲ್ ನಡುವೆ ಕೆಲವು ಘಟನೆಗಳು ನಡೆದ ಬಳಿಕ ಈ ವದಂತಿ ಹರಡಿದವು. ಮೊದಲನೆಯದಾಗಿ ಹ್ಯಾಂಡ್‌ಶೇಕ್ ಮಾಡುವುದನ್ನು ತಪ್ಪಿಸಿದ್ದು, ಟಾಸ್ ನಡೆದ ಬಳಿಕ ಹಾರ್ದಿಕ್ ಗಿಲ್‌ಗೆ ಹ್ಯಾಂಡ್‌ಶೇಕ್ ಮಾಡಲು ಕೈ ಹಾಕಿದ್ದರು ಆದರೆ ಗಿಲ್ ಅದನ್ನು ಗಮನಿಸಲಿಲ್ಲ. ಇಂಟರ್ನೆಟ್‌ನಲ್ಲಿ ಹಲವರು ಗಿಲ್ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪಾಂಡ್ಯ ಸಂಭ್ರಮಾಚರಣೆ
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 228 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ಗುಜರಾತ್ ಟೈಟನ್ಸ್‌ಗೆ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತ ನೀಡಿತು. ನಾಯಕ ಶುಭಮನ್ ಗಿಲ್ 1 ರನ್ ಗಳಿಸಿ ಔಟಾದರು. ಗಿಲ್ ಎಲ್‌ಬಿಡಬ್ಲ್ಯೂ ಆದಾಗ ಹಾರ್ದಿಕ್ ಪಾಂಡ್ಯ ಅವರ ಸಂಭ್ರಮಾಚರಣೆ ಮಾಡಿದ ರೀತಿ ಕೂಡ ಅಚ್ಚರಿ ಮೂಡಿಸಿತ್ತು.
ಪಾಂಡ್ಯ ಶುಭಮನ್ ಗಿಲ್ ಅವರ ಪಕ್ಕದಲ್ಲಿ ಓಡಿಹೋದರು ಮತ್ತು ಅವರು ಔಟ್ ಆದ ನಂತರ ಬ್ಯಾಟ್ಸ್‌ಮನ್‌ನತ್ತ ನೋಡುತ್ತಾ ಕೂಗಿದರು. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯದ ವದಂತಿಗಳು ಹರಡಲು ಪ್ರಾರಂಭಿಸಿದಾಗ, ಶುಭಮನ್ ಗಿಲ್ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.
ಇಬ್ಬರ ನಡುವೆ ಪ್ರೀತಿಯಿದೆ
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾರ್ದಿಕ್ ಜೊತೆಗಿನ ತಮ್ಮ ಚಿತ್ರವನ್ನು ಅಪ್‌ಲೋಡ್ ಮಾಡಿರುವ ಶುಭಮನ್ ಗಿಲ್, "ಪ್ರೀತಿಯನ್ನು ಹೊರತುಪಡಿಸಿ ಬೇರೇನೂ ಇಲ್ಲ. ಇಂಟರ್ನೆಟ್‌ನಲ್ಲಿ ನೋಡುವ ಎಲ್ಲವನ್ನೂ ನಂಬಬೇಡಿ" ಎಂದು ಬರೆದಿದ್ದಾರೆ. ಪೋಸ್ಟ್‌ನಲ್ಲಿ ಹಾರ್ದಿಕ್ ಅವರನ್ನು ಟ್ಯಾಗ್ ಮಾಡಿದ್ದಾರೆ.












Click it and Unblock the Notifications