ಶ್ರೇಯಸ್ ಅಯ್ಯರ್ಗೆ ವೈಭವ್ ಸೂರ್ಯವಂಶಿ ಅಂದ್ರೆ ಹೊಟ್ಟೆ ಕಿಚ್ಚು: ನೆಟ್ಟಿಗರು ಹಿಂಗ್ ಹೇಳಿದ್ಯಾಕೆ?
Shreyas Iyer: ಭಾರತ-ಇಂಗ್ಲೆಂಡ್ ನಡುವೆ ಟಿ20 ಸರಣಿ ನಡೆಯುತ್ತಿದೆ. ಈ ನಡುವೆ 15 ವರ್ಷದ ಆಕ್ರಮಣಕಾರಿ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಯಾಕೆ ನೀಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಅಯ್ಯರ್ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ವೈಭವ್ ಸೂರ್ಯವಂಶಿ ಬಗ್ಗೆ ವರದಿಗಾರರ ಪ್ರಶ್ನೆಗೆ ನಾಯಕ ಶ್ರೇಯಸ್ ಅಯ್ಯರ್ ಕೊಟ್ಟ ಉತ್ತರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಅಯ್ಯರ್ ಕೊಟ್ಟ ಧಿಮಾಕಿನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ಅವಕಾಶ ವಂಚಿತರಾದ ವೈಭವ್
15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇತ್ತೀಚಿನ ಐಪಿಎಲ್ ಮತ್ತು ಶ್ರೀಲಂಕಾ ವಿರುದ್ಧದ ಅಂಡರ್-19 ಪಂದ್ಯಗಳಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್ನ ಗಮನ ಸೆಳೆದಿದ್ದಾರೆ. ಆದರೆ ಐರ್ಲೆಂಡ್ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡದೆ ಬೆಂಚ್ ಕಾಯುವಂತೆ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯ ತರಬೇತುದಾರ ರವಿಶಾಸ್ತ್ರಿ ಸೇರಿದಂತೆ ಹಲವು ದಿಗ್ಗಜರು ಮ್ಯಾನೇಜ್ಮೆಂಟ್ನ ಈ ನಿರ್ಧಾರವನ್ನು ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ.
ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?
ಪತ್ರಿಕಾಗೋಷ್ಠಿಯಲ್ಲಿ ವರದಿಗಾರರು 'ವೈಭವ್ ಸೂರ್ಯವಂಶಿ ಅವರಂತಹ ಆಕ್ರಮಣಕಾರಿ ಬ್ಯಾಟರ್ಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೂ ಅವರಿಗೆ ತಂಡದಲ್ಲಿ ಯಾಕೆ ಸ್ಥಾನ ನೀಡುತ್ತಿಲ್ಲ?,' ಎಂದು ನಾಯಕ ಶ್ರೇಯಸ್ ಅಯ್ಯರ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅಯ್ಯರ್, 'ನಾನು ಯಾವುದೇ ಸುದ್ದಿಗಳನ್ನಾಗಲಿ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನಾಗಲಿ ಗಮನಿಸುತ್ತಿ. ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ತಂಡದ ಆಟಗಾರರು ಹೊರಗಿನ ಚರ್ಚೆಗಳು ಮತ್ತು ಸಾಮಾಜಿಕ ಜಾಲತಾಣಗಳ ವದಂತಿಗಳಿಂದ ದೂರವಿದ್ದು, ತಮ್ಮ ಆಟದ ಕಡೆಗೆ ಮಾತ್ರ ಗಮನ ಹರಿಸುತ್ತಿದ್ದಾರೆ,' ಎಂದು ಹೇಳಿದ್ದಾರೆ.
ನೆಟ್ಟಿಗರ ಆಕ್ರೋಶಕ್ಕೆ ಕಾರಣಗಳೇನು?
ಶ್ರೇಯಸ್ ಅಯ್ಯರ್ ಅವರ ಉದಾಸೀನದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ನಾಯಕನ ವಿರುದ್ಧ ಹೊಟ್ಟೆಕಿಚ್ಚು ಮತ್ತು ಅಸೂಯೆಯ ಆರೋಪ ಮಾಡುತ್ತಿದ್ದಾರೆ. '15 ವರ್ಷದ ಬಾಲಕನೊಬ್ಬ ತಮಗಿಂತ ಹೆಚ್ಚು ಪ್ರಚಾರ ಮತ್ತು ಪ್ರವಾರ ಪಡೆಯುತ್ತಿರುವುದನ್ನು ಸಹಿಸದೆ ಶ್ರೇಯಸ್ ಅಯ್ಯರ್ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದು ಅವರ ಹೊಟ್ಟೆ ಉರಿ ಮತ್ತು ಅಹಂಕಾರವನ್ನು ಎತ್ತಿತೋರಿಸುತ್ತದೆ,' ಎಂದು ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ.
'ತನ್ನದೇ ತಂಡದಲ್ಲಿರುವ ಒಬ್ಬ ಪ್ರಮುಖ ಆಟಗಾರನ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದಿರುವುದು ಒಬ್ಬ ಜವಾಬ್ದಾರಿಯುತ ನಾಯಕನ ಲಕ್ಷಣವಲ್ಲ.' ಎಂದು ಅಭಿಮಾನಿಗಳು ಟೀಕಿಸಿದ್ದಾರೆ. ಮತ್ತೊಬ್ಬರು 'ಯುವ ಆಟಗಾರರನ್ನ ಪ್ರೋತ್ಸಾಹಿಸುವ ಬದಲು, ಸೀನಿಯರ್ ಆಟಗಾರರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಯುವ ಪ್ರತಿಭೆಗಳನ್ನು ಮುನ್ನಲೆಗೆ ಬರಲು ಬಿಡುತ್ತಿಲ್ಲ,' ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಸದ್ಯ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ವಿರುದ್ಧ ನೆಗೆಟಿವ್ ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. ಅಲ್ಲದೆ, ಮುಂದಿನ ಪಂದ್ಯಗಳಲ್ಲಾದರೂ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿಗೆ ಪಾದಾರ್ಪಣೆ ಮಾಡಲು ಅವಕಾಶ ನೀಡಬೇಲು ಎಂದು ಒತ್ತಾಯಗಳು ಕೂಡ ಕೇಳಿಬರುತ್ತಿವೆ. ಒಟ್ಟಿನಲ್ಲಿ ವೈಭವ್ ಸೂರ್ಯವಂಶಿ ಬಗ್ಗೆ ಕೇಳಲಾದ ಪ್ರಶ್ನೆಗೆ ಅಯ್ಯರ್ ನೀಡಿದ ಉದಾಸೀನದ ಉತ್ತರ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications