ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ನೀಡಿದ ಹೇಳಿಕೆ ಭಾರಿ ವೈರಲ್
Vaibhav Sooryavashi: ದೆಹಲಿಯಯಲ್ಲಿ ಭಾನುವಾರ (ಸೆಪ್ಟೆಂಬರ್ 13) ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆದರೆ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಹಾಗೂ ಸಂಜು ಬಗ್ಗೆ ಬಗ್ಗೆ ನೀಡಿದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಯುವ ಆಟಗಾರ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಹೊರಗೆ ಕೂರಿಸಿ, ಅನುಭವಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಯಿತು. ಪಂದ್ಯ ಆರಂಭಕ್ಕೂ ಮುನ್ನ ಈ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ನೀಡಿದ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.

ನಾಯಕ ಶ್ರೇಯಸ್ ಅಯ್ಯರ್ ಹೇಳಿಕೆ ಭಾರಿ ವೈರಲ್
ಪಂದ್ಯ ಆರಂಭಕ್ಕೂ ಮುನ್ನ ನಾಯಕ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಹಾಗೂ ವೈಭವ್ ಸೂರ್ಯವಂಶಿ ನಡುವೆ ಆಯ್ಕೆ ಮಾಡುವುದು 'ತಂಡಕ್ಕೆ ಸಿಕ್ಕ ದೊಡ್ಡ ಆಸ್ತಿ' ಎಂದು ಹೇಳಿದ್ದರು. ಆದರೆ ಟಾಸ್ ವೇಳೆಯಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ 11ನಿಂದ ಹೊರಗಿಟ್ಟಿದ್ದಕ್ಕೆ ನಿಖರ ಮತ್ತು ಸ್ಪಷ್ಟ ಸಮರ್ಥನೆ ನೀಡಲು ನಾಯಕ ಶ್ರೇಯಸ್ ಅಯ್ಯರ್ ವಿಫಲರಾದರು ಅಂತಾ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಸಂಜು ಸ್ಯಾಮ್ಸನ್ ಪಡೆದ ಅವಕಾಶ ವ್ಯರ್ಥ
ಅನುಭವದ ಆಧಾರದ ಮೇಲೆ ಮತ್ತು 'ಬಲಗೈ-ಎಡಗೈ' ಕಾಂಬಿನೇಷನ್ ಹಾಗೂ ವಿಕೆಟ್ ಕೀಪಿಂಗ್ ಆಯ್ಕೆಗಾಗಿ ಸಂಜು ಸ್ಯಾಮ್ಸನ್‌ಗೆ ಆದ್ಯತೆ ನೀಡಲಾಯಿತು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದ ಸಂಜು, ಕೇವಲ 8 ಎಸೆತಗಳಲ್ಲಿ 10 ರನ್ ಗಳಿಸಿ ಅಜ್ಮತುಲ್ಲಾ ಒಮರ್‌ಜಾಯ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ನಡೆದರು.
ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ
15 ವರ್ಷದ ವೈಭವ್ ಸೂರ್ಯವಂಶಿ ಭಾರತ ಟಿ20 ತಂಡಕ್ಕೆ ಪ್ರವೇಶಿಸಿದ್ದು ಅವರಲ್ಲಿರುವ ನಿಸ್ಸೀಮ ಆಕ್ರಮಣಕಾರಿ ಆಟದ ಪ್ರತಿಭೆಯಿಂದಾಗಿ. ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಬೆಂಚ್ ಕಾಯಿಸಿದ್ದರೂ, ಜಿಂಬಾಬ್ವೆ ವಿರುದ್ಧ ಸಿಕ್ಕ ಅವಕಾಶದಲ್ಲಿ ಕೇವಲ 3 ಪಂದ್ಯಗಳಲ್ಲಿ 196.10 ರ ಅಸಾಧಾರಣ ಸ್ಟ್ರೈಕ್ ರೇಟ್‌ನಲ್ಲಿ 151 ರನ್ ಚಚ್ಚಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
ವೈಭವ್ ಸೂರ್ಯವಂಶಿ ಅವಕಾಶ ನೀಡುವ ಬಗ್ಗೆ ಚರ್ಚೆ
ಇನ್ನೂ ಟೀಮ್ ಇಂಡಿಯಾವು 2026ರ ಸಾಲಿನಲ್ಲಿ ಭಾರತ ತಂಡವು ಅಫ್ಘಾನಿಸ್ತಾನ, ಜಪಾನ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧ ಹಲವು ಟಿ20 ಸರಣಿಗಳು ಹಾಗೂ ಏಷ್ಯನ್ ಗೇಮ್ಸ್‌ನಂತಹ ದೊಡ್ಡ ಸರಣಿಗಳನ್ನು ಆಡಬೇಕಿದೆ. ಟಿ20 ಮಾದರಿಯಲ್ಲಿ ಹೊಸ ದೃಷ್ಟಿಕೋನ ಹಾಗೂ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ಭಾರತದ ಉದ್ದೇಶಕ್ಕೆ, ವೈಭವ್‌ನಂತಹ ಅದ್ಭುತ ಪ್ರತಿಭೆಯನ್ನು ಬೆಂಚ್‌ನಲ್ಲಿ ಕೂರಿಸಿ, 31 ವರ್ಷದ ಸಂಜುಗೆ ಪದೇ ಪದೇ ಅವಕಾಶ ನೀಡುವುದು ಸರಿಯಲ್ಲ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.
ಅಭಿಷೇಕ್-ವೈಭವ್ ಜೋಡಿ ಬಗ್ಗೆ ನೆಟ್ಟಿಗರು ಹೇಳೋದೇನು?
ತಂಡದ ಮತ್ತೊಬ್ಬ ಓಪನರ್ ಅಭಿಷೇಕ್ ಶರ್ಮಾ (82 ರನ್, 32 ಎಸೆತ) ಅಬ್ಬರಿಸುತ್ತಿರುವಾಗ, ಅವರೊಂದಿಗೆ ಇನ್ನೊಬ್ಬ ಯುವ ಆಕ್ರಮಣಕಾರಿ ಬ್ಯಾಟರ್ ವೈಭವ್ ಸೂರ್ಯವಂಶಿ ಜೋಡಿಯಾದರೆ ಅದು ಎದುರಾಳಿ ಬೌಲರ್‌ಗಳ ಮೇಲೆ ಇನ್ನಷ್ಟು ಹೆಚ್ಚು ಒತ್ತಡ ಹೇರಬಹುದು. ಆದರೆ ಸಂಜು ಸ್ಯಾಮ್ಸನ್ ಅವರಿಗೆ ಸಾಲು ಸಾಲು ಅವಕಾಶ ನೀಡುತ್ತಿರುವುದು ಟೀಮ್ ಇಂಡಿಯಾದ 'ಅಗ್ರೆಸಿವ್' ಕ್ರಿಕೆಟ್ ದೃಷ್ಟಿಕೋನವನ್ನು ಪೂರ್ಣಗೊಳಿಸುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.


Click it and Unblock the Notifications
