ಟಿ20 ವಿಶ್ವಕಪ್: ಬಾಂಗ್ಲಾದೇಶ ಬದಲಿಗೆ ಸ್ಕಾಟ್ಲೆಂಡ್: ಭಾರತದ ಪರ ಐಸಿಸಿ ಮತ - ಬಿಸಿಬಿಗೆ ಅಂತಿಮ ಎಚ್ಚರಿಕೆ
ಭಾರತ ಮತ್ತು ಬಾಂಗ್ಲಾದೇಶದ ನಡುವೆ ಇತ್ತೀಚಿನ ದಿನಗಳಲ್ಲಿ ರಾಜತಾಂತ್ರಿಕ ಸಂಬಂಧ ಉತ್ತಮವಾಗಿಲ್ಲ. ಕ್ರಿಕೆಟ್ ವಿಚಾರದಲ್ಲಿ ಬಾಂಗ್ಲಾದೇಶವೂ ಸಹ ನೆರೆಯ ಪಾಕಿಸ್ತಾನದಂತೆ ವರ್ತಿಸುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಪಂದ್ಯಗಳನ್ನು ಆಡುವುದಿಲ್ಲ ಎಂದು ಬಾಂಗ್ಲಾದೇಶವು 2026ರ ಟಿ- 20 ವಿಶ್ವಕಪ್ ಪಂದ್ಯಾವಳಿಯಿಂದಲೇ ಹೊರಗುಳಿಯುವ ಸಾಧ್ಯತೆ ಇದೆ. ಇದೀಗ ಭಾರತದ ಪರವಾಗಿ 14 ಮಂಡಳಿಗಳು ನಿಂತಿದ್ದು, ಬಾಂಗ್ಲಾದೇಶಕ್ಕೆ ಐಸಿಸಿ 24 ಗಂಟೆ ಗಡುವು ನೀಡಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಮನವಿ ಮಾಡಿತ್ತು. ಈ ಮನವಿಯನ್ನು ಐಸಿಸಿ ತಿರಸ್ಕರಿಸಿದ್ದು, ಬಾಂಗ್ಲಾದೇಶವನ್ನು ವಿಶ್ವಕಪ್‌ನಿಂದ ಹೊರಹಾಕುವ ಎಚ್ಚರಿಕೆಯನ್ನೂ ಕೊಡಲಾಗಿದೆ. 2026ರ ಟಿ - 20 ವಿಶ್ವಕಪ್ ಸಮಯದಲ್ಲಿ ಭಾರತದಲ್ಲಿ ಆಯೋಜಿಸಲಾದ ಪಂದ್ಯಗಳಲ್ಲಿ ಭಾಗವಹಿಸಲು ಬಾಂಗ್ಲಾದೇಶವು ನಿರಾಕಿಸುತ್ತಿದೆ.

ಇದೇ ಮುಂದುವರಿದರೆ ಪಂದ್ಯಾವಳಿಯಿಂದ ಹೊರಗುಳಿಸಲಾಗುವುದು ಮತ್ತು ಬಾಂಗ್ಲಾದೇಶದ ಬದಲಿಗೆ ಮತ್ತೊಂದು ದೇಶದ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಐಸಿಸಿ ಹೇಳಿದೆ. ಈ ವಿಚಾರವನ್ನು ಬಾಂಗ್ಲಾದೇಶದ ಸರ್ಕಾರಕ್ಕೆ ತಿಳಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಗೆ ನಿರ್ದೇಶಿಸಿದೆ.
ಇನ್ನು ಬುಧವಾರ (ಜನವರಿ 21) ನಡೆದ ಐಸಿಸಿ ಮಂಡಳಿಯ ಮತದಾನದ ನಂತರ ಈ ದೃಢ ನಿಲುವು ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಮಂಡಳಿಗಳು ಈವೆಂಟ್‌ನ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಲು ಬದಲಿ ಆಯ್ಕೆಯನ್ನು ಬೆಂಬಲಿಸಿದವು. ಅಂದರೆ ಬಾಂಗ್ಲಾದೇಶವನ್ನೇ ಕೈಬಿಡುವ ಅಥವಾ ಪರ್ಯಾಯ ತಂಡವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹಲವು ದೇಶಗಳ ಕ್ರಿಕೆಟ್ ಮಂಡಳಿ ಸಹಮತ ಸೂಚಿಸಿವೆ.
ಬಾಂಗ್ಲಾದೇಶ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳ ಮೇಲೆ ಪರಿಣಾಮ ಬೀರುವ ರಾಜಕೀಯ ಉದ್ವಿಗ್ನತೆಯ ಮಧ್ಯೆ, ಪಂದ್ಯಾವಳಿಗಾಗಿ ಭಾರತಕ್ಕೆ ಪ್ರಯಾಣಿಸುವ ನಿರ್ಧಾರವನ್ನು ಸ್ಪಷ್ಟಪಡಿಸಲು ಬಿಸಿಬಿಗೆ ಅಂತಿಮ 24 ಗಂಟೆಗಳನ್ನು ಕೊಡಲಾಗಿದೆ. ಈಗಾಗಲೇ ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಗೆ ಗಡುವು ವಿಧಿಸಲಾಗಿತ್ತು. ಈ ಗಡುವನ್ನು ಇಂದು ವಿಸ್ತರಿಸಲಾಗಿದೆ.
ಬಾಂಗ್ಲಾದೇಶ ಬದಲಿಗೆ ಸ್ಕಾಟ್ಲೆಂಡ್
ಜುಲೈ 2025ರಲ್ಲಿ ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್ ಯುರೋಪ್ ಪ್ರದೇಶ ಫೈನಲ್ ಮೂಲಕ ಅರ್ಹತೆಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಸ್ಕಾಟ್ಲೆಂಡ್ ಗ್ರೂಪ್ ಸಿ ನಲ್ಲಿ ಬಾಂಗ್ಲಾದೇಶದ ಸ್ಥಾನವನ್ನು ಪಡೆಯುವ ಮುಂಚೂಣಿಯಲ್ಲಿದೆ. ಇಟಲಿ ವಿರುದ್ಧ ಸೋಲು ಮತ್ತು ಜೆರ್ಸಿ ವಿರುದ್ಧ ನಾಟಕೀಯ ಒಂದು ವಿಕೆಟ್ ಸೋಲಿನ ನಂತರ ಅವರು ಅಗ್ರ ಸ್ಥಾನಗಳಿಂದ ಹೊರಗುಳಿದಿದ್ದರು.
ಫೆಬ್ರವರಿ - ಜೂನ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುವ 2026ರ ಟಿ 20 ವಿಶ್ವಕಪ್‌ನಲ್ಲಿ ವಿಶ್ವದ 20 ತಂಡಗಳು ಇರಲಿವೆ. ಇದರಲ್ಲಿ "ಗ್ರೂಪ್ ಸಿ"ಯಲ್ಲಿ ಬಾಂಗ್ಲಾದೇಶದೊಂದಿಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಶಕ್ತಿಶಾಲಿ ತಂಡಗಳನ್ನು ಒಳಗೊಂಡಿತ್ತು. ಸ್ಕಾಟ್ಲೆಂಡ್ ಸೇರ್ಪಡೆಯಾದರೆ ಆ ತಂಡವನ್ನು ಗ್ರೂಪ್ ಸಿಯಲ್ಲಿ ಸೇರಿಸುವ ಸಾಧ್ಯತೆ ಇದೆ.
ಮುಂದುವರಿದು ಟಿ 20 ವಿಶ್ವಕಪ್‌ಗೆ ಮುನ್ನ ಬಾಂಗ್ಲಾದೇಶದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಐಸಿಸಿ ಬುಧವಾರ ಮಂಡಳಿಯ ಸಭೆ ನಡೆಸಿತು. ಭಾರತೀಯ ನೆಲದಲ್ಲಿ ಆಡದಿರಲು ಬಿಸಿಬಿ ಒತ್ತಡ ಹೇರಲು ಮುಂದಾಗಿತ್ತು. ಆದರೆ ಬಾಂಗ್ಲಾದೇಶದ ಮನವಿಗೆ ಯಾರೂ ಕ್ಯಾರೇ ಎಂದಿಲ್ಲ. ಬುಧವಾರ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಮತ್ತು ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ ಸೇರಿದಂತೆ ಹಲವಾರು ಮಂಡಳಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಐರ್ಲೆಂಡ್, ಜಿಂಬಾಬ್ವೆ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನ ಪ್ರತಿನಿಧಿಗಳು ಐಸಿಸಿಯ ಸಿಇಒ ಸಂಜೋಗ್ ಗುಪ್ತಾ, ಉಪ ಅಧ್ಯಕ್ಷ ಇಮ್ರಾನ್ ಖವಾಜಾ ಮತ್ತು ಇತರರು ಹಾಜರಿದ್ದರು.












Click it and Unblock the Notifications