ಯುದ್ಧದ ನಡುವೆಯೂ ಸರ್ವಧರ್ಮ ಸಮನ್ವಯತೆ ಸಂದೇಶ: ನಮ್ ಭಾರತ ಅಂದ್ರೆ ಹೀಗೆ ಅಂತಾ ವಿಶ್ವಕ್ಕೆ ಸಾರಿದ ಸಂಜು ಸ್ಯಾಮ್ಸನ್
Sanju samson: ಟಿ20 ವಿಶ್ವಕಪ್ 2026 ಸೂಪರ್ 8 ಹಂತದ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾ ಗೆಲುವಿಗೆ ಮಹತ್ವದ ಪಾತ್ರವಹಿಸಿದರು. ಅವರು ಕೇವಲ ಬ್ಯಾಟಿಂಗ್‌ನಿಂದ ಮಾತ್ರವಲ್ಲದೆ ತಮ್ಮ ನಡತೆಯಿಂದಲೂ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪಂದ್ಯ ಮುಗಿದ ಬಳಿಕ ಅವರು ತೋರಿದ ಭಕ್ತಿ ಮತ್ತು ಗೌರವದ ನಡೆ ಈಗ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸ್ ಬಾರಿಸುವ ಮೂಲಕ ಅಜೇಯ 97 ರನ್ ಸಿಡಿಸಿ ಭಾರತವನ್ನು ಸೆಮಿಫೈನಲ್‌ಗೆ ಕೊಂಡೊಯ್ದರು. ಪಂದ್ಯ ಗೆಲ್ಲಿಸಿಕೊಟ್ಟ ಬಳಿಕ ಸಂಜು ಸ್ಯಾಮ್ಸನ್ ಮೈದಾನದಲ್ಲೇ ಮಂಡಿಯೂರಿ ದೇವರಿಗೆ ನಮನ ಸಲ್ಲಿಸಿದರು. ವಿಶೇಷ ಅಂದರೆ, ಅವರು ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಗಳ (ಸರ್ವಧರ್ಮ) ದೇವರಿಗೆ ವಂದಿಸುವ ಮೂಲಕ ನಮ್ ಭಾರತದ ಅಂದ್ರೆ ಹೀಗೆ ಅಂತಾ ಜಗತ್ತಿಗೆ ಸಾರಿದ್ದಾರೆ.

ಕೇರಳದ ತಿರುವನಂತಪುರಂ ಮೂಲದವರಾದ ಸಂಜು ಸ್ಯಾಮ್ಸನ್, ಪಂದ್ಯ ಗೆಲ್ಲಿಸಿದ ಸಂಭ್ರಮದ ನಡುವೆಯೂ ಶಾಂತವಾಗಿ ಮೈದಾನದಲ್ಲಿ ಬ್ಯಾಟ್ ಹಿಡಿದು ಕುಳಿತು ಪ್ರಾರ್ಥನೆ ಮಾಡಿದರು. ಮೊದಲು ಕೈಮುಗಿದು ಹಿಂದೂ ಧರ್ಮದ ಸಂಪ್ರದಾಯದಂತೆ ನಮಿಸಿದರು. ನಂತರ ಕ್ರಿಶ್ಚಿಯನ್ ಧರ್ಮದ ಶೈಲಿಯಲ್ಲಿ ಹಾಗೂ ಅಂತಿಮವಾಗಿ ಇಸ್ಲಾಂ ಧರ್ಮದ ಸಂಪ್ರದಾಯದಂತೆ ಪ್ರಾರ್ಥಿಸಿ ಕೃತಜ್ಞತೆ ಸಲ್ಲಿಸಿದರು.
ಸಂಜು ಸ್ಯಾಮ್ಸನ್‌ಗೆ ಮೆಚ್ಚುಗೆಗಳ ಸುರಿಮಳೆ
ಸಂಜು ಅವರ ಈ ನಡೆಯನ್ನು ಕಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ. "ಸಂಜು ಕೇವಲ ಒಬ್ಬ ಉತ್ತಮ ಕ್ರಿಕೆಟಿಗ ಮಾತ್ರವಲ್ಲ, ಒಬ್ಬ ಶ್ರೇಷ್ಠ ವ್ಯಕ್ತಿ ಕೂಡ ಹೌದು. ಅವರು ಭಾರತದ ನಿಜವಾದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದಾರೆ," ಎಂದು ನೆಟ್ಟಿಗರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಧರ್ಮ-ಧರ್ಮ ಎಂದು ಕಿತ್ತಾಡುವವರಿಗೆ ಇಂದೊಂದು ಸಮನ್ವಯತೆಯ ಸಂದೇಶ ಅಂತಲೂ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ನಡುವೆ ಕಲಹ ಸೃಷ್ಟಿಸಿ ದೂರ ನಿಂತು ಎಂಜಾಯ್ ಮಾಡುವವರು ತುಂಬಾ ಜನ ಇದ್ದಾರೆ. ಇಂತಹವರ ನಡುವೆಯೂ ಒಬ್ಬ ಒಳ್ಳೆಯ ವ್ಯಕ್ತಿಗಳು ಇರುತ್ತಾರೆ ಎನ್ನುವುದಕ್ಕೆ ಸಂಜು ಸ್ಯಾಮ್ಸನ್ ಅವರ ಈ ಮಹತ್ವದ ನಡೆಯೇ ಪ್ರಮಖ ಸಾಕ್ಷಿ. ಕ್ರಿಕೆಟ್ ಮೈದಾನ ಅಂದಮೇಲೆ ಸಾಮಾನ್ಯವಾಗಿ ಪಂದ್ಯ ವೀಕ್ಷಣೆ ಮಾಡಲು ಹಲವು ಧರ್ಮದವರು ಬಂದಿರುತ್ತಾರೆ. ಹಾಗೆಯೇ ನಿನ್ನೆ ನಡೆದ ಪಂದ್ಯದಲ್ಲೂ ಕೂಡ ಸರ್ವಧರ್ಮದವರಿದ್ದು, ಸಂಜು ನಡೆಗೆ ಅವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ
ಕಳೆದ ಹಲವು ಪಂದ್ಯಗಳಿಂದ ಬೆಂಚ್ ಕಾಯುತ್ತಿದ್ದರೂ, ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ ಸ್ಯಾಮ್ಸನ್, ಈಗ ಟೀಂ ಇಂಡಿಯಾದ 'ಹೀರೋ' ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಅವರು ತಮ್ಮ ಸಾಮರ್ಥ್ಯ ಏನೆಂಬುದನ್ನು ಕೋಚ್ ಗೌತಮ್ ಗಂಭೀರ್ ಅವರಿಗೆ ತೋರಿಕೊಟ್ಟಿದ್ದಾರೆ.
ಸಂಜು ಸ್ಯಾಮ್ಸನ್ ಅವಕಾಶ ಸಿಗದೇ ಬೆಂಚ್ ಕಾದಿದ್ದು, ಬಳಿಕ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡರು. ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತದ ಪರ ಸಂಜು ಆರಂಭಿಕರಾಗಿ ಕಣಕ್ಕಿಳಿದರು. ಆದರೆ, ಇವರಿಗೆ ಉತ್ತಮ ಜೊತೆಯಾಟ ಆಡಬಲ್ಲ ಆಟಗಾರ ಸಿಗದಂತಾಯಿತು. ಬಂದವರೆಲ್ಲ ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ತೆರಳಿದರು. ಆದರೆ, ಸಂಜು ಮಾತ್ರ ಎದೆಗುಂದದೆ ಕೊನೆವರೆಗೂ ಕ್ರೀಸ್‌ನಲ್ಲಿ ನಿಂತು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾವು ಸೆಮಿಫೈನಲ್‌ಗೆ ಪ್ರವೇಶ ಮಾಡಿತು.












Click it and Unblock the Notifications