Sachin Tendulkar: ವೈಭವ್ ಸೂರ್ಯವಂಶಿಗೆ ನಾಯಕತ್ವದ ಹೊಣೆ ಬಗ್ಗೆ ಕ್ರಿಕೆಟ್ ದೇವರ ಮಹತ್ವದ ಸಲಹೆ
Sachin Tendulkar: ಭಾರತೀಯ ಕ್ರಿಕೆಟ್‌ನ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಕಿರಿಯ ವಯಸ್ಸಿನಲ್ಲೇ ನಾಯಕತ್ವದ ಹೊಣೆ ನೀಡುತ್ತಿರುವ ಕುರಿತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಂತದಲ್ಲಿ ಅವರಿಗೆ ಹೆಚ್ಚಿನ ಒತ್ತಡ ಹೇರಬಾರದು ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ಇನ್ನೂ ಹಲವು ಮಹತ್ವದ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ರೆಡ್ಡಿಟ್ (Reddit)ನಲ್ಲಿ ಅಭಿಮಾನಿಗಳೊಂದಿಗೆ ನಡೆದ ಸಂವಾದದಲ್ಲಿ, 'ಕೇವಲ 15ನೇ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿಗೆ ನಾಯಕತ್ವ/ಉಪನಾಯಕತ್ವದ ಜವಾಬ್ದಾರಿ ನೀಡುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?,' ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿನ್ ತೆಂಡೂಲ್ಕರ್ ಮಹತ್ವದ ಹೇಳಿಕೆ ನೀಡಿದ್ದಾರೆ. 'ದುಲೀಪ್ ಟ್ರೋಫಿಯಂತಹ ದೇಶಿಯ ಟೂರ್ನಿಯಲ್ಲಿ ಈಸ್ಟ್ ಝೋನ್ ತಂಡಕ್ಕೆ ಅವರಿಗೆ ಉಪನಾಯಕತ್ವ ನೀಡಿದ್ದು ತೀರಾ ಆತುರದ ನಿರ್ಧಾರ ಎನಿಸುತ್ತದೆ,' ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಮಹತ್ವದ ಹೇಳಿಕೆ
ಯುವ ಆಟಗಾರನಿಗೆ ಮೊದಲು ಹೆಚ್ಚಿನ ರೆಡ್-ಬಾಲ್ (ಟೆಸ್ಟ್/ದೀರ್ಘಾವಧಿ) ಪಂದ್ಯಗಳನ್ನು ಆಡಲು ಅವಕಾಶ ನೀಡಬೇಕು. ಅವರ ಬೆಳವಣಿಗೆಯು ಹಂತ-ಹಂತವಾಗಿ ನಡೆಯಬೇಕೇ ಹೊರತು, ತಕ್ಷಣಕ್ಕೆ ನಾಯಕತ್ವದ ಜವಾಬ್ದಾರಿಗಳನ್ನು ಅವರ ಹೆಗಲಿಗೆ ಏರಿಸಬಾರದು ಎಂದು ಕ್ರಿಕೆಟ್ ದೇವರು ಅಂತಲೇ ಹೆಸರಾಗಿರುವ ಸಚಿನ್ ತೆಂಡೂಲ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಗಮನ ಸೆಳೆದ ವೈಭವ್
ವೈಭವ್ ಸೂರ್ಯವಂಶಿ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಯುವ ಆಟಗಾರರಲ್ಲೊಬ್ಬರು. ಕೇವಲ 15ನೇ ವಯಸ್ಸಿನಲ್ಲೇ ಹಿರಿಯರ ಕ್ರಿಕೆಟ್ ಹಂತದಲ್ಲಿ ಮಿಂಚುತ್ತಿರುವ ಇವರನ್ನು ರವಿಚಂದ್ರನ್ ಅಶ್ವಿನ್ ಅವರಂತಹ ಹಿರಿಯ ಆಟಗಾರರು 'ಅಪರೂಪದ ಪ್ರತಿಭೆ' ಎಂದು ಬಣ್ಣಿಸಿದ್ದಾರೆ. ಐಪಿಎಲ್ ಹಾಗೂ ದೇಶಿಯ ಕ್ರಿಕೆಟ್‌ನಲ್ಲಿ ಅವರು ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನವು ಎಲ್ಲರ ಗಮನ ಸೆಳೆದಿದೆ.
ಗೌತಮ್ ಗಂಭೀರ್ ಸ್ಪಷ್ಟನೆ ಏನು?
ಮತ್ತೊಂದೆಡೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು, ವೈಭವ್ ಸೂರ್ಯವಂಶಿಗೆ ಭಾರತೀಯ ಹಿರಿಯರ ಟ್ವೆಂಟಿ-20 ತಂಡದ ಪ್ಲೇಯಿಂಗ್ 11ನಲ್ಲಿ ತಕ್ಷಣವೇ ಅವಕಾಶ ಸಿಗದಿರುವ ಕುರಿತು ಮಾತನಾಡಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಭಾರತ ತಂಡವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕೋಚ್ ಆಗಿ ಪ್ರತಿಯೊಬ್ಬರನ್ನೂ ಸಂತಸಗೊಳಿಸುವುದು ನನ್ನ ಕೆಲಸವಲ್ಲ. ಜನಪ್ರಿಯ ನಿರ್ಧಾರಗಳಿಗಿಂತ ತಂಡಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದು ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ. ನಿರಂತರವಾಗಿ ಪ್ರದರ್ಶನ ನೀಡಿದ ಆಟಗಾರರಿಗೆ ಹೆಚ್ಚಿನ ಅವಕಾಶ ಮತ್ತು ಭದ್ರತೆ ನೀಡುವುದು ಮುಖ್ಯ. ಪ್ರತಿಭಾವಂತ ಯುವ ಆಟಗಾರರು ಬಂದರೂ, ಹಿರಿಯರಿಗೆ ಸೂಕ್ತ ಅವಕಾಶ ನೀಡುವ ಸಂಸ್ಕೃತಿಯನ್ನು ಕಾಯ್ದುಕೊಳ್ಳಲಾಗುವುದು ಅಂತಲೂ ಹೇಳಿದ್ದಾರೆ.
ಸಚಿನ್ ಹಂಚಿಕೊಂಡ ಇತರ ಪ್ರಮುಖ ವಿಷಯಗಳು
ಇದೇ ಸಂವಾದದಲ್ಲಿ ಸಚಿನ್ ತೆಂಡೂಲ್ಕರ್ ಅವರು ಪ್ರಸ್ತುತ ತಮ್ಮ ನೆಚ್ಚಿನ ವಿದೇಶಿ ಬ್ಯಾಟರ್‌ಗಳಾಗಿ ಜೋ ರೂಟ್, ಹ್ಯಾರಿ ಬ್ರೂಕ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಹೆಸರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸಾರ್ವಕಾಲಿಕ ರನ್‌ಗಳ ದಾಖಲೆಯನ್ನು ಮುರಿಯಲು ಹತ್ತಿರವಾಗುತ್ತಿರುವ ಜೋ ರೂಟ್ ಅವರ ಶ್ರೇಷ್ಠತೆಯನ್ನು ಸಚಿನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ವೈಭವ್ ಸೂರ್ಯವಂಶಿಗೆ ದೊಡ್ಡ ಜವಾಬ್ದಾರಿ ನೀಡುವ ಕುರಿತು ಸಚಿನ್ ನೀಡಿರುವ ಹೇಳಿಕೆ ಇದೀಗ ಭಾರಿ ವೈರಲ್ ಆಗುತ್ತಿದೆ.
ಆರ್.ಅಶ್ವಿನ್ ಹೇಳಿದ್ದೇನು?
15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮೇಲೆ ತಕ್ಷಣವೇ ಅತಿಯಾದ ನಿರೀಕ್ಷೆಗಳ ಭಾರ ಹೇರಬಾರದು ಎಂದು ಅಶ್ವಿನ್ ಕ್ರೀಡಾಭಿಮಾನಿಗಳಲ್ಲಿ ಮತ್ತು ವಿಶ್ಲೇಷಕರಲ್ಲಿ ಆರ್.ಅಶ್ವಿನ್ ಅವರು ವಿನಂತಿಸಿಕೊಂಡಿದ್ದಾರೆ. 'ವೈಭವ್ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್‌ನ ದೊಡ್ಡ ಸ್ಟಾರ್ ಆಗುವುದರಲ್ಲಿ ಅನುಮಾನವಿಲ್ಲ. ಆದರೆ ಈಗಲೇ ಅವರ ಕುರಿತು ದೊಡ್ಡ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ. ಅವರು ಯಾವುದೇ ಒತ್ತಡವಿಲ್ಲದೆ ತಮ್ಮ ಕ್ರಿಕೆಟ್ ಅನ್ನು ಆನಂದಿಸಲು ಬಿಡಬೇಕು,' ಎಂದು ಇತ್ತೀಚೆಗಷ್ಟೇ ಹೇಳಿದ್ದರು.


Click it and Unblock the Notifications
