RCB: ಆರ್ಸಿಬಿ ಯಾಕೆ ಕಪ್ ಗೆದ್ದಿಲ್ಲ; ರಾಬಿನ್ ಉತ್ತಪ್ಪ ಕೊಟ್ಟ ಕಾರಣಗಳಿವು
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐಪಿಎಲ್‌ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಒಮ್ಮೆಯೂ ಕಪ್ ಗೆಲ್ಲದ ತಂಡವಾಗಿದೆ. ಪ್ರತಿ ಬಾರಿ ಈ ಸಲ ಕಪ್ ನಮ್ದೇ ಎಂದು ಅಭಿಮಾನಿಗಳು ಬೆಂಬಲ ಕೊಟ್ಟರೂ, ಆರ್ಸಿಬಿ ಪ್ರದರ್ಶನ ಮಾತ್ರ ಹೀನಾಯವಾಗಿದೆ.
ಈ ಬಾರಿ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಆರ್ಸಿಬಿ ಆಡಿರುವ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದ್ದು, ಏಳು ಪಂದ್ಯಗಳಲ್ಲಿ ಸೋಲುಕಂಡಿದೆ. ಪ್ಲೇ ಆಫ್ ಕನಸು ಕಮರಿದ್ದು, ಮುಂದಿನ ಪಂದ್ಯಗಳನ್ನು ನೆಪಮಾತ್ರಕ್ಕೆ ಆಡಲಿದೆ.

ಹಾಗಾದರೆ ಆರ್ಸಿಬಿ ಕಪ್ ಗೆಲ್ಲಲು ಇರುವ ಕೊರತೆಗಳೇನು, ಕಪ್ ಗೆಲ್ಲಬೇಕಾದ್ರೆ ಅವರು ಮಾಡಬೇಕಾದ ಕೆಲಸವೇನು? ಕರ್ನಾಟಕದವರೇ ಆದ, ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಈ ಬಗ್ಗೆ ಮಾತನಾಡಿದ್ದಾರೆ. ವೈಜ್ಞಾನಿಕವಾಗಿ ಹಲವು ಕಾರಣಗಳನ್ನು ನೀಡಿರುವ ಅವರು, ಆರ್ಸಿಬಿ ಮಾಡುತ್ತಿರುವ ಎಡವಟ್ಟುಗಳನ್ನು ವಿವರಿಸಿದ್ದಾರೆ.
ಬೀರ್ ಬೈಸೆಪ್ಸ್ ಎನ್ನುವ ಯೂಟ್ಯೂಬ್ ವಾಹಿನಿಯಲ್ಲಿ ದಿ ರಣವೀರ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ರಾಬಿನ್ ಉತ್ತಪ್ಪ, ಕ್ರಿಕೆಟ್ ಜಗತ್ತಿನ ಒಳಹೊರಗನ್ನು ಬಿಚ್ಚಿಟ್ಟಿದ್ದಾರೆ.
ತವರಿನ ಅಂಗಳದಲ್ಲೇ ವೈಫಲ್ಯ
ಆರ್ಸಿಬಿ ತಂಡದ ವೈಫಲ್ಯಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ. ಮೊದಲನೆಯದಾಗಿ ಯಾವುದೇ ತಂಡ ಸುಲಭವಾಗಿ ಪ್ಲೇ ಆಫ್ ತಲುಪಲು ತವರಿನಲ್ಲಿ ನಡೆಯುವ ಪಂದ್ಯಗಳನ್ನು ಗೆಲ್ಲಬೇಕು, ಪ್ರತಿ ತಂಡ ತವರಿನಲ್ಲಿ ಏಳು ಪಂದ್ಯಗಳನ್ನು ಆಡುತ್ತದೆ, ಇದರಲ್ಲಿ ಕನಿಷ್ಠ 5 ಅಥವಾ 6 ಪಂದ್ಯಗಳನ್ನು ಗೆದ್ದರೆ, ಹೊರಗಿನ ಅಂಗಳದಲ್ಲಿ ಆಡುವ ಏಳು ಪಂದ್ಯಗಳಲ್ಲಿ ಕನಿಷ್ಠ 2 ಅಥವಾ 3 ಪಂದ್ಯಗಳನ್ನು ಗೆದ್ದರೂ ಸುಲಭವಾಗಿ ಪ್ಲೇ ಆಫ್ ತಲುಪಬಹುದು.
ಆದರೆ ಆರ್ಸಿಬಿ ತಂಡ ಚಿನ್ನಸ್ವಾಮಿಯಲ್ಲಿ ಗೆಲುವಿಗಿಂತ ಸೋಲಿನ ಪ್ರಮಾಣವೇ ಜಾಸ್ತಿ ಇದೆ. ಆರ್ಸಿಬಿ ತಂಡಕ್ಕೆ ಯಾವಾಗಿಂದಲೂ ಬೌಲಿಂಗ್ ಸಮಸ್ಯೆ ಇದೆ, ಉತ್ತಮ ಬೌಲರ್ ಗಳನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡು, ಅದಕ್ಕೆ ತಕ್ಕಂತೆ ಪಿಚ್‌ಗಳನ್ನು ಸಿದ್ದವಾಗಿಸಿಕೊಂಡು ಇಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲಬೇಕು ಎಂದು ಹೇಳಿದ್ದಾರೆ.
ಆರ್ಸಿಬಿ ತಂಡದ ಮತ್ತೊಂದು ಸಮಸ್ಯೆ ಆಟಗಾರರನ್ನು ನಂಬದೇ ಇರುವುದು. ವಿರಾಟ್ ಕೊಹ್ಲಿ ಆರ್ಸಿಬಿ ತಂಡಕ್ಕೆ 7642 ರನ್ ಗಳಿಸಿದ್ದಾರೆ, ಅವರ ಬಳಿಕ ರಾಹುಲ್ ದ್ರಾವಿಡ್ 898 ರನ್ ಗಳಿಸಿದ್ದು ಆರ್ಸಿಬಿ ತಂಡಕ್ಕೆ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಆಗಿದ್ದಾರೆ.
ಆರ್ಸಿಬಿ ಮ್ಯಾನೇಜ್‌ಮೆಂಟ್ ಭಾರತೀಯ ಕ್ರಿಕೆಟಿಗರ ಮೇಲೆ ನಂಬಿಕೆ ಇಡಲ್ಲ, ಒಂದು ವರ್ಷ ಆಡಲಿಲ್ಲ ಎಂದರೆ ತಂಡದಿಂದ ಬಿಡುಗಡೆ ಮಾಡುತ್ತಾರೆ. ನನ್ನನ್ನು ಸೇರಿದಂತೆ ಸ್ಥಳೀಯ ಆಟಗಾರರಾದ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ರಾಹುಲ್ ದ್ರಾವಿಡ್ ಎಲ್ಲರನ್ನೂ ತಂಡದಿಂದ ಬಿಟ್ಟಿದೆ. ಇದು ಕೂಡ ತಂಡದ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದರು.
ತಂಡದಲ್ಲಿ ಟಾಪ್ ಆರ್ಡರ್ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ ಆದರೆ ತಂಡಕ್ಕೆ ಉತ್ತಮ ಫಿನಿಶರ್ ಹುಡುಕುವಲ್ಲಿ ವಿಫಲವಾಗಿದೆ. ಈ ವರ್ಷ ಆಡಿರುವ ಏಳು ಪಂದ್ಯಗಳಲ್ಲಿ 20 ಆಟಗಾರರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಅರ್ಥ ಒಂದೆರಡು ಪಂದ್ಯ ಆಡದಿದ್ದರೆ ಅವರನ್ನು ತಂಡದಿಂದ ಹೊರಗಿಡಲಾಗುತ್ತಿದೆ. ತಂಡದ ಆಟಗಾರರಿಗೆ ಮ್ಯಾನೇಜ್‌ಮೆಂಟ್ ನಂಬಿಕೆ ಕೊಡಬೇಕು. ಆದರೆ ಆ ಕೆಲಸ ಆಗುತ್ತಿಲ್ಲ ಎಂದರು.
ಚಹಾಲ್ ಅಂತ ಬೌಲರ್ ಅನ್ನು ತಂಡದಿಂದ ಬಿಟ್ಟದ್ದು ಇವರು ಮಾಡಿದ ದೊಡ್ಡ ಪ್ರಮಾದ, ನಾನಾದರೆ ಅವರನ್ನು ಮೊದಲು ವಾಪಸ್ ತಂಡಕ್ಕೆ ಕರೆತರುತ್ತೇನೆ. ಹರ್ಷಲ್ ಪಟೇಲ್ ಕೂಡ ಬೆಂಗಳೂರು ಪಿಚ್‌ಗೆ ಸರಿಯಾದ ಆಯ್ಕೆ ಎಂದಿದ್ದಾರೆ.
ಅಭಿಮಾನಿಗಳಿಗಾಗಿಯಾದರೂ ಆರ್ಸಿಬಿ ಕಪ್ ಗೆಲ್ಲಲೇಬೇಕು, ಆರ್ಸಿಬಿ ನನ್ನ ನೆಚ್ಚಿನ ತಂಡ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.












Click it and Unblock the Notifications