Rishabh Pant: ದೆಹಲಿ ತಂಡಕ್ಕೆ ಮರಳಿದ ರಿಷಬ್ ಪಂತ್
ಭಾರತ ತಂಡದ ಸ್ಟಾರ್ ಬ್ಯಾಟರ್ ರಿಷಬ್ ಪಂತ್ ಮತ್ತೆ ದೆಹಲಿ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಲಕ್ನೋ ಸೂಪರ್ ಜೈಂಟ್ಸ್‌ಗೆ 27 ಕೋಟಿ ರೂಪಾಯಿಗೆ ಹರಾಜಾದ ರಿಷಬ್ ಪಂತ್ ಮತ್ತೆ ವಾಪಸ್ ಬಂದ್ರಾ ಅನ್ನೋ ಅನುಮಾನ ಬೇಡ, ಈ ಬಾರಿ ರಿಷಬ್ ಪಂತ್ ಆಡಲು ಸಜ್ಜಾಗಿರುವುದು ರಣಜಿ ಟ್ರೋಫಿಯಲ್ಲಿ ದೆಹಲಿ ತಂಡಕ್ಕಾಗಿ!.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿದ ಬಳಿಕ ಬಿಸಿಸಿಐ ಆಟಗಾರರ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಭಾರತ ತಂಡದಲ್ಲಿ ಆಡುವ ಆಟಗಾರರು ಇನ್ನು ಮುಂದೆ ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುವುದು ಕಡ್ಡಾಯವಾಗಲಿದೆ. ಭಾರತ ತಂಡದಲ್ಲಿ ಅವಕಾಶ ಸಿಕ್ಕ ಬಳಿಕ ಅನೇಕ ಆಟಗಾರರು ರಣಜಿ ಆಡುವುದನ್ನೇ ಬಿಟ್ಟಿದ್ದಾರೆ, ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ಟೀಕೆಗಳು ಕೇಳಿ ಬಂದಿವೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಸೋಲಿನ ಬಳಿಕ ಬಿಸಿಸಿಐ ಆಟಗಾರರಿಗೆ ಕಠಿಣ ಸೂಚನೆ ನೀಡಿದ ಬೆನ್ನಲ್ಲೇ ಸ್ಟಾರ್ ಆಟಗಾರರು ಕೂಡ ರಣಜಿ ಆಡಲು ಸಜ್ಜಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಮುಂಬೈ ತಂಡದ ಜೊತೆ ಅಭ್ಯಾಸ ಆರಂಭಿಸಿದ್ದು, ಅವರು ಕೂಡ ರಣಜಿ ಟ್ರೋಫಿ ಆಡುತ್ತಾರೆ ಎನ್ನುವ ಸೂಚನೆ ಸಿಕ್ಕಿದೆ. ಇದೀಗ ರಿಷಬ್ ಪಂತ್ ಕೂಡ ದೆಹಲಿ ತಂಡಕ್ಕಾಗಿ ಆಡಲು ಸಜ್ಜಾಗಿದ್ದಾರೆ.
7 ವರ್ಷಗಳ ಬಳಿಕ ದೆಹಲಿ ತಂಡಕ್ಕೆ ವಾಪಸ್
ಜನವರಿ 23ರಂದು ನಡೆಯಲಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ರಿಷಬ್ ಪಂತ್ ಆಡುವುದು ಖಚಿತವಾಗಿದೆ. ವಿರಾಟ್ ಕೊಹ್ಲಿ ಕೂಡ ದೆಹಲಿ ತಂಡವನ್ನು ಪ್ರತಿನಿಧಿಸುತ್ತಿದ್ದು ಅವರು ಆಡುವ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ದೆಹಲಿಯ ಮುಂದಿನ ಸುತ್ತಿನ ರಣಜಿ ಟ್ರೋಫಿ ಪಂದ್ಯಗಳಿಗೆ 41 ಜನರ ಸಂಭಾವ್ಯ ಆಟಗಾರರ ಪಟ್ಟಿಯನ್ನು ಘೋಷಿಸಲಾಗಿದ್ದು ಇದರಲ್ಲಿ ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಹರ್ಷಿತ್ ರಾಣಾ ಹೆಸರನ್ನು ಸೇರಿಸಲಾಗಿದೆ.
7 ವರ್ಷಗಳ ಬಳಿಕ ರಿಷಬ್ ಪಂತ್ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಜನವರಿ 23 ಮತ್ತು ಜನವರಿ 30 ರಂದು ಸೌರಾಷ್ಟ್ರ ಮತ್ತು ರೈಲ್ವೇಸ್ ವಿರುದ್ಧ ಆಡಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಪಂತ್ ಆಯ್ಕೆಯಾದರೆ ಸೌರಾಷ್ಟ್ರ ವಿರುದ್ಧ ಮಾತ್ರ ಆಡುವ ಸಾಧ್ಯತೆ ಇದೆ.
ರಾಜ್‌ಕೋಟ್‌ನಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧದ ದೆಹಲಿಯ ರಣಜಿ ಟ್ರೋಫಿ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿರುವುದಾಗಿ ರಿಷಭ್ ಪಂತ್ ದೃಢಪಡಿಸಿದ್ದಾರೆ ಎಂದು ಡಿಡಿಸಿಎ ಕಾರ್ಯದರ್ಶಿ ಅಶೋಕ್ ಶರ್ಮಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ರಿಷಬ್ ಪಂತ್ 2017-18 ರ ರಣಜಿ ಟ್ರೋಫಿ ಪಂದ್ಯಾವಳಿ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಆಡಿದ್ದರು. ಇದೇ ಪಂದ್ಯದಲ್ಲಿ ಗೌತಮ್ ಗಂಭೀರ್ ಕೂಡ ಆಡಿದ್ದರು. ಹರ್ಷಿತ್ ರಾಣಾ ಗಾಯದ ಸಮಸ್ಯೆ ಹೊಂದಿದ್ದು ಅವರು ಸದ್ಯ ಮುಂದಿನ ಪಂದ್ಯಕ್ಕೆ ಲಭ್ಯವಿಲ್ಲ ಎಂದು ಮಾಹಿತಿ ನೀಡಲಾಗಿದೆ.












Click it and Unblock the Notifications