Ricky Ponting: ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್‌ಗೆ ಗೇಟ್‌ಪಾಸ್
2025ರ ಐಪಿಎಲ್‌ಗೆ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿದೆ. ಬದಲಾವಣೆಯ ಮೊದಲ ಹಂತದಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ರಿಕಿ ಪಾಂಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ನಿರ್ಧಾರ ಬಂದಿದೆ. ರಿಕಿ ಪಾಂಟಿಂಗ್ ಸತತ ಏಳು ವರ್ಷಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋಚ್ ಆಗಿದ್ದರು. ಅವರ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.

ಕಳೆದ ಮೂರು ಐಪಿಎಲ್ ಸೀಸನ್‌ಗಳಲ್ಲಿ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಫಲಿತಾಂಶಗಳ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕರಾದ ಗಂಗೂಲಿಯವರು ಬೇಸರ ವ್ಯಕ್ತಪಡಿಸಿದ್ದರು. ಬಂಗಾಳಿ ಪತ್ರಿಕೆ ಆಜ್‌ಕಲ್‌ಗೆ ನೀಡಿದ ಸಂದರ್ಶನದಲ್ಲಿ, ಗಂಗೂಲಿ ಮುಖ್ಯ ಕೋಚ್ ಪಾತ್ರವನ್ನು ಸ್ವತಃ ವಹಿಸಿಕೊಳ್ಳುವ ಮತ್ತು ಭಾರತೀಯ ಕೋಚಿಂಗ್ ಸಿಬ್ಬಂದಿಯನ್ನು ನೇಮಿಸುವ ಬಗ್ಗೆ ಗಮನ ಹರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಧನ್ಯವಾದ ತಿಳಿಸಿದ ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್‌ನ ಸಾಮಾಜಿಕ ಮಾಧ್ಯಮಗಳಲ್ಲಿ ಇಷ್ಟು ವರ್ಷ ಫ್ರಾಂಚೈಸಿಗೆ ನೀಡಿದ ಕೊಡುಗೆಗಳಿಗಾಗಿ ಪಾಂಟಿಂಗ್‌ಗೆ ಧನ್ಯವಾದಗಳನ್ನು ತಿಳಿಸಲಾಗಿದೆ. ಹೊಸ ಮುಖ್ಯ ಕೋಚ್ ಯಾರಾಗುತ್ತಾರೆ ಎನ್ನುವ ಬಗ್ಗೆ ಪ್ರಶ್ನೆ ಇದ್ದು, ಗಂಗೂಲಿ ಅವರೇ ಮುಖ್ಯ ಕೋಚ್ ಆಗುವ ಸಾಧ್ಯತೆ ಇದೆ.
ಡೆಲ್ಲಿ ಕ್ಯಾಪಿಟಲ್ಸ್ ಕೋಚಿಂಗ್ ತಂಡದಲ್ಲಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ, ಸಹಾಯಕ ಕೋಚ್ ಪ್ರವೀಣ್ ಆಮ್ರೆ, ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಮತ್ತು ಫೀಲ್ಡಿಂಗ್ ಕೋಚ್ ಬಿಜು ಜಾರ್ಜ್ ಇದ್ದಾರೆ.
After 7 seasons, Delhi Capitals has decided to part ways with Ricky Ponting.
— Delhi Capitals (@DelhiCapitals) July 13, 2024
It's been a great journey, Coach! Thank you for everything 💙❤️ pic.twitter.com/dnIE5QY6ac
'ನೀವು ನಮ್ಮ ಮುಖ್ಯ ತರಬೇತುದಾರರಾಗಿ ಮುಂದುವರೆಯುವುದಿಲ್ಲ ಎನ್ನುವುದನ್ನು ಪದಗಳಲ್ಲಿ ಹೇಳುವುದು ನಮಗೆ ನಂಬಲಾಗದಷ್ಟು ಕಷ್ಟಕರವಾಗಿದೆ. ಕಾಳಜಿ, ಬದ್ಧತೆ, ವರ್ತನೆ ಮತ್ತು ಪ್ರಯತ್ನ ಇದು ಪ್ರತಿಯೊಂದು ಸಮಯದಲ್ಲಿ ನೀವು ನಮಗೆ ಹೇಳಿದ ನಾಲ್ಕು ವಿಷಯಗಳು ಎಂದು ಧನ್ಯವಾದ ತಿಳಿಸಿದೆ.
ತಂಡದಲ್ಲಿ ಭಾರಿ ಬದಲಾವಣೆ?
2025ರ ಐಪಿಎಲ್ ಹರಾಜಿಗೆ ಮುನ್ನ ಮೆಗಾ ಹರಾಜು ನಡೆಯಲಿದ್ದು, ತಂಡದಲ್ಲಿ ಭಾರಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ರಿಷಬ್ ಪಂತ್ ತಂಡದಲ್ಲಿ ನಾಯಕರಾಗಿ ಮುಂದುವರೆಯಲಿದ್ದು, ಉಳಿದಂತೆ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಯೋಜನೆ ರೂಪಿಸಲಿದೆ.












Click it and Unblock the Notifications