RCB vs SRH: ನಾವು ಗೆಲ್ಲುತ್ತೇವೆ ನೀವು ಭರವಸೆ ಕಳೆದುಕೊಳ್ಳಬೇಡಿ; ಆರ್ಸಿಬಿ ಅಭಿಮಾನಿಗಳಿಗೆ ವೈಶಾಖ್ ಮನವಿ
ಐಪಿಎಲ್ 2024ರ ಆವೃತ್ತಿಯಲ್ಲಿ ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದು, ಐದು ಪಂದ್ಯಗಳಲ್ಲಿ ಸೋತಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಪ್ಲೇ ಆಫ್ ತಲುಪುವ ದಾರಿ ದುರ್ಗಮವಾಗಿದ್ದು, ಮುಂದಿನ ಎಲ್ಲಾ ಪಂದ್ಯಗಳಲ್ಲೂ ಆರ್ ಸಿಬಿ ಗೆದ್ದರೆ ಮಾತ್ರ ಒಂದು ಅವಕಾಶ ಇದೆ.
ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕವಾದರೂ ಹೊಸ ಅಧ್ಯಾಯ ಆರಂಭಿಸಲಿ ಎಂದು ಆರ್ ಸಿಬಿ ಅಭಿಮಾನಿಗಳು ಬಯಸಿದ್ದಾರೆ.

ಎಸ್ಆರ್ಎಚ್ ವಿರುದ್ಧದ ಪಂದ್ಯಕ್ಕೆ ಮುನ್ನ ಕನ್ನಡಿಗ ವಿಜಯ್‌ಕುಮಾರ್ ವೈಶಾಖ್ ವಿಶೇಷ ಮನವಿ ಮಾಡಿದ್ದಾರೆ. ಸೋತಿದ್ದೇವೆ ಎನ್ನುವ ಬೇಜಾರು ನಮಗೂ ಇದೆ, ನೀವು ಭರವಸೆ ಕಳೆದುಕೊಳ್ಳಬೇಡಿ, ಒಂದು ಪಂದ್ಯವನ್ನು ಗೆದ್ದರೆ ಅದೇ ಪ್ರದರ್ಶನವನ್ನು ಮುಂದುವರೆಸಿಕೊಂಡು ಹೋಗುತ್ತೇವೆ, ನಮಗೆ ನಿಮ್ಮ ಬೆಂಬಲ ಬೇಕು ಎಂದು ಹೇಳಿದ್ದಾರೆ.
ಕ್ರಿಕೆಟ್ ಪ್ರಯಾಣದ ಅನುಭವ ಹಂಚಿಕೊಂಡ ಕನ್ನಡಿಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಸಾಮಾಜಿಕ ಖಾತೆಯಲ್ಲಿ ವೈಶಾಖ್ ಅವರ ಬಗೆಗಿನ ವಿಶೇಷ ವಿಡಿಯೋವನ್ನು ಹಂಚಿಕೊಂಡಿದೆ. ವೈಶಾಖ್ ತಮ್ಮ ಕ್ರಿಕೆಟ್ ಪ್ರಯಾಣದ ಬಗ್ಗೆ, ಆರ್ ಸಿಬಿ ತಂಡಕ್ಕೆ ಆಯ್ಕೆಯಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣ ತನಗೆ ದೇವಸ್ಥಾನ ಇದ್ದಂತೆ ಎಂದಿರುವ ಅವರು, ಬಾಲ್ ಬಾಯ್‌ನಿಂದ ಆರ್ ಸಿಬಿ ಬೌಲರ್ ಆಗುವವರೆಗೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ತನ್ನ ಯಶಸ್ಸಿಗೆ ತನ್ನ ತಂದೆ ತಾಯಿ ಕಾರಣ ಎಂದು ಹೇಳಿದ್ದಾರೆ.
ಆರ್ ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿದ್ದಾಗ, ತಂಡದ ಸಹಾಯಕ ಕೋಚ್ ಆಗಿರುವ ಆಡಂ ಗ್ರಿಫಿತ್ ಅವರ ಪ್ರೋತ್ಸಾಹ ನನ್ನನ್ನು ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತು ಎಂದಿದ್ದಾರೆ. ನನ್ನನ್ನು ನೆಟ್ ಬೌಲರ್ ನಂತೆ ಎಂದೂ ನಡೆಸಿಕೊಳ್ಳಲಿಲ್ಲ. ಬೌಲಿಂಗ್ ಶೈಲಿಯನ್ನು ಉತ್ತಮಪಡಿಸಿಕೊಳ್ಳಲು ಅವರು ಸಹಾಯ ಮಾಡಿದರು ಎಂದು ಹೇಳಿದರು.
The inspiring and heartwarming story of Vyshak Vijaykumar ❤️
— Royal Challengers Bengaluru (@RCBTweets) April 14, 2024
On 15th April 2023, Vyshak debuted for RCB after first coming in to the set-up as an intern, and one year later, he recollects his fondest memories at the Chinnaswamy stadium and how life changed since last year. 🏟️… pic.twitter.com/XVWD289h6h
ಆರ್ಸಿಬಿ ತಂಡಕ್ಕೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದೆ, ವಿರಾಟ್ ಕೊಹ್ಲಿ ವಾರ್ನರ್ ಅವರ ಕ್ಯಾಚ್ ಪಡೆದರು. ಇದು ನನಗೆ ಮತ್ತಷ್ಟು ವಿಶೇಷ. ಮುಂದಿನ ಪಂದ್ಯದಲ್ಲಿ ನಾನು ಹೆಚ್ಚಿನ ರನ್ ಬಿಟ್ಟುಕೊಟ್ಟೆ, ಆ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ ಬಂದು ನನಗೆ ಧೈರ್ಯ ತುಂಬಿದರು ಎಂದು ಹೇಳಿದ್ದಾರೆ.
ಆರ್ ಸಿಬಿ ಪಂದ್ಯಗಳನ್ನು ನೋಡಿಕೊಂಡು ಬೆಳೆದವನು ನಾನು, ಅಭಿಮಾನಿಯಿಂದ ತಂಡದ ಬೌಲರ್ ಆಗಿದ್ದು ನನ್ನ ಅದೃಷ್ಟ. ಕೊಹ್ಲಿ, ಸಿರಾಜ್ ಅವರಂತಹ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವುದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.












Click it and Unblock the Notifications