RCB vs SRH: ಬೆಂಗಳೂರಿನಲ್ಲಿ ಭಾರಿ ಮಳೆ; ಆರ್‌ಸಿಬಿ vs ಎಸ್‌ಆರ್‌ಎಚ್ ಪಂದ್ಯ ಸ್ಥಳಾಂತರ
ಬೆಂಗಳೂರಿನಲ್ಲಿ ಬಿಟ್ಟೂ ಬಿಡದೆ ಭಾರಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ದಾಖಲೆಯ ಮಳೆಗೆ ಹಲವು ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು ಜನ ಪರದಾಡುತ್ತಿದ್ದಾರೆ. ಮೇ 17 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಮೇ 23ರಂದು ನಡೆಯಬೇಕಿದ್ದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಕೂಡ ರದ್ದಾಗುವ ಆತಂಕವಿತ್ತು. ಈ ಬೆನ್ನಲ್ಲೇ ಬಿಸಿಸಿಐ ಮಹತ್ವದ ನಿರ್ಧಾರ ಮಾಡಿದೆ.
ಆರ್ ಸಿಬಿ ಮೊದಲ ಎರಡು ಸ್ಥಾನಗಳಲ್ಲಿ ಪ್ಲೇಆಫ್ ತಲುಪುವ ಅವಕಾಶ ಹೊಂದಿದೆ. ಅದಕ್ಕಾಗಿ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ. ಎಸ್‌ಆರ್ ಎಚ್ ವಿರುದ್ಧದ ಪಂದ್ಯ ಕೂಡ ಮಳೆಯಿಂದ ರದ್ದಾಗುವ ಆತಂಕದ ನಡುವೆಯೇ ಪಂದ್ಯವನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ.

ಮೇ 23ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎಸ್‌ಆರ್ ಎಚ್ ವಿರುದ್ಧದ ಪಂದ್ಯವನ್ನು ಲಕ್ನೋದ ಏಕಾನ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಆರ್ ಸಿಬಿ ತಮ್ಮ ಮುಂದಿನ ಎರಡೂ ಲೀಗ್ ಪಂದ್ಯಗಳನ್ನು ಲಕ್ನೋದಲ್ಲಿ ಆಡಲಿದೆ. ಈಗಾಗಲೇ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿದ್ದು ಮೊದಲ ಎರಡು ಸ್ಥಾನಗಳಲ್ಲಿ ಪ್ಲೇಆಫ್ ಪ್ರವೇಶಿಸಲು ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ.
ಅಗ್ರಸ್ಥಾನದ ಮೇಲೆ ಆರ್ ಸಿಬಿ ಕಣ್ಣು
ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆರ್ ಸಿಬಿ ಪ್ಲೇಆಫ್‌ಗೆ ಪ್ರವೇಶಿಸುವುದು ಮಾತ್ರವಲ್ಲ ಅಗ್ರಸ್ಥಾನದಲ್ಲಿ ಪ್ಲೇಆಫ್‌ಗೆ ಪ್ರವೇಶ ಪಡೆಯುವ ಲೆಕ್ಕಾಚಾರದಲ್ಲಿದೆ. ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆದು ಪ್ಲೇಆಫ್‌ಗೆ ಪ್ರವೇಶಿಸಿದರೆ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗೆದ್ದರೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಬಹುದು. ತಂಡದ ಬ್ಯಾಟಿಂಗ್, ಬೌಲಿಂಗ್ ಉತ್ತಮವಾಗಿದ್ದು 18 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ಆತ್ಮವಿಶ್ವಾಸ ತಂಡದ್ದಾಗಿದೆ.
ತಂಡದ ಪ್ರಮುಖ ಬೌಲರ್ ಜೋಶ್ ಹೇಜಲ್‌ವುಡ್ ಅಲಭ್ಯರಿದ್ದರೂ ಲುಂಗಿ ಎಂಗಿಡಿ ಈ ಪಂದ್ಯಕ್ಕೆ ಲಭ್ಯವಿರುತ್ತಾರೆ. ಸಿಎಸ್‌ಕೆ ವಿರುದ್ಧ ಕಣಕ್ಕಿಳಿದಿದ್ದ ಅವರು ಮೂರು ವಿಕೆಟ್ ಪಡೆದುಕೊಂಡಿದ್ದರು. ಉಳಿದಂತೆ ಎಲ್ಲಾ ವಿದೇಶಿ ಆಟಗಾರರು ಆಯ್ಕೆಗೆ ಲಭ್ಯವಿದ್ದು ತಂಡದ ಚಿಂತೆಯನ್ನು ದೂರವಾಗಿಸಿದೆ.
ಲಕ್ನೋದಲ್ಲಿ ಈಗಾಗಲೇ ಆರ್ ಸಿಬಿ ತಂಡ ಅಭ್ಯಾಸ ಮಾಡಿದೆ. ಮೇ 10ರಂದು ನಡೆಯಬೇಕಿದ್ದ ಪಂದ್ಯಕ್ಕೆ ಮುನ್ನ ಆರ್ ಸಿಬಿ ಲಕ್ನೋದಲ್ಲಿ ಅಭ್ಯಾಸ ಮಾಡಿತ್ತು, ಆದರೆ ಈ ಪಂದ್ಯಕ್ಕೆ ಮುನ್ನವೇ ಐಪಿಎಲ್ ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು.
ಲಕ್ನೋದಲ್ಲಿ ಈಗಾಗಲೇ ಒಂದು ಪಂದ್ಯ ಆಡಿರುವ ಸನ್‌ರೈಸರ್ಸ್ ಹೈದರಾಬಾದ್ ಎಲ್‌ಎಸ್‌ಜಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ತಂಡದ ಬ್ಯಾಟರ್ ಗಳು ಫಾರ್ಮ್‌ಗೆ ಮರಳಿದ್ದು ಆರ್ ಸಿಬಿ ಆಘಾತ ನೀಡುವ ಲೆಕ್ಕಾಚಾರದಲ್ಲಿದೆ. ಮೇ 23ರಂದು ಅಭಿಮಾನಿಗಳು ಹೈವೋಲ್ಟೇಜ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ.












Click it and Unblock the Notifications