RCB vs PBKS: ಸೋತು ಹೊರಬಿದ್ದ ಪಂಜಾಬ್; ಆರ್‌ಸಿಬಿ ಪ್ಲೇ ಆಫ್ ಕನಸಿಗೆ ಮತ್ತಷ್ಟು ಬಲ
ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 60 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಈ ಸೋಲಿನ ಮೂಲಕ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 241 ರನ್ ಕಲೆಹಾಕಿತು.

ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 7 ಬೌಂಡರಿ 6 ಸಿಕ್ಸರ್ ಸಹಿತ 92 ರನ್ ಗಳಿಸಿದರೆ, ರಜತ್ ಪಟಿದಾರ್ 23 ಎಸೆತಗಳಲ್ಲಿ 3 ಬೌಂಡರಿ 6 ಸಿಕ್ಸರ್ ಸಹಿತ 55 ರನ್ ಗಳಿಸಿ ಮಿಂಚಿದರು. ಕ್ಯಾಮೆರಾನ್ ಗ್ರೀನ್ 27 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ 7 ಎಸೆತಗಳಲ್ಲಿ 18 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ರೊಸೊವ್ ಹೋರಾಟ ವ್ಯರ್ಥ
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಮೊದಲ ಓವರ್ ನಲ್ಲೇ ವಿಕೆಟ್ ಕಳೆದುಕೊಂಡಿತು. ಪ್ರಭ್‌ಸಿಮ್ರನ್ ಸಿಂಗ್ 6 ರನ್ ಗಳಿಸಿ ಔಟಾದರು. ಜಾನಿ ಬೈರ್ ಸ್ಟೋ ಮತ್ತು ರಿಲೀ ರೊಸೊವ್ ಎರಡನೇ ವಿಕೆಟ್‌ಗೆ 65 ರನ್ ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾದರು.
ಜಾನಿ ಬೈರ್ ಸ್ಟೋ 27 ರನ್ ಗಳಿಸಿದರೆ, ರಿಲೀ ರೊಸೊವ್ 27 ಎಸೆತಗಳಲ್ಲಿ 61 ರನ್ ಗಳಿಸಿದರು, ಇವರಿಬ್ಬರು ಔಟಾದ ಬಳಿಕ ತಂಡಕ್ಕೆ ಭಾರಿ ಹಿನ್ನಡೆಯಾಯಿತು. ಶಶಾಂಕ್ ಸಿಂಗ್ 19 ಎಸೆತಗಳಲ್ಲಿ 37 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಅವರ ಮಿಂಚಿನ ರನೌಟ್‌ಗೆ ಬಲಿಯಾದರು.
ಅಂತಿಮವಾಗಿ ಪಂಜಾಬ್ ಸಿಂಗ್ಸ್ 17 ಓವರ್ ಗಳಲ್ಲಿ 181 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದರೆ, ಸ್ವಪ್ನಿಲ್ ಸಿಂಗ್, ಲೋಕಿ ಫರ್ಗ್ಯುಸನ್ ಮತ್ತು ಕರಣ್ ಶರ್ಮಾ ತಲಾ 2 ವಿಕೆಟ್ ಪಡೆದರು.












Click it and Unblock the Notifications