RCB vs PBKS: ಆರ್‌ಸಿಬಿ ಅಬ್ಬರಕ್ಕೆ ಬೆಚ್ಚಿಬಿದ್ದ ಪಂಜಾಬ್ ಕಿಂಗ್ಸ್
ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದಿರುವ ಆರ್‌ಸಿಬಿ ಭರ್ಜರಿ ಆರಂಭ ಮಾಡಿದೆ. ಜೋಶ್ ಹೇಜಲ್‌ವುಡ್ ತಂಡಕ್ಕೆ ವಾಪಸಾಗುತ್ತಿದ್ದಂತೆ ತಂಡದ ಬೌಲಿಂಗ್ ಮಾರಕವಾಗಿದ್ದು ಪಂಜಾಬ್ ಕಿಂಗ್ಸ್ ಅಕ್ಷರಶಃ ಕಂಗಾಲಾಗಿದೆ. 14.1 ಓವರ್ ಗಳಲ್ಲಿ 101 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದ್ದು ಆರ್ ಸಿಬಿ ಗೆಲುವಿಗೆ ಸುಲಭ ಗುರಿ ನೀಡಿದೆ.
ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಬಂದ ಪಂಜಾಬ್ ಕಿಂಗ್ಸ್‌ಗೆ ಯಶ್ ದಯಾಳ್ ಮೊದಲ ಆಘಾತ ನೀಡಿದರು. ಯಶ್ ದಯಾಳ್ ತಮ್ಮ ಮೊದಲ ಓವರ್ ನಲ್ಲೇ ಪ್ರಿಯಾಂಶ್ ಆರ್ಯ ಅವರ ವಿಕೆಟ್ ಪಡೆಯುವ ಮೂಲಕ ಪಂಜಾಬ್‌ಗೆ ಮೊದಲ ಆಘಾತ ನೀಡಿದರು.

ಅದಾದ ಬಳಿಕ ಪಂಜಾಬ್ ಕಿಂಗ್ಸ್‌ಗೆ ಸುಧಾರಿಸಿಕೊಳ್ಳಲು ಕೂಡ ಆರ್ ಸಿಬಿ ಬೌಲರ್ ಗಳು ಅವಕಾಶ ಕೊಡಲಿಲ್ಲ. ಭುವನೇಶ್ವರ್ ಕುಮಾರ್ ಪ್ರಭ್‌ಸಿಮ್ರನ್ ಅವರ ವಿಕೆಟ್ ಪಡೆಯುವ ಮೂಲಕ ಮತ್ತೊಂದು ಆಘಾತ ನೀಡಿದರು. ಜೋಶ್ ಹೇಜಲ್‌ವುಡ್ ಜೋಶ್ ಇಂಗ್ಲಿಸ್ ಮತ್ತು ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆದು ಮಾರಣಾಂತಿಕ ಆಘಾತ ನೀಡಿದರು.
ಬಳಿಕ ದಾಳಿಗೆ ಇಳಿದ ಸುಯಾಶ್ ಶರ್ಮಾ ತಮ್ಮ ಮೊದಲ ಓವರ್ ನಲ್ಲೇ 2 ವಿಕೆಟ್ ಪಡೆದು ಮಿಂಚಿದರು. ಬಳಿಕ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಕಸ್ ಸ್ಟೊಯಿನಿಸ್ ಅವರ ವಿಕೆಟ್ ಪಡೆದು ಪಂಜಾಬ್‌ಗೆ ಕೊನೆ ಮೊಳೆ ಹೊಡೆದರು. ಬಳಿಕ ರೊಮಾರಿಯೋ ಶೆಫರ್ಡ್ ಕೂಡ ಒಂದು ವಿಕೆಟ್ ಪಡೆದರೆ, ಜೋಶ್ ಹೇಜಲ್‌ವುಡ್ ಕೊನೆಯ ವಿಕೆಟ್ ಪಡೆದು ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ಗೆ ಮಂಗಳ ಹಾಡಿದರು.
ಜೋಶ್ ಹೇಜಲ್‌ವುಡ್ 3.1 ಓವರ್ ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದರೆ, ಸುಯಾಶ್ ಶರ್ಮಾ 3 ಓವರ್ ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು. ಯಶ್ ದಯಾಳ್ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದುಕೊಂಡರು.
ಉಭಯ ತಂಡಗಳ ಆಡುವ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ. (ಮಯಾಂಕ್ ಅಗರ್ವಾಲ್ ; ಬದಲೀ ಆಟಗಾರ).
ಪಂಜಾಬ್ ಕಿಂಗ್ಸ್ : ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಹರ್‌ಪ್ರೀತ್ ಬ್ರಾರ್, ಅರ್ಷ್‌ದೀಪ್ ಸಿಂಗ್, ಕೈಲ್ ಜೇಮಿಸನ್. (ಬದಲೀ ಆಟಗಾರ: ವೈಶಾಖ್ ವಿಜಯ್‌ಕುಮಾರ್).












Click it and Unblock the Notifications