RCB Vs MI: ಅಂಪೈರಿಂಗ್ ವಿರುದ್ಧ ರೊಚ್ಚಿಗೆದ್ದ ಆರ್‌ಸಿಬಿ ಫ್ಯಾನ್ಸ್
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ಗಳು ಮಾಡಿದ ಎಡವಟ್ಟುಗಳ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
ಆರ್‌ಸಿಬಿ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲಿ ಕೆಲವು ಅಂಪೈರಿಂಗ್ ತೀರ್ಮಾನಗಳು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಂಪೈರಿಂಗ್ ಗುಣಮಟ್ಟದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ಮೊದಲ ಸಂದರ್ಭದಲ್ಲಿ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಮುಂಬೈ ಫೀಲ್ಡರ್ ಚೆಂಡನ್ನು ತಡೆಯುವಾಗ ಬೌಂಡರಿಗೆ ಅವರ ಕೈ ತಾಕಿದ್ದನ್ನು ನೋಡಿಯೂ ಮೂರನೇ ಅಂಪೈರ್ ಅದನ್ನು ಬೌಂಡರಿ ನೀಡದೆ ಕೇವಲ ಎರಡು ರನ್ ನೀಡಿದರು.
ಆ ವಿಡಿಯೋವನ್ನು ಮತ್ತೊಮ್ಮೆ ನೋಡಿದಾಗ, ಚೆಂಡು ಫೀಲ್ಡರ್‍ಗೆ ತಾಕಿದ್ದಾಗ ಅವರ ಕೈ ಬೌಂಡರಿ ಗೆರೆಯನ್ನು ತಾಕಿದ್ದು ಸ್ಪಷ್ಟವಾಗಿ ಕಂಡು ಬಂತು. ಕಾಮೆಂಟೇಟರ್ ಕೂಡ ಅದು ಬೌಂಡರಿ ಎಂದು ಹೇಳಿದರು. ಅಂಪೈರ್ ಮಾಡಿದ ಎಡವಟ್ಟಿನಿಂದ ಆರ್ ಸಿಬಿಗೆ ಎರಡು ರನ್ ತಪ್ಪಿಹೋಯಿತು.
ನೋಬಾಲ್ ಮನವಿ ವಿವಾದ
ಮತ್ತೊಂದು ಘಟನೆಯಲ್ಲಿ ಮುಂಬೈ ಇಂಡಿಯನ್ಸ್ ಬಳಿ ರಿವ್ಯೂ ಇರಲಿಲ್ಲ. 17ನೇ ಓವರ್ ನಲ್ಲಿ ಬುಮ್ರಾ ಬೌಲಿಂಗ್ ವೇಳೆ ಡುಪ್ಲೆಸಿಸ್ ಬ್ಯಾಟಿಂಗ್ ಮಾಡುವಾಗ ಕೀಪರ್ ಕ್ಯಾಚ್‌ಗೆ ಮುಂಬೈ ಆಟಗಾರರು ಮನವಿ ಮಾಡಿದರು. ಕ್ಯಾಚ್ ಸರಿಯಾಗಿದೆಯಾ ಎಂದು ಪರೀಕ್ಷೆ ಮಾಡಲು ಮೂರನೇ ಅಂಪೈರ್ ಗೆ ಆನ್‌ಫೀಲ್ಡ್ ಅಂಪೈರ್ ಮನವಿ ಮಾಡಿದರು. ಆದರೆ, ಮೂರನೇ ಅಂಪೈರ್ ಕ್ಯಾಚ್ ಅನ್ನು ಪರೀಕ್ಷೆ ಮಾಡದೆ, ಚೆಂಡು ಬ್ಯಾಟ್‌ಗೆ ತಾಗಿದೆಯಾ ಇಲ್ಲವೇ ಪರೀಕ್ಷೆ ಮಾಡಿದರು, ಚೆಂಡು ಬ್ಯಾಟ್‌ಗೆ ತಾಕದೇ ಇರುವ ಕಾರಣ ಅದನ್ನು ನಾಟೌಟ್ ಎಂದು ನಿರ್ಣಯ ನೀಡಿದರು. ರಿವ್ಯೂ ಇಲ್ಲದೇ ಇದ್ದರೂ, ಇದು ಮುಂಬೈಗೆ ಒಂದು ರಿವ್ಯೂ ಸೌಲಭ್ಯ ಸಿಕ್ಕಂತಾಯಿತು.
20ನೇ ಓವರ್ ನಲ್ಲಿ ಆಕಾಶ್ ಮಧ್ವಲ್ ಬೌಲಿಂಗ್ ಮಾಡುವಾಗ ದಿನೇಶ್ ಕಾರ್ತಿಕ್ ಅವರು ಸೊಂಟಕ್ಕಿಂತ ಎತ್ತರ ಬಂದ ಚೆಂಡಿಗೆ ನೋ ಬಾಲ್‌ಗಾಗಿ ರಿವ್ಯೂ ಮಾಡಿದರು. ಆನ್‌ಫೀಲ್ಡ್ ಅಂಪೈರ್ ಅದನ್ನು ನೋ ಬಾಲ್ ಎಂದು ಹೇಳಿರಲಿಲ್ಲ, ಮೂರನೇ ಅಂಪೈರ್ ಕೂಡ ಅದನ್ನು ನೋಬಾಲ್ ನೀಡಲಿಲ್ಲ. ಆದರೆ ರೀಪ್ಲೇನಲ್ಲಿ ಚೆಂಡು ಸೊಂಟಕ್ಕಿಂತ ಎತ್ತರದಲ್ಲಿ ಇದ್ದುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.
ಪಂದ್ಯದ ಫಲಿತಾಂಶ ಏನೇ ಆಗಲಿ ಆದರೆ ಅಂಪೈರಿಂಗ್ ಗುಣಮಟ್ಟ ಕಳಪೆಯಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಪಿಎಲ್ ವಿಶ್ವದ ಶ್ರೀಮಂತ ಲೀಗ್, ಇಂತಹ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಕೆಟ್ಟ ನಿರ್ಣಯ ನೀಡುವ ಅಂಪೈರ್ ಗಳನ್ನು ದಂಡಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.












Click it and Unblock the Notifications