RCB vs LSG: ಆರ್‌ಸಿಬಿ ಬ್ಯಾಟಿಂಗ್ ವಿಭಾಗಕ್ಕೆ LSG ವೇಗವೇ ಚಾಲೆಂಜ್
ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಮೇಲ್ನೋಟಕ್ಕೆ ಇದು ಉತ್ತರ ಹಾಗೂ ದಕ್ಷಿಣದ ನಡುವಿನ ಕದನ ಎಂದೇ ಬಿಂಬಿತವಾದರೂ, ಗ್ರೌಂಡ್ ರಿಯಾಲಿಟಿ ಬೇರೆ ಇದೆ. ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ಕನ್ನಡಿಗರನ್ನೇ ಹೊಂದಿರುವ ಲಖ್ನೋ ಸೂಪರ್ ಜೈಂಟ್ಸ್ ಸವಾಲು ಎಸೆಯಲಿದೆ.
ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಕುತೂಹಲ ಮೂಡಿಸಿದೆ. ಈಗಾಗಲೇ ತವರಿನಲ್ಲಿ ಎರಡು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಒಂದರಲ್ಲಿ ಗೆಲುವು, ಒಂದರಲ್ಲಿ ಸೋಲು ಕಂಡಿದೆ. ಲಖ್ನೋ ತನ್ನ ಮೂರನೇ ಪಂದ್ಯದಲ್ಲಿ ಎರಡನೇ ಗೆಲುವಿನ ಕನಸು ಕಾಣುತ್ತಿದೆ. ಈ ಅಂಗಳ ವಿರಾಟ್ ಕೊಹ್ಲಿ ಅವರಿಗೆ ಎರಡನೇ ತವರು ಆಗಿದೆ. ಆದರೆ ಲಖ್ನೋ ತಂಡದಲ್ಲಿರುವ ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್, ಆಲ್‌ರೌಂಡರ್ ಕೆ.ಗೌತಮ್‌ರಿಗೆ ತವರು ನೆಲವಾಗಿದೆ.

ಗೌತಮ್‌ಗೆ ಅವಕಾಶ
ಚಿನ್ನಸ್ವಾಮಿ ಮೈದಾನದಲ್ಲೇ ಆಡಿ ಬೆಳೆದ ಆಟಗಾರರು ಇಂದು ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಅದರಲ್ಲೂ ಎಲ್‌ಸಿಜಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ನಾಯಕನಾದರೆ, ದೇವದತ್ ಪಡಿಕ್ಕಲ್ ಮಧ್ಯಮ ಕ್ರಮಾಂಕದಲ್ಲಿ ಬಲ ನೀಡಲಿದ್ದಾರೆ. ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಕೆ.ಗೌತಮ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿಯಬಹುದು.
ರಾಹುಲ್ ಪಾತ್ರವೇನು?
ಗಾಯದಿಂದ ಬಳಲುತ್ತಿರು ಕನ್ನಡಿಗ ರಾಹುಲ್ ಈ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಅನುಮಾನ ಮೂಡಿಸಿದೆ. ರಾಹುಲ್ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಕಳೆದ ಪಂದ್ಯದಲ್ಲೂ ಅವರು ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಬ್ಯಾಟಿಂಗ್ ಮಾಡಿದ್ದರು. ತವರಿನ ಅಂಗಳದಲ್ಲಿ ಇವರು ಯಾವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಸಂಘಟಿತ ಆಟದ ಮೇಲೆ ವಿಶ್ವಾಸವನ್ನು ಹೊಂದಿರುವ ಲಖ್ನೋ, ಬೆಂಗಳೂರಿನಲ್ಲಿ ಎರಡನೇ ಗೆಲುವಿನ ಕನಸು ಕಾಣುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಟಿಂಗ್ ವಿಭಾಗಕ್ಕೆ ಬೌಲರ್‌ಗಳು ಸಹ ಬೆಂಬಲವನ್ನು ನೀಡುವ ಅವಶ್ಯಕತೆ ಇದೆ.

ಬದಲಾವಣೆ ಸಾಧ್ಯತೆ
ಆರ್‌ಸಿಬಿ ತಂಡ ಇಂದು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಸತತ ವೈಫಲ್ಯವನ್ನು ಅನುಭವಿಸುತ್ತಿರುವ ಆಟಗಾರರಿಗೆ ಬೆಂಚ್ ಕಾಯಿಸುವ ಅನಿವಾರ್ಯತೆ ಇದೆ. ಇನ್ನು ರಜತ್ ಪಟಿದಾರ್ ಬದಲಿಗೆ ಇನ್ನೊಬ್ಬ ಭಾರತೀಯ ಆಟಗಾರನಿಗೆ ಅವಕಾಶ ನೀಡಬೇಕಿದೆ.
ಟಾಪ್ ಆರ್ಡರ್‌ನಲ್ಲಿ ವಿರಾಟ್ ಕೊಹ್ಲಿ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿದೇಶಿ ಆಟಗಾರ ವಿಲ್ ಜಾಕ್ಸ್ ಮೈದಾನಕ್ಕೆ ಇಳಿಯುವುದು ಸೂಕ್ತ. ಇವರನ್ನು ಯಾರ ಸ್ಥಾನದಲ್ಲಿ ಆಡಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ವಿಲ್ ಜಾಕ್ಸ್ ಬ್ಯಾಟಿಂಗ್‌ನಿಂದ ಅಬ್ಬರ ನಡೆಸಬಲ್ಲರು.
ಅಲ್ಜರಿ ಜೋಸೆಫ್ ಪರಿಣಾಮ ಕಾರಿಯಾಗಿ ಬೌಲಿಂಗ್ ದಾಳಿ ಸಂಘಟಿಸುತ್ತಿಲ್ಲ. ಇವರ ಬದಲಿಗೆ ಡೆತ್ ಓವರ್‌ಗಳಲ್ಲಿ ಎದುರಾಳಿಗೆ ಕಾಟ ನಿಡುವ ಲಾಕಿ ಫಾರ್ಗ್ಯುಸನ್ ಅವರಿಗೆ ಅವಕಾಶ ನೀಡಬೇಕಿದೆ. ಅಂದಾಗ ಗೆಲುವಿನ ಆಸೆ ಚಿಗುರುತ್ತದೆ.
ಕಳೆದ ಪಂದ್ಯದಲ್ಲಿ ಮಾಡಿದ ತಪ್ಪು
ಇನ್ನು ಕಳೆದ ಪಂದ್ಯದಲ್ಲಿ ಮಯಾಂಕ್ ದಗಾರ್ ಅವರ ಕೋಟಾವನ್ನು ಪೂರ್ತಿ ಮಾಡಲು ಬಿಡದೇ ಇರುವುದೇ ದೊಡ್ಡ ಸಮಸ್ಯೆ ಆಯಿತು. ಇವರು ಬೇರೆ ಬೌಲರ್‌ಗಳಿಗೆ ಹೋಲಿಸಿದರೆ, ಕೆಕೆಆರ್ ವಿರುದ್ಧ ರನ್ ಗಳಿಗೆ ಕಡಿವಾಣ ಹಾಕಿದ್ದರು. ಇನ್ನು ಕರ್ನಾಟಕದ ವಿಜಯಕುಮಾರ್ ವೈಶಾಖ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸಬೇಕಿದೆ ಅಂದಾಗ ಮಾತ್ರ ಬೌಲಿಂಗ್‌ನಲ್ಲಿ ಬದಲಾವಣೆಯ ಕಾಣಬಹುದು.












Click it and Unblock the Notifications