ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕನ್ನಡಿಗ vs ಡೆಲ್ಲಿ ಹುಡುಗನ ಹೈವೋಲ್ಟೇಜ್ ಸಮರ; ಹೀಗಿದೆ ಆರ್‌ಸಿಬಿ ಪ್ಲೇಯಿಂಗ್ 11
RCB Playing 11: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್ 27) ನಡೆಯಲಿರುವ ಹೈವೋಲ್ಟೇಜ್ ಐಪಿಎಲ್ 2026ರ 39ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಕೆ.ಎಲ್.ರಾಹುಲ್ ಕೇವಲ 67 ಎಸೆತಗಳಲ್ಲಿ ಅಜೇಯ 152 ರನ್ ಸಿಡಿಸುವ ಮೂಲಕ ಅಬ್ಬರಿಸಿದ್ದರು. ಆದರೆ 264 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿಯೂ ಅದನ್ನು ರಕ್ಷಿಸಿಕೊಳ್ಳಲು ಡೆಲ್ಲಿ ತಂಡ ವಿಫಲವಾಯಿತು.

ಆರ್‌ಸಿಬಿ ವಿರುದ್ಧ ಗೆಲುವಿಗೆ ಡೆಲ್ಲಿ ಪ್ಲ್ಯಾನ್
ಇಂದಿನ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ತಂಡದ ಆತಂಕಕ್ಕೆ ಪ್ರಮುಖ ಕಾರಣವೆಂದರೆ ವೇಗಿ ಲುಂಗಿ ಎನ್ಗಿಡಿ ಅವರ ಅಲಭ್ಯತೆ. ಕಳೆದ ಪಂದ್ಯದಲ್ಲಿ ಅವರ ತಲೆಗೆ ಪೆಟ್ಟು ಬಿದ್ದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನೂ ಈವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಮೂರು ಗೆಲುವು ಕಂಡಿರುವ ಡೆಲ್ಲಿ, ಅಂಕಪಟ್ಟಿಯಲ್ಲಿ 7 ಸ್ಥಾನದಲ್ಲಿದೆ. ಟೂರ್ನಿಯ ಅರ್ಧ ಹಂತಕ್ಕೆ ತಲುಪಿರುವ ಈ ಸಮಯದಲ್ಲಿ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಅವರಿಗೆ ಈಗ ಭರ್ಜರಿ ಪುನರಾಗಮನದ ಅಗತ್ಯವಿದೆ. ಆದ್ದರಿಂದ ಇಂದು ತವರಿನ ಮೈದಾನದಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯವು ಅತ್ಯಂತ ನಿರ್ಣಾಯಕವಾಗಿದೆ.
ಉತ್ತಮ ಲಯದಲ್ಲಿರುವ ಆರ್‌ಸಿಬಿ
ಮತ್ತೊಂದೆಡೆ ಆರ್‌ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆತ್ಮವಿಶ್ವಾಸದೊಂದಿಗೆ ಈ ಪಂದ್ಯಕ್ಕೆ ಸಜ್ಜಾಗಿದೆ. ಬೆಂಗಳೂರಿನಲ್ಲಿ ನಡೆದ ಪಂದ್ಯಗಳಲ್ಲಿ ಆಡಿದ 5 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯಗಳಿಸಿ ತನ್ನ ತವರಿನ ಆಟವನ್ನು ಯಶಸ್ವಿಯಾಗಿ ಮುಗಿಸಿದೆ. ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿ ಈ ಸೀಸನ್‌ನಲ್ಲಿ ಉತ್ತಮ ಲಯದಲ್ಲಿದೆ. ಈವರೆಗೆ ಆಡಿರುವ 7 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸುವ ಮೂಲಕ ಟೂರ್ನಿಯ ಅತ್ಯಂತ ಸ್ಥಿರ ಪ್ರದರ್ಶನದ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಡೆಲ್ಲಿ ವಿರುದ್ಧ ಸೋಲನುಭವಿಸಿದ್ದ ಆರ್‌ಸಿಬಿ
ತವರಿನಲ್ಲಿ ಅಬ್ಬರಿಸಿದ್ದ ಆರ್‌ಸಿಬಿ, ಈಗ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲೂ ಅದೇ ಲಯವನ್ನು ಮುಂದುವರಿಸಲು ಉತ್ಸುಕವಾಗಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಹಿಂದಿನ ರೋಚಕ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 176 ರನ್‌ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಗಿ ಬೆನ್ನಟ್ಟಿತ್ತು. ಈ ಸೋಲು ಆರ್‌ಸಿಬಿ ತಂಡಕ್ಕೆ ಈ ಸೀಸನ್‌ನಲ್ಲಿ ತನ್ನ ತವರು ಮೈದಾನದಲ್ಲಿ ಎದುರಾದ ಏಕೈಕ ಸೋಲಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಬೆಂಗಳೂರು ತಂಡವು ಫಿಲ್ ಸಾಲ್ಟ್ (63) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು. ಡೆಲ್ಲಿ ಪರ ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದು ಮಿಂಚಿದ್ದರು.
ಆರಂಭಿಕ ಆಘಾತದ ನಡುವೆಯೂ ಕೆ.ಎಲ್.ರಾಹುಲ್ 57 ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅಜೇಯ 60 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಪ್ರಮುಖ ಪಾತ್ರವಹಿಸಿತು. ಅಂತಿಮ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಕೇವಲ 10 ಎಸೆತಗಳಲ್ಲಿ ಅಜೇಯ 22 ರನ್ ಸಿಡಿಸಿ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಡೆಲ್ಲಿಗೆ 6 ವಿಕೆಟ್‌ಗಳ ಜಯ ತಂದುಕೊಟ್ಟರು. ಇನ್ನೂ ಇಂದು ದೆಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತನ್ನ ಆ ಸೋಲಿಗೆ ಸೇಡು ತೀರಿಸಿಕೊಳ್ಳುತ್ತದೆಯೇ ಎಂದು ಕಾದುನೋಡಬೇಕಿದೆ.
ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11: ಪೃಥ್ವಿ ಶಾ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ನಿತಿನ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಕೈಲ್ ಜೇಮಿಸನ್, ಕುಲದೀಪ್ ಯಾದವ್, ಮುಕೇಶ್ ಕುಮಾರ್, ಟಿ. ನಟರಾಜನ್, ದುಷ್ಮಂತ ಚಮೀರ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್/ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ರಸಿಕ್ ದಾರ್ ಸಲಾಂ, ಮಂಗೇಶ್ ಯಾದವ್.












Click it and Unblock the Notifications