RCB vs CSK: ಮೇ 18, ಕೊಹ್ಲಿ18, 18 ರನ್, 18.1 ಓವರ್; ಅರ್ಥ ಆಯ್ತಾ?
ಐಪಿಎಲ್ 2024ರ ಆವೃತ್ತಿಯಲ್ಲಿ ಆರ್ ಸಿಬಿ ತಂಡದ ಅದೃಷ್ಟ ಸಖತ್ತಾಗಿದೆ. ಮೊದಲ ಎಂಟು ಪಂದ್ಯಗಳಲ್ಲಿ ಏಳು ಪಂದ್ಯ ಸೋತು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಆರ್‌ಸಿಬಿ ಬಳಿಕ ಸತತವಾಗಿ ಐದು ಪಂದ್ಯಗಳನ್ನು ಗೆದ್ದು 6ನೇ ಸ್ಥಾನಕ್ಕೇರಿದೆ.
ಪ್ಲೇಆಫ್ ತಲುಪಲು ಸಿಎಸ್‌ಕೆ ವಿರುದ್ಧ ಗೆಲ್ಲಬೇಕಿದ್ದು, ಇದು ಎರಡೂ ತಂಡಗಳಿಗೂ ನಾಕೌಟ್ ಪಂದ್ಯವಾಗಿದೆ. ಗೆದ್ದ ತಂಡ ಪ್ಲೇಆಫ್ ತಲುಪಲಿದ್ದು, ಸೋತರೆ ಪಂದ್ಯಾವಳಿಯಿಂದ ಹೊರಬೀಳಲಿದೆ.

ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳು ಎದುರಾಗಲಿವೆ. ಈ ಪಂದ್ಯಕ್ಕೂ 18ರ ಸಂಖ್ಯೆಗೂ ಅವಿನಾಭಾವ ಸಂಬಂಧ ಇದೆ. ಅಭಿಮಾನಿಗಳಿಗೆ ಆರ್ ಸಿಬಿ ಗೆಲ್ಲುತ್ತದೆ ಎನ್ನುವ ನಂಬಿಕೆ ಬರಲು ಈ 18 ಕೂಡ ಕಾರಣವಾಗಿದೆ.
18ರ ನಂಟು ಸಿಗುತ್ತಾ ಗೆಲುವಿನ ಗಂಟು?
ಮೇ 18 ರಂದು ಈ ಪಂದ್ಯ ನಡೆಯುತ್ತಿದ್ದು, ವಿರಾಟ್ ಕೊಹ್ಲಿ ಜೆರ್ಸಿ ಸಂಖ್ಯೆ ಕೂಡ 18 ಆಗಿದೆ. ಆರ್ ಸಿಬಿ ಪ್ಲೇ ಆಫ್ ತಲುಪಲು 18 ರನ್ ಅಂತರದಲ್ಲಿ ಗೆಲ್ಲವೇಕು ಇಲ್ಲ ಸಿಎಸ್‌ಕೆ ಕೊಟ್ಟ ಟಾರ್ಗೆಟ್ ಅನ್ನು 18.1 ಓವರ್ ನಲ್ಲಿ ಬೆನ್ನತ್ತಬೇಕಿದೆ. ಎಲ್ಲದರಲ್ಲೂ 18 ಇರುವುದು ಕಾಕತಾಳೀಯವೋ ಅಥವಾ ಅದೃಷ್ಟದ ಮುನ್ಸೂಚನೆಯೋ ಗೊತ್ತಿಲ್ಲ ಆದರೆ ಆರ್ ಸಿಬಿ ಅಭಿಮಾನಿಗಳಿಗೆ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಮೇ 18 ರಂದು ಪಂದ್ಯ ಸೋತಿಲ್ಲ
ಐಪಿಎಲ್ ಇತಿಹಾಸಲ್ಲಿ ಆರ್ ಸಿಬಿ ಮೇ 18 ರಂದು ಇದುವರೆಗೂ ನಾಲ್ಕು ಪಂದ್ಯಗಳನ್ನಾಡಿದ್ದು ನಾಲ್ಕರಲ್ಲೂ ಗೆದ್ದು ಬೀಗಿದೆ. ಈಗ ಐದನೇ ಪಂದ್ಯವನ್ನು ಗೆದ್ದು ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದೆ.
ವಿರಾಟ್ ಕೊಹ್ಲಿ 2013 ರ ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 29 ಎಸೆತಗಳಲ್ಲಿ 56 ರನ್ ಗಳಿಸಿದ್ದರು. 2014 ರ ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 29 ಎಸೆತಗಳಲ್ಲಿ 27 ರನ್ ಗಳಿಸಿದ್ದರು. 2016 ರ ಮೇ 18 ರಂದು ಪಂಜಾಬ್ ಕಿಂಗ್ಸ್ ವಿರುದ್ಧ 50 ಎಸೆತಗಳಲ್ಲಿ 113 ರನ್ ಗಳಿಸಿದ್ದರು. 2023 ರ ಮೇ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 63 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಈ ಎಲ್ಲಾ ಪಂದ್ಯಗಳನ್ನು ಆರ್ ಸಿಬಿ ಗೆದ್ದಿರುವುದು ವಿಶೇಷ.
ಮೇ 18 ರಂದು ಶನಿವಾರ ಸಂಜೆ 7.30 ಕ್ಕೆ ಪಂದ್ಯ ನಡೆಯಲಿದ್ದು, ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ ಇದೆ. ಪಂದ್ಯದ ಸಮಯದಲ್ಲಿ ಮಳೆ ಬಾರದಿರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದು, ಪಂದ್ಯ ಮುಗಿದ ಬಳಿಕ ಜೋರು ಮಳೆಯಾಗಲಿ, ಅದಕ್ಕೂ ಮುನ್ನ ಆರ್ ಸಿಬಿ ಗೆದ್ದರೆ ಡಬಲ್ ಖುಷಿ ಇರುತ್ತದೆ ಎನ್ನುವ ಆಸೆ ಲಾಯಲ್ ಫ್ಯಾನ್ಸ್‌ಗಳದ್ದಾಗಿದೆ.












Click it and Unblock the Notifications