RCB: ಬೆಂಗಳೂರಿನಲ್ಲಿ ಸೋಲಿನ ಬಗ್ಗೆ ಆರ್‌ಸಿಬಿ ಸ್ಟಾರ್ ಆಟಗಾರನ ಅಚ್ಚರಿ ಹೇಳಿಕೆ!
2025ರ ಆವೃತ್ತಿಯಲ್ಲಿ ತವರಿನ ಹೊರಗೆ ಸತತವಾಗಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ತವರಿನಲ್ಲಿ ಮಾತ್ರ ಇನ್ನೂ ಮೊದಲ ಗೆಲುವಿನ ಹುಟುಕಾಟದಲ್ಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದು ಇನ್ನೂ ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಅರ್ಥ ಮಾಡಿಕೊಳ್ಳಲು ಆಟಗಾರರು ವಿಫಲವಾಗಿದ್ದು, ಇಲ್ಲಿನ ಕಷ್ಟದ ಪರಿಸ್ಥಿತಿಯೇ ಆರ್ ಸಿಬಿ ಸೋಲಿಗೆ ಕಾರಣ ಎನ್ನಲಾಗಿದೆ.
ಆದರೆ ಆರ್ ಸಿಬಿ ಆಟಗಾರ ಕರ್ನಾಟಕದ ದೇವದತ್ ಪಡಿಕ್ಕಲ್ ಈ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಮೂರು ಪಂದ್ಯಗಳ ಗೆಲುವಿಗೆ ಪಿಚ್ ಸ್ಥಿತಿ ಕಾರಣ ಎಂದು ನಾನು ನಂಬುವುದಿಲ್ಲ, ಇನ್ನು ಮುಂದೆ ತವರಿನಲ್ಲೂ ಗೆಲುವು ಕಾಣುವ ಸಮಯ ಬಂದಿದೆ ಎಂದಿದ್ದಾರೆ.

ಆರ್‌ಸಿಬಿ ತವರು ನೆಲದಿಂದ ಹೊರಗೆ ಗೆದ್ದಿದೆ, ಸತತ ಐದು ಗೆಲುವುಗಳೊಂದಿಗೆ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದೆ, ಅವುಗಳಲ್ಲಿ ಮೂರು ಪಂದ್ಯಗಳನ್ನು ಚೇಸಿಂಗ್ ಮಾಡುವಾಗ ಗೆದ್ದಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಈ ಮೂರು ಪಂದ್ಯದಲ್ಲೂ ಅಜೇಯ ಅರ್ಧಶತಕ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ತವರಿನಲ್ಲಿ ಸೋಲು ಕಾಕತಾಳೀಯ
ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವದತ್ ಪಡಿಕ್ಕಲ್, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮ ಐದು ಗೆಲುವುಗಳು ತವರು ನೆಲದಿಂದ ಹೊರಗೆ ಬಂದಿರುವುದು ಕೇವಲ ಕಾಕತಾಳೀಯ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಪಂದ್ಯಾವಳಿಯ ಉದ್ದಕ್ಕೂ ಉತ್ತಮ ಕ್ರಿಕೆಟ್ ಆಡಿದ್ದೇವೆ ಎಂದಿದ್ದಾರೆ.
ನಾವು ತಂಡವಾಗಿ ಉತ್ತಮವಾಗಿ ಆಡಿದ್ದೇವೆ, ಪ್ರತಿ ಬಾರಿ ಸೋತಾಗ ತಕ್ಷಣ ಎಚ್ಚೆತ್ತುಗೊಳ್ಳುತ್ತೇವೆ ಮತ್ತು ಪಂದ್ಯಗಳನ್ನು ಗೆಲ್ಲುತ್ತಿದ್ದೇವೆ. ನಾವು ಗೆಲುವಿನ ಸರಣಿಯನ್ನು ಮುಂದುವರೆಸುವುದು ಮತ್ತು ತವರಿನಲ್ಲಿ ಗೆಲುವಿನ ದಾರಿ ಕಂಡುಕೊಳ್ಳುವುದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ಹಿಂದಿನ ಆವೃತ್ತಿಗಳಂತೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿಲ್ಲ. ಆರ್‌ಸಿಬಿ ಮೂರು ಪಂದ್ಯಗಳಲ್ಲಿ ಪ್ರತಿ ಬಾರಿಯೂ ಮೊದಲು ಬ್ಯಾಟಿಂಗ್ ಮಾಡಿದ್ದು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಗಿದೆ. ಟಾಸ್ ಸೋತಿರುವುದು ಕೂಡ ಸೋಲಿಗೆ ಒಂದು ಕಾರಣ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪಿಚ್‌ಗೆ ಮತ್ತು ಸೋಲಿಗೆ ಯಾವುದೇ ಸಂಬಂಧವಿಲ್ಲ ಎಂದು ನಾನು ಭಾವಿಸುತ್ತೇನೆ. ಬ್ಯಾಟರ್ ಗಳು ಪಿಚ್ ಅನ್ನು ಬೇಗನೆ ಅರ್ಥಮಾಡಿಕೊಳ್ಳುವುದು ಮುಖ್ಯ, ಕಳೆದ ಮೂರು ಪಂದ್ಯಗಳಲ್ಲಿ ಅದನ್ನು ಉತ್ತಮವಾಗಿ ಮಾಡಿಲ್ಲ. ಇದು ಪಂದ್ಯಾವಳಿಯ ಒಂದು ಭಾಗ, ಇಲ್ಲಿ ಯಾವಾಗಲೂ ಸವಾಲು ಇದ್ದೇ ಇರುತ್ತದೆ ಎಂದಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ತಂಡವಾಗಿ ಗೆಲುವು ಸಾಧಿಸುವುದು ನಮಗೆ ಸವಾಲು. ಗೆಲುವಿನ ದಾರಿಯನ್ನು ಕಂಡುಕೊಳ್ಳುವುದು ಮುಖ್ಯ. ತಂಡದಲ್ಲಿ ಅನುಭವಿ ಮತ್ತು ಪ್ರತಿಭಾನ್ವಿತ ಆಟಗಾರು ಇದ್ದಾರೆ. ಮುಂದಿನ ಪಂದ್ಯದಲ್ಲಿ ನಾವು ಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications