WPL 2026 RCB: ಡಬ್ಲ್ಯೂಪಿಎಲ್ 2026 ಟ್ರೋಫಿ ಗೆದ್ದ ಆರ್‌ಸಿಬಿ
WPL 2026 RCB: ಡಬ್ಲ್ಯೂಪಿಎಲ್ 2026 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮಣಿಸಿ ಚಾಂಪಿಯನ್ ಆಗಿದೆ. ಈ ಮೂಲಕ ಈವರೆಗೂ ಎರಡು ಟ್ರೋಫಿ ಎತ್ತಿದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಟ್ರೋಫಿ ಎತ್ತಿಹಿಡಿದಿದೆ. ಈ ಹೈವೋಲ್ಟೇಜ್ ಪಂದ್ಯ ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಿತು.

ತಲಾ ಎರಡು ಟ್ರೋಫಿ ಗೆದ್ದ ಆರ್‌ಸಿಬಿ, ಮುಂಬೈ: ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್‌ಸಿಬಿ ವಿರುದ್ಧ ಎರಡು ಬಾರಿ ಸೋಲನುಭವಿಸಿ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿದೆ. ಆರ್‌ಸಿಬಿ ಡಬ್ಲ್ಯೂಪಿಎಲ್‌ನಲ್ಲಿ ಈವರೆಗೆ ಒಟ್ಟು ಎರಡು ಟ್ರೋಫಿಯನ್ನು ಗೆದ್ದ ಇತಿಹಾಸ ಬರೆದಿದೆ. 2024 ಹಾಗೂ 2026ರಲ್ಲಿ ಈ ಸಾಧನೆ ಮಾಡಿದೆ. ಈ ಮೂಲಕ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಲಾ ಎರಡು ಟ್ರೋಫಿ ಗೆದ್ದುಕೊಂಡಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ವಡೋದರಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್‌ಗಳನ್ನು ಕಲೆಹಾಕಿ ಆರ್‌ಸಿಬಿಗೆ 204 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು.
ಆರ್‌ಸಿಬಿಗೆ ಬೃಹತ್ ರನ್‌ಗಳ ಟಾರ್ಗೆಟ್: ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೃಹತ್ ರನ್‌ಗಳನ್ನು ಕಲೆಹಾಕಿತು. ಆರಂಭಿಕರಾದ ಲಿಜೇಲ್ ಲಿ 37(30) ಹಾಗೂ ಶಫಾಲಿ ವರ್ಮಾ 20(13) ಜೋಡಿ 49 ರನ್‌ಗಳ ಜೊತೆಯಾಟವಾಡಿದರು. ನಾಯಕಿ ಜೆಮಿಮಾ ಹಾಗೂ ಲಾರಾ ವೋಲ್ವಾರ್ಡ್ ಜೋಡಿಯಿಂದ ನಿರೀಕ್ಷಿದಿದ್ದಕ್ಕಿಂತಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕಂಡುಬಂದಿತು. ಜೆಮಿಮಾ 57(37), ಲಾರಾ ವೋಲ್ವಾರ್ಡ್ 44(25), ಚೆನ್ಲಿ ಹೆನ್ರಿ ಅಜೇಯ 35(15) ರನ್ ಬಾರಿಸಿ ತಂಡದ ಮೊತ್ತವನ್ನು 2OOರ ಗಡಿ ದಾಡಿಸಿದರು. ಈ ಮೂಲಕ ಆರ್‌ಸಿಬಿಗೆ 204 ಬೃಹತ್ ರನ್‌ಗಳ ಟಾರ್ಗೆಟ್ ನೀಡಿತು.
ಸ್ಮೃತಿ, ಜಾರ್ಜಿಯಾ ವೋಲ್ ಸ್ಫೋಟಕ ಬ್ಯಾಟಿಂಗ್: ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 204 ರನ್‌ಗಳನ್ನು ಬೃಹತ್ ಗುರಿಯನ್ನು 19.4 ಓವರ್‌ಗಳಲ್ಲಿ ಮುಟ್ಟುವ ಮೂಲಕ ಭರ್ಜರಿ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿತು. ನಾಯಕಿ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವೋಲ್ ಅವರ ಬ್ಯಾಟ್‌ನಿಂದ ಮೂಡಿಬಂದ ಬೃಹತ್ ರನ್‌ಗಳೇ ಡೆಲ್ಲಿ ತಂಡದ ಚಾಂಪಿಯನ್ ಕನಸನ್ನು ನುಚ್ಚುನೂರು ಮಾಡಿತು. ಇವರಿಬ್ಬರೂ ಸ್ಟಾರ್ ಆಟಗಾರ್ತಿಯರು ಡೆಲ್ಲಿ ಬೌಲರ್‌ಗಳನ್ನು ಬೆವರಿಳಿಸಿದಂತೂ ನಿಜ.
ಗೆಲುವಿಗೆ ಪ್ರಮುಖ ಕಾರಣಕರ್ತರು ಯಾರು?: ನಾಯಕಿ ಸ್ಮೃತಿ ಮಂಧಾನ 41 ಬಾಲ್‌ಗಳಲ್ಲಿ 3 ಸಿಕ್ಸ್, 12 ಬೌಂಡರಿಗಳ ಸಹಿತ 87 ರನ್‌ಗಳನ್ನು ಸಿಡಿಸಿದರು. ಜಾರ್ಜಿಯಾ ವೋಲ್ 54 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ 79 ರನ್‌ಗಳನ್ನು ಕಲೆಹಾಕಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡ ಗೆಲವು ಕಂಡಿತು ಅಂದರೆ ತಪ್ಪಾಗಲಾರದು. ರಿಚಾ ಘೋಷ್ ಅವರು 6(6) ಕಲೆಹಾಕಿ ವಿಕೆಟ್ ಒಪ್ಪಿಸಿದರೆ, ನಾಡಿನ್ ಡಿ ಕ್ಲರ್ಕ್ ಒಂದು ಬೌಂಡರಿ ಸಹಿತ 7 ರನ್ ಹಾಗೂ ರಾದಾ ಯಾದವ್ ಎರಡು ಬೌಂಡರಿಗನ್ನು ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ನಾಟ್ ಔಟ್ ಆಗಿ ಉಳಿದರು.
ಡೆಲ್ಲಿ ನೀಡಿದ 204 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಬ್ಯಾಟರ್ ಗ್ರೇಸ್ ಹ್ಯಾರಿಸ್ ವಿಕೆಟ್ ಕಳೆದುಕೊಂಡ ಕಾರಣ ಸಂಕಷ್ಟಕ್ಕೆ ಸಿಲುಕಿತು. ಆದರೆ, ನಾಯಕಿ ಸ್ಮೃತಿ ಮಂಧನಾ ಮತ್ತು ಜಾರ್ಜಿಯಾ ವೋಲ್ ಅವರ ಶತಕದ ಜೊತೆಯಾಟ ತಂಡವನ್ನು ಗೆಲುವಿನ ಹಾದಿಯತ್ತ ಕೊರೆದೊಯ್ಯಿತು. ಮಂಧನಾ 41 ಎಸೆತಗಳಲ್ಲಿ 87 ರನ್ ಹಾಗೂ ವೋಲ್ 79 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ನಂತರ ಬಂದ ಆಟಗಾರ್ತಿಯರು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ತತ್ತರಿಸಿದ ಡೆಲ್ಲಿ ಬೌಲರ್ಸ್: ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್‌ಗೆ ಡೆಲ್ಲಿ ಬೌಲರ್‌ಗಳು ತತ್ತರಿಸಿದರು. ಶ್ರೀ ಚರಣಿ 3.4 ಓವರ್‌ಗೆ ಯಾವುದೇ ವಿಕೆಟ್ ಇಲ್ಲದೆ ಅತೀ ಹೆಚ್ಚು 46 ರನ್ ಬಿಟ್ಟುಕೊಟ್ಟರು. ಎರಡನೇ ಅತೀ ಹೆಚ್ಚು ರನ್ ಕೊಟ್ಟಿದ್ದು, ನಂದನಿ ಶರ್ಮಾ, ಇವರು ನಾಲ್ಕು ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಕಬಳಿಸಿ 41 ರನ್‌ಗಳನ್ನು ಕೊಡುಗೆಯಾಗಿ ನೀಡಿದರು. ಉಳಿದಂತೆ ಮಾರಿಜಾನ್ನೆ ನಾಲ್ಕು ಓವರ್‌ನಲ್ಲಿ 38, ಚಿನೆಲ್ಲೆ ಹೆನ್ರಿ ನಾಲ್ಕು ಓವರ್‌ನಲ್ಲಿ 2 ವಿಕೆಟ್ ಕಬಳಿಸಿದರು. ಶಫಾಲಿ ವರ್ಮಾ 1 ಓವರ್‌ನಲ್ಲಿ 9 ರನ್, ಮಿನ್ನು ಮಣಿ ಎರಡು ಓವರ್ ಮಾಡಿ ಒಂದು ವಿಕೆಟ್ ಕಿತ್ತು 19 ರನ್‌ಗಳನ್ನು ಬಿಟ್ಟುಕೊಟ್ಟರೆ, ಸ್ನೇಹಾ ರಾಣ ಒಂದು ಓವರ್ ಎಸೆದು 15 ರನ್ ಕೊಟ್ಟರು.












Click it and Unblock the Notifications