RCB vs RR: ಆರ್‌ಸಿಬಿ ಆಡಿರೋ 6 ಪಂದ್ಯನೂ ಎಲಿಮಿನೇಟರ್; ಇಂದು ಮತ್ತೊಂದು ಅಷ್ಟೆ!
8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತು ಟೂರ್ನಿಯಿಂದಲೇ ಆಚೆ ಹೋಗುತ್ತದೆ ಎನ್ನುವಂತಿದ್ದ ಆರ್‌ಸಿಬಿ, ಅಸಾಧ್ಯವಾದುದನ್ನು ಸಾಧ್ಯವಾಗಿಸಿ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ. ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತ ಬಳಿಕ ಆರ್‌ಸಿಬಿ ಮುಂದಿನ ಹಂತಕ್ಕೇರಲು ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿತ್ತು, ಕೋಚ್ ಆಂಡಿ ಫ್ಲವರ್ ಕೂಡ ಮುಂದಿನ ಎಲ್ಲಾ ಪಂದ್ಯಗಳನ್ನು ಸೆಮಿಫೈನಲ್ ಎನ್ನುವಂತೆ ಆಡುತ್ತೇವೆ ಎಂದಿದ್ದರು.

ಅದೇ ರೀತಿ ಸತತವಾಗಿ 6 ಪಂದ್ಯಗಳನ್ನು ಎಲಿಮಿನೇಟರ್ ಎಂದುಕೊಂಡೇ ಆಡಿದ ಆರ್‌ಸಿಬಿ ಎಲ್ಲಾ ಪಂದ್ಯಗಳನ್ನು ಗೆದ್ದು, ಜೊತೆ ಅದೃಷ್ಟ ಕೂಡ ಕೈಹಿಡಿದ ಕಾರಣ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು.
ಇಂದು ಆರ್‌ಸಿಬಿ ಗೆಲ್ಲುವ ಫೇವರಿಟ್
ಆರ್‌ಸಿಬಿ ಆಡುತ್ತಿರುವ ರೀತಿಯನ್ನು ನೋಡಿದರೆ ಇಂದು ಅವರೇ ಗೆಲ್ಲುವ ಫೇವರಿಟ್ ಆಗಿದ್ದಾರೆ. ಐಪಿಎಲ್ ಆವೃತ್ತಿಯ ಮೊದಲಾರ್ಧದಲ್ಲಿ ಅದ್ಭುತವಾಗಿ ಆಡಿದ್ದ ರಾಜಸ್ಥಾನ ರಾಯಲ್ಸ್ ಬಳಿಕ ಸತತವಾಗಿ ಸೋಲುಕಂಡಿದ್ದು ಆತ್ಮವಿಶ್ವಾಸ ಕಡಿಮೆಯಾಗಿದೆ.
ಆರ್‌ಸಿಬಿ ತಂಡದ ಎಲ್ಲಾ ಆಟಗಾರರು ಫಾರ್ಮ್‌ಗೆ ಮರಳಿದ್ದಾರೆ, ವಿಲ್ ಜ್ಯಾಕ್ಸ್ ಇಂಗ್ಲೆಂಡ್ ತಂಡಕ್ಕೆ ಆಡಲು ಮರಳಿದ್ದರೂ, ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ಕೊಡುಗೆ ಕೊಟ್ಟಿರುವುದು ಇನ್ನೂ ಆತ್ಮವಿಶ್ವಾಸ ಹೆಚ್ಚಿಸಿದೆ.
ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ರಜತ್ ಪಟಿದಾರ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಮೊದಲಿನಿಂದಲೂ ತಂಡಕ್ಕೆ ಕಷ್ಟದಲ್ಲಿ ನೆರವಾಗಿದ್ದಾರೆ.
ಮುಖ್ಯವಾಗಿ ಸ್ವಪ್ನಿಲ್ ಸಿಂಗ್ ತಂಡಕ್ಕೆ ಬಂದ ನಂತರ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಬಂದಿದೆ. ಮೊಹಮ್ಮದ್ ಸಿರಾಜ್ ಲಯ ಕಂಡುಕೊಂಡಿದ್ದಾರೆ. ಧೋನಿ ಅಂತಹ ಬ್ಯಾಟರ್ ಇದ್ದಾಗಲೂ ಔಟ್ ಮಾಡಿ ತಂಡವನ್ನು ಗೆಲ್ಲಿಸಿದ ಯಶ್ ದಯಾಳ್ ಅವರ ಆತ್ಮವಿಶ್ವಾಸ ಬೇರೆಯದೇ ಮಟ್ಟದಲ್ಲಿರುತ್ತದೆ.
ಇಂದಿನ ಪಂದ್ಯದಲ್ಲಿ ಹೆಚ್ಚಿನ ಒತ್ತಡಕ್ಕೆ ಒಳಗಾಗದೆ ಮತ್ತೊಂದು ಪಂದ್ಯ ಎನ್ನುವಂತೆ ಆಡಿದರೆ ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಕ್ವಾಲಿಫೈಯರ್ 2 ಹಂತಕ್ಕೆ ಪ್ರವೇಶ ಪಡೆಯಬಹುದು.












Click it and Unblock the Notifications