RCB: ಯಶ್ ದಯಾಳ್, ಬೌಲ್ಟ್, ಚಾಹರ್, ಮುಖೇಶ್! ಆರ್‌ಸಿಬಿ ಬಲಿಷ್ಠ ಬೌಲಿಂಗ್ ಪಡೆ
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025 ರ ಮೆಗಾ ಹರಾಜಿಗೆ ಇನ್ನು ಒಂದು ವಾರ ಸಮಯವಿದ್ದು ಎಲ್ಲಾ ತಂಡಗಳು ವಿವಿಧ ಆಟಗಾರರನ್ನು ಖರೀದಿಸುವ ಲೆಕ್ಕಾಚಾರ ಹಾಕಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಉತ್ತಮ ತಂಡವನ್ನು ಕಟ್ಟಲು ಇದು ಉತ್ತಮ ಅವಕಾಶವಾಗಿದ್ದು, ಮೂವರು ಆಟಗಾರರನ್ನು ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿದೆ.
ಆರ್‌ಸಿಬಿ ತಂಡದ ಬ್ಯಾಟಿಂಗ್ ಯಾವಾಗಲೂ ಬಲಿಷ್ಠವಾಗಿದೆ, ಆದರೆ ಬೌಲಿಂಗ್ ವಿಚಾರದಲ್ಲಿ ತಂಡಕ್ಕೆ ಸಮಸ್ಯೆ ಉಂಟಾಗುತ್ತಿದೆ. ಅದರಲ್ಲೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡಲು ವಿಶೇಷ ಸಾಮರ್ಥ್ಯವೇ ಬೇಕಾಗುತ್ತದೆ. ಮೆಗಾ ಹರಾಜಿನಲ್ಲಿ ಬೌಲಿಂಗ್ ಪಡೆಯನ್ನು ಬಲಿಷ್ಠಗೊಳಿಸುವುದು ಆರ್ ಸಿಬಿ ಲೆಕ್ಕಾಚಾರವಾಗಿದೆ.

ಅಣಕು ಹರಾಜಿನಲ್ಲಿ ಆರ್ ಸಿಬಿ ತಂಡ
ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಅಣಕು ಹರಾಜು ನಡೆಸುತ್ತಿದ್ದಾರೆ. ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಹೇಗೆ ಯೋಚಿಸಬಹುದು, ಯಾವ ಆಟಗಾರರು ಹೆಚ್ಚಿನ ಮೊತ್ತಕ್ಕೆ ಹರಾಜಾಗಬಹುದು ಎನ್ನುವುನ್ನು ಅನುಕರಿಸಲು ಅಣಕು ಹರಾಜು ಆಯೋಜಿಸಿದ್ದಾರೆ.
ಅಣಕು ಹರಾಜಿನಲ್ಲಿ ಭಾಗಹಿಸಿದ ಆರ್ ಸಿಬಿ ಅಭಿಮಾನಿಗಳು ಸಮತೋಲಿತ ಉತ್ತಮ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 22 ಆಟಗಾರರನ್ನು ಖರೀದಿ ಮಾಡಿದ್ದು, ಡೇವಿಡ್ ವಾರ್ನರ್, ವಿಲ್ ಜಾಕ್ಸ್, ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ ಮತ್ತು ರಚಿನ್ ರವೀಂದ್ರರನ್ನು ಹರಾಜಿನಲ್ಲಿ ಕೊಳ್ಳುವ ಮೂಲಕ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ.
ಅಣಕು ಹರಾಜಿನಲ್ಲಿ ಆರ್ ಸಿಬಿ ಬೌಲಿಂಗ್ ಪಡೆ ಬಲಿಷ್ಠವಾಗಿ ಕಾಣುತ್ತದೆ. ಯಶ್ ದಯಾಳ್‌ರನ್ನು ರಿಟೇನ್ ಮಾಡಿಕೊಂಡಿದ್ದು, ವೇಗದ ಬೌಲರ್ ಟ್ರೆಂಟ್ ಬೌಲ್ಟ್ 13.50 ಕೋಟಿ ರೂಪಾಯಿಗೆ ಹರಾಜಾಗಿದ್ದಾರೆ. ದೀಪಕ್ ಚಾಹರ್ 5.50 ಕೋಟಿ ರೂಪಾಯಿ, ಮುಖೇಶ್ ಕುಮಾರ್ 5.50 ಕೋಟಿ ರೂಪಾಯಿ, ಶಾರ್ದೂಲ್ ಠಾಕೂರ್ 2 ಕೋಟಿ ರೂಪಾಯಿ, ವಿಜಯ್ ಕುಮಾರ್ ವೈಶಾಕ್ 90 ಲಕ್ಷ ರೂಪಾಯಿ, ಆರ್ ಸಾಯಿ ಕಿಶೋರ್ 10 ಕೋಟಿ ರೂಪಾಯಿಗೆ ಆರ್ ಸಿಬಿ ಪಾಲಾಗಿದ್ದಾರೆ.
ಟ್ರೆಂಟ್ ಬೌಲ್ಟ್ 100 ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದು 121 ವಿಕೆಟ್‌ಗಳನ್ನು ಹೊಂದಿದ್ದಾರೆ, ಆದರೆ ಮುಖೇಶ್, ವೈಶಾಕ್ ಮತ್ತು ಸಾಯಿ ಕಿಶೋರ್ 20 ಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 50 ವಿಕೆಟ್ ಪಡೆದುಕೊಂಡಿದ್ದಾರೆ. ಯಾವ ರೀತಿ ನೋಡಿದರೂ ಇದು ಉತ್ತಮ ಬೌಲಿಂಗ್ ಪಡೆಯಾಗಿ ಕಾಣುತ್ತದೆ. ವಿಲ್ ಜ್ಯಾಕ್ಸ್, ವೆಂಕಟೇಶ್ ಅಯ್ಯರ್ ಕೂಡ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಈ ತಂಡ ಬಲಿಷ್ಠವಾಗಿ ಕಾಣಿಸುತ್ತದೆ.
ಇದು ಅಭಿಮಾನಿಗಳು ಕಟ್ಟಿರುವ ಆರ್ ಸಿಬಿ ತಂಡವಾಗಿದ್ದು ನವೆಂಬರ್ 24-25ರಂದು ಜೆಡ್ಡಾದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಇದೇ ರೀತಿ ಬಲಿಷ್ಠ ತಂಡ ಕಟ್ಟಲಿ ಎಂದು ಆರ್ ಸಿಬಿ ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications