RCB: 38 ಎಸೆತಗಳಲ್ಲಿ 68 ರನ್; ಬಿಬಿಎಲ್‌ನಲ್ಲಿ ಅಬ್ಬರಿಸಿದ ಆರ್‌ಸಿಬಿ ಆಲ್‌ರೌಂಡರ್
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ ಸಿಬಿ ಸೇರಿರುವ ಟಿಮ್ ಡೇವಿಡ್ ಅಭಿಮಾನಿಗಳಿಗೆ ದೊಡ್ಡ ಸೂಚನೆ ಕೊಟ್ಟಿದ್ದಾರೆ. ವಿಲ್ ಜ್ಯಾಕ್ಸ್ ಕೈಬಿಟ್ಟು ಟಿಮ್ ಡೇವಿಡ್‌ರನ್ನು ಖರೀದಿ ಮಾಡಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೆ ಟಿಮ್ ಡೇವಿಡ್‌ರನ್ನು ಆಯ್ಕೆ ಮಾಡಿದ್ದು ಸರಿಯಾದ ನಿರ್ಧಾರ ಎನ್ನುವಂತೆ ಟಿಮ್ ಡೇವಿಡ್ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳಿಗೂ ಸಂತಸ ತಂದಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೋಬರ್ಟ್ ಹರಿಕೇನ್ಸ್ ಪರವಾಗಿ ಆಡುತ್ತಿರುವ ಟಿಮ್ ಡೇವಿಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಶುಕ್ರವಾರ ನಡೆದ ಸಿಡ್ನಿ ಥಂಡರ್ಸ್ ವಿರುದ್ಧ ಅಮೋಘ ಅರ್ಧಶತಕ ಸಿಡಿಸುವ ಮೂಲಕ ಹೋಬರ್ಟ್ ಹರಿಕೇನ್ಸ್‌ಗೆ ಸುಲಭ ಗೆಲುವು ತಂದುಕೊಟ್ಟಿದ್ದಾರೆ.

6 ಸಿಕ್ಸರ್ 4 ಬೌಂಡರಿ 68 ರನ್
ಮೊದಲು ಬ್ಯಾಟಿಂಗ್ ಮಾಡಿದ ಸಿಡ್ನಿ ಥಂಡರ್ಸ್ 6 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ನಾಯಕ ಡೇವಿಡ್ ವಾರ್ನರ್ 66 ಎಸೆತಗಳಲ್ಲಿ 88 ರನ್ ಗಳಿಸಿ ತಂಡ ಉತ್ತಮ ಮೊತ್ತ ಕಲೆಹಾಕಲು ಕಾರಣವಾದರು. ಸ್ಯಾಮ್ ಬಿಲ್ಲಿಂಗ್ಸ್ 15 ಎಸೆತಗಳಲ್ಲಿ 28 ರನ್ ಗಳಿಸಿದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸ್ಯಾಮ್ ಕೋನ್‌ಸ್ಟಾಸ್ ಕೇವಲ 4 ರನ್ ಗಳಿಸಿ ಔಟಾದರು.
ಸವಾಲಿನ ಗುರಿಯನ್ನು ಬೆನ್ನಟ್ಟಿದ ಹೋಬರ್ಟ್ ಹರಿಕೇನ್ಸ್ ಸ್ಫೋಟಕ ಆರಂಭ ಪಡೆದರೂ ಬೇಗನೆ ವಿಕೆಟ್ ಕಳೆದುಕೊಂಡಿತು. ಮಿಚೆಲ್ ಓವೆನ್ 6 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರೆ, ಮ್ಯಾಥ್ಯೂ ವೇಡ್ 5 ಎಸೆತಗಳಲ್ಲಿ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಚಾರ್ಲಿ ವಾಕಿಮ್ 16 ಎಸೆತಗಳಲ್ಲಿ 16 ರನ್ ಗಳಿಸಿದರೆ, ನಿಖಿಲ್ ಚೌಧರಿ 23 ಎಸೆತಗಳಲ್ಲಿ 29 ರನ್ ಗಳಿಸಿದರು. ಈ ಸಂದರ್ಭದಲ್ಲಿ ಮೈದಾನಕ್ಕಿಳಿದ ಟಿಮ್ ಡೇವಿಡ್ ಎದುರಾಳಿ ಬೌಲರ್ ಗಳನ್ನು ಮನ ಬಂದಂತೆ ದಂಡಿಸಿದರು. ಕೇವಲ 38 ಎಸೆತಗಳಲ್ಲಿ 4 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 68 ರನ್ ಗಳಿಸಿದರು. ಕ್ರಿಸ್ ಜೋರ್ಡಾನ್ 13 ಎಸೆತಗಳಲ್ಲಿ 18 ರನ್ ಗಳಿಸಿದರು.
ಟಿಮ್ ಡೇವಿಡ್‌ರ ಅಮೋಘ ಬ್ಯಾಟಿಂಗ್ ನೆರವಿನಿಂದ 16.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿದ ಹೋಬರ್ಟ್ ಹರಿಕೇನ್ಸ್ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಿಮ್ ಡೇವಿಡ್ ಆರ್ ಸಿಬಿಯ ಪ್ರಮುಖ ಅಸ್ತ್ರವಾಗುವ ಎಲ್ಲಾ ಸೂಚನೆ ಕೊಟ್ಟಿದ್ದಾರೆ. ದಿನೇಶ್ ಕಾರ್ತಿಕ್ ಬಳಿಕ ಅರ್ ಸಿಬಿ ಫಿನಿಷರ್ ಸ್ಥಾನಕ್ಕೆ ಸೂಕ್ತ ಆಟಗಾರ ಸಿಕ್ಕಿದ ಎನ್ನುವ ಭಾವನೆ ಅಭಿಮಾನಿಗಳಲ್ಲಿದೆ. ಬಿಬಿಎಲ್‌ನಲ್ಲಿ ಆಡುತ್ತಿರುವಂತೆ ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications