Ranji Trophy: ಮನೀಶ್ ಪಾಂಡೆ ಅಮೋಘ ಆಟ: ರೈಲ್ವೇಸ್ ವಿರುದ್ಧ 1 ವಿಕೆಟ್ ರೋಚಕ ಗೆಲುವು ಸಾಧಿಸಿದ ಕರ್ನಾಟಕ
ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಒಂದು ವಿಕೆಟ್‌ನ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ರೈಲ್ವೇಸ್‌ನ ಮಾರಕ ಬೌಲಿಂಗ್ ದಾಳಿಯನ್ನು ಎದುರಿಸಿ ನಿಂತ ಮನೀಶ್ ಪಾಂಡೆ ಅಜೇಯ ಅರ್ಧಶತಕ ಗಳಿಸುವ ಮೂಲಕ ರಾಜ್ಯಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಸೂರತ್‌ನ ಲಾಲಾಭಾಯಿ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬೌಲರ್ ಗಳು ಮೇಲುಗೈ ಸಾಧಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೇಸ್ ಮೊದಲ ಇನ್ನಿಂಗ್ಸ್‌ನಲ್ಲಿ 155 ರನ್‌ಗಳಿಗೆ ಆಲೌಟ್ ಆದರೆ, ಕರ್ನಾಟಕ 174 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ರೈಲ್ವೇಸ್ 244 ರನ್‌ಗಳಿಗೆ ಆಲೌಟ್ ಆಗುವ ಮೂಲಕ ರಾಜ್ಯಕ್ಕೆ 226 ರನ್‌ಗಳ ಗುರಿ ನೀಡಿತು.

ರೈಲ್ವೇಸ್ ಪರವಾಗಿ 82 ರನ್ ಗಳಿಸಿದ ಮೊಹಮ್ಮದ್ ಸೈಫ್ ರಾಜ್ಯಕ್ಕೆ ಸವಾಲಿನ ಗುರಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೂರಜ್ ಅಹುಜಾ 48 ರನ್ ಗಳಿಸಿದರೆ, ನಾಯಕ ಪ್ರಥಮ್ ಸಿಂಗ್ 33 ರನ್, ಸಹಬ್ ಯುವರಾಜ್ 28 ರನ್ ಗಳಿಸಿದರು. ವೇಗದ ಬೌಲರ್ ವಿಜಯ್ ಕುಮಾರ್ ವೈಶಾಖ್ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವ ಮೂಲಕ ನೆರವಾದರು. ವಿಧ್ವತ್ ಕಾವೇರಪ್ಪ 2 ವಿಕೆಟ್ ಪಡೆದರೆ, ವಾಸುಕಿ ಕೌಶಿಕ್, ರವಿಕುಮಾರ್ ಸಮರ್ಥ್ ಮತ್ತು ಹಾರ್ದಿಕ್ ರಾಜ್ ತಲಾ ಒಂದು ವಿಕೆಟ್ ಪಡೆದರು.
ಮನೀಶ್ ಪಾಂಡೆ, ವೈಶಾಖ್ ಹೋರಾಟ
226 ರನ್‌ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಡೇಗಾ ನಿಶ್ಚಲ್ ಕೇವಲ ಒಂದು ರನ್ ಗಳಿಸಿ ಔಟಾದರು. ರವಿಕುಮಾರ್ ಸಮರ್ಥ್ 35 ರನ್, ಅನೀಶ್ ಕೆವಿ 34 ರನ್ ಗಳಿಸುವ ಮೂಲಕ ನೆರವಾದರು. ಈ ಜೋಡಿ ಎರಡನೇ ವಿಕೆಟ್‌ಗೆ 68 ರನ್ ಕಲೆಹಾಕಿತು. ಅನೀಶ್ ಕೆವಿ ಔಟಾದ ಬಳಿಕ ಕ್ರೀಸ್‌ಗೆ ಬಂದ ನಾಯಕ ನಿಕಿನ್ ಜೋಸ್ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು.
ರವಿಕುಮಾರ್ ಸಮರ್ಥ್ ಕೂಡ ಔಟಾದರು. 75 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿತು. ಹಾರ್ದಿಕ್ ರಾಜ್ 14 ರನ್ ಗಳಿಸಿ ಔಟಾದರು. ಕಿಶನ್ ಬೆದರೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 99 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ರಾಜ್ಯಕ್ಕೆ ಸೋಲಿನ ಭೀತಿ ಎದುರಾಯಿತು.
ಒಂದು ಕಡೆ ಮನೀಶ್ ಪಾಂಡೆ ಎಚ್ಚರಿಕೆಯಿಂದ ಆಡುತ್ತಿದ್ದರು. ಕಿಶನ್ ಬೆದರೆ ಬಳಿಕ ಕ್ರೀಸ್‌ಗೆ ಬಂದ ಶ್ರೀನಿವಾಸ್ ಶರತ್ ಅಮೂಲ್ಯ 23 ರನ್‌ಗಳನ್ನು ಗಳಿಸಿದರು, ಈ ಜೋಡಿ 34 ರನ್‌ಗಳನ್ನು ಕಲೆಹಾಕಿತು. ನಂತರ ಕ್ರೀಸ್‌ಗೆ ಬಂದ ವೈಶಾಖ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 38 ರನ್ ಗಳನ್ನು ಗಳಿಸುವ ಮೂಲಕ ಮನೀಶ್ ಪಾಂಡೆ ಜೊತೆಗೆ 64 ರನ್‌ಗಳ ಅಮೂಲ್ಯ ಜೊತೆಯಾಟ ಆಡಿದರು. ವೈಶಾಖ್ ಔಟಾದ ಬಳಿಕ ವಿಧ್ವತ್ ಕಾವೇರಪ್ಪ 8 ರನ್ ಗಳಿಸಿ ಔಟಾದರು, ಬಳಿಕ ಮನೀಶ್ ಪಾಂಡೆ ಯಾವುದೇ ತಪ್ಪಿಗೆ ಅವಕಾಶ ಕೊಡದೆ ಕರ್ನಾಟಕ ತಂಡವನ್ನು ಗೆಲುವಿನ ದಡ ಸೇರಿಸಿದರು.












Click it and Unblock the Notifications