IPL 2025: ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ರಾಜಸ್ಥಾನ ರಾಯಲ್ಸ್ ಪ್ರತಿಕ್ರಿಯೆ
ಐಪಿಎಲ್ 2025ರ ಆವೃತ್ತಿಯ ಮೇಲೆ ಮ್ಯಾಚ್ ಫಿಕ್ಸಿಂಗ್ ಕರಿನೆರಳು ಆವರಿಸಿದೆ. ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದ ಬೆನ್ನಲ್ಲೇ ಎಲ್ಲಾ ಫ್ರಾಂಚೈಸಿಗಳಿಗೂ ಬಿಸಿಸಿಐ ಎಚ್ಚರಿಕೆ ರವಾನಿಸಿತ್ತು. ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.
ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ (RCA) ತಾತ್ಕಾಲಿಕ ಸಮಿತಿಯ ಸಂಚಾಲಕ ಜೈದೀಪ್ ಬಿಹಾನಿ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದಾರೆ. ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 2 ರನ್‌ಗಳಿಂದ ಸೋತಿತ್ತು, ಈ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೈದೀಪ್ ಬಿಹಾನಿ, ಕೊನೆಯ ಓವರ್ ನಲ್ಲಿ ರಾಜಸ್ಥಾನ ರಾಯಲ್ಸ್ 9 ರನ್‌ಗಳನ್ನು ಗಳಿಸಲು ವಿಫಲವಾಗಿದೆ. ಇಲ್ಲಿ ಏನಾಗಿದೆ ಎನ್ನುವುದನ್ನು ಒಂದು ಮಗು ಕೂಡ ಅರ್ಥ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದರು.

ಎರಡು ವರ್ಷ ನಿಷೇಧ
ರಾಜಸ್ಥಾನ ರಾಯಲ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಇದೇ ಮೊದಲೇನಲ್ಲ ಬೆಟ್ಟಿಂಗ್ ಹಗರಣದಲ್ಲಿ ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಂದ 2 ವರ್ಷಗಳ ಕಾಲ (2016 ಮತ್ತು 2017) ನಿಷೇಧಿಸಲಾಗಿತ್ತು. 2013 ರಲ್ಲಿ ನಡೆದ ಬೆಟ್ಟಿಂಗ್ ಹಗರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಈ ನಿರ್ಧಾರ ಮಾಡಲಾಗಿತ್ತು.
ಅಂದಿನ ತಂಡದ ಮಾಲೀಕ ರಾಜ್ ಕುಂದ್ರಾ ಅವರನ್ನು ಕ್ರಿಕೆಟ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಜೀವಮಾನದ ನಿಷೇಧ ಹೇರಲಾಯಿತು, ಮನೋಜ್ ಬಡಾಲೆ ಮತ್ತು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಫ್ರಾಂಚೈಸಿಯನ್ನು ವಹಿಸಿಕೊಂಡವು.
ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಪ್ರತಿಕ್ರಿಯೆ
ತಮ್ಮ ತಂಡದ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದ ಬೆನ್ನಲ್ಲೇ ಆರ್‌ಆರ್ ಆಡಳಿತ ಮಂಡಳಿಯು ಈ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ತಮ್ಮ ವಿರುದ್ಧದ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ರಾಜಸ್ಥಾನ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಕ್ರೀಡಾ ಕಾರ್ಯದರ್ಶಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ.
"ಆಡ್ ಹಾಕ್ ಸಮಿತಿಯ ಸಂಚಾಲಕರು ಮಾಡಿರುವ ಎಲ್ಲಾ ಆರೋಪಗಳನ್ನು ನಾವು ತಿರಸ್ಕರಿಸುತ್ತೇವೆ. ಇಂತಹ ಸಾರ್ವಜನಿಕ ಹೇಳಿಕೆಗಳು ದಾರಿತಪ್ಪಿಸುವುದಲ್ಲದೆ, ರಾಜಸ್ಥಾನ ರಾಯಲ್ಸ್, ರಾಯಲ್ ಮಲ್ಟಿ ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಆರ್‌ಎಂಪಿಎಲ್), ರಾಜಸ್ಥಾನ ಕ್ರೀಡಾ ಮಂಡಳಿ ಮತ್ತು ಬಿಸಿಸಿಐನ ಖ್ಯಾತಿ ಮತ್ತು ವಿಶ್ವಾಸಾರ್ಹತೆಗೆ ಗಂಭೀರ ಹಾನಿಯನ್ನುಂಟುಮಾಡಿವೆ. ಅವು ಕ್ರಿಕೆಟ್‌ನ ಸಮಗ್ರತೆಯನ್ನು ಸಹ ಹಾಳುಮಾಡುತ್ತವೆ," ಎಂದು ಆರ್‌ಆರ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ, ಒಪ್ಪಂದದ ಅವಶ್ಯಕತೆಗಳು ಮತ್ತು ಬಿಸಿಸಿಐ ನಿರ್ದೇಶನಗಳ ಪ್ರಕಾರ, ನಾವು ರಾಜ್ಯ ಸಂಘ ಮತ್ತು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡಬೇಕು. ಆರ್‌ಎಂಪಿಎಲ್ ಕಳೆದ 18 ವರ್ಷಗಳಿಂದ ಇದನ್ನು ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ಮಾಡಿದೆ. ಜೈಪುರದಲ್ಲಿ ಐಪಿಎಲ್ ಪಂದ್ಯಗಳ ಆತಿಥ್ಯದ ಹಕ್ಕುಗಳನ್ನು ಆರ್‌ಎಸ್‌ಎಸ್‌ಸಿ ಹೊಂದಿದೆ ಎಂದು ಬಿಸಿಸಿಐ ದೃಢಪಡಿಸಿದೆ ಮತ್ತು ಅನುಮೋದಿಸಿದೆ. ಯಶಸ್ವಿ ಐಪಿಎಲ್ ಋತುವನ್ನು ಖಚಿತಪಡಿಸಿಕೊಳ್ಳಲು ಫ್ರಾಂಚೈಸಿ ರಾಜ್ಯ ಸರ್ಕಾರದ ಮಾರ್ಗದರ್ಶನ ಮತ್ತು ಬೆಂಬಲದಡಿಯಲ್ಲಿ ಬಿಸಿಸಿಐ ಮತ್ತು ಆರ್‌ಎಸ್‌ಎಸ್‌ಸಿಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.












Click it and Unblock the Notifications