Rahul Dravid: ಕೋಚ್ ಆಗಿ ಮುಂದುವರೆಯಲಿರುವ ರಾಹುಲ್ ದ್ರಾವಿಡ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಗೆ ಒಪ್ಪಂದವನ್ನು ವಿಸ್ತರಿಸುವುದಾಗಿ ಘೋಷಿಸಿದೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ 2023 ರ ನಂತರ ಭಾರತ ತಂಡದ ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಅವರ 2 ವರ್ಷಗಳ ಅಧಿಕಾರಾವಧಿಯು ಕೊನೆಗೊಂಡಿತು.
"ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಗೆ ಒಪ್ಪಂದದ ವಿಸ್ತರಣೆಯನ್ನು ಪ್ರಕಟಿಸಿದೆ" ಎಂದು ಬಿಸಿಸಿಐ ಪ್ರಕಟಣೆಯಲ್ಲಿ ಹೇಳಿದೆ. ರಾಹುಲ್ ದ್ರಾವಿಡ್ ಅವರ ಹೊಸ ಒಪ್ಪಂದದ ಅವಧಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಅವರು ಭಾರತ ಟಿ20 ತಂಡದ ಕೋಚ್ ಆಗಲು ನಿರಾಕರಿಸಿದ ನಂತರ, ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿಯನ್ನು ವಿಸ್ತರಿಸಲಾಗಿದೆ.
ಅಧಿಕಾರಾವಧಿ ಮುಂದುವರಿಕೆ!
ಐಪಿಎಲ್ 2024 ರಲ್ಲಿ ಮೆಂಟರ್‌ಶಿಪ್ ಪಾತ್ರಕ್ಕಾಗಿ ಐಪಿಎಲ್ ಫ್ರಾಂಚೈಸ್ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ದ್ರಾವಿಡ್‌ಗೆ ಆಫರ್ ನೀಡಿತ್ತು ಎಂದು ಹೇಳಲಾಗಿದೆ. ಆದರೆ, ದ್ರಾವಿಡ್ ಅವರು ಈಗ ಭಾರತ ತಂಡದಲ್ಲಿ ತಮ್ಮ ಅಧಿಕಾರಾವಧಿಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
"ಈ ಅವಧಿಯಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ, ನನ್ನ ದೃಷ್ಟಿಕೋನವನ್ನು ಅನುಮೋದಿಸಿದ್ದಕ್ಕಾಗಿ ಮತ್ತು ಬೆಂಬಲ ನೀಡಿದ ಬಿಸಿಸಿಐ ಮತ್ತು ಪದಾಧಿಕಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನನ್ನ ಕುಟುಂಬ ನನಗೆ ಸಾಕಷ್ಟು ಬೆಂಬಲ ನೀಡಿದೆ, ಅದಕ್ಕಾಗಿ ಅವರನ್ನು ಪ್ರಶಂಸೆ ಮಾಡುತ್ತೇನೆ. ತೆರೆಮರೆಯಲ್ಲಿ ಅವರ ಪಾತ್ರವು ಅಮೂಲ್ಯವಾಗಿದೆ. ವಿಶ್ವಕಪ್ ನಂತರ ನಾವು ಹೊಸ ಸವಾಲುಗಳನ್ನು ಸ್ವೀಕರಿಸುತ್ತಿದ್ದಂತೆ, ಹೊಸ ಸವಾಲಿಗೆ ಸಿದ್ದರಾಗಿರುತ್ತೇವೆ" ಎಂದು ದ್ರಾವಿಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಮಾಜಿ ನಾಯಕ ಕೂಡ ತಂಡದ ಸಕಾರಾತ್ಮಕ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದಾರೆ ಮತ್ತು ಅದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.
"ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಸೃಷ್ಟಿಸಿದ ವಾತಾವರಣದ ಬಗ್ಗೆ ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ. ಇದು ಗೆಲುವಿನ ಕ್ಷಣಗಳಲ್ಲಿ ಅಥವಾ ಸೋಲಿನ ಕ್ಷಣಗಳಲ್ಲಿ ಚೇತರಿಸಿಕೊಳ್ಳುವ ಸಂಸ್ಕೃತಿಯಾಗಿದೆ. ನಮ್ಮ ತಂಡವು ಹೊಂದಿರುವ ಕೌಶಲ್ಯಗಳು ಮತ್ತು ಪ್ರತಿಭೆಯು ಅಸಾಧಾರಣವಾಗಿದೆ ಮತ್ತು ನಾವು ಒತ್ತು ನೀಡಿರುವುದು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುವುದು ಮತ್ತು ನಮ್ಮ ಸಿದ್ಧತೆಗಳಿಗೆ ಅಂಟಿಕೊಳ್ಳುವುದು, ಇದು ಒಟ್ಟಾರೆ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ" ಎಂದು ದ್ರಾವಿಡ್ ತಿಳಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರ ಎರಡನೇ ಅವಧಿಯ ಮುಖ್ಯ ಕೋಚ್ ಆಗಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಆರಂಭವಾಗಲಿದೆ. ಟೀಂ ಇಂಡಿಯಾ ಡಿಸೆಂಬರ್ 10 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.












Click it and Unblock the Notifications