Rafael Nadal: ನಿವೃತ್ತಿ ಘೋಷಿಸಿದ 22 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ಟೆನಿಸ್ ದಿಗ್ಗಜ ರಾಫೆಲ್ ನಡಾಲ್
ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ ರಾಫೆಲ್ ನಡಾಲ್ ತಮ್ಮ ಸುದೀರ್ಘ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ವಿಡಿಯೋ ಹಂಚಿಕೊಂಡಿರುವ ಅವರು ಟೆನಿಸ್‌ನಿಂದ ನಿವೃತ್ತಿಯಾಗುವುದಾಗಿ ಘೋಷಣೆ ಮಾಡಿದ್ದಾರೆ. ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಸ್ಪೇನ್‌ನಲ್ಲಿ ನಡೆಯಲಿರುವ ಡೇವಿಸ್ ಕಪ್ ಅವರ ಕೊನೆಯ ಪ್ರವಾಸವಾಗಿರಲಿದೆ.
22 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ನಡಾಲ್, ಟೆನಿಸ್‌ನ ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ. 14 ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಅವರು ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಒಟ್ಟು 36 ಮಾಸ್ಟರ್ಸ್ ಪ್ರಶಸ್ತಿಗಳು ಮತ್ತು ಒಂದು ಒಲಂಪಿಕ್ಸ್ ಚಿನ್ನದ ಪದಕ ಸೇರಿ, 92 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ನಡಾಲ್ ಅವರು ಸಿಂಗಲ್ಸ್‌ನಲ್ಲಿ ವೃತ್ತಿಜೀವನದ ಗೋಲ್ಡನ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ ಮೂವರು ಮೂವರು ಪುರುಷ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, "ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ಕಳೆದ ಎರಡು ವರ್ಷಗಳು ನನಗೆ ತುಂಬಾ ಕಷ್ಟಕರವಾಗಿತ್ತು" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಇದು ಕಠಿಣ ನಿರ್ಧಾರವಾಗಿದೆ, ನಿವೃತ್ತಿಯ ನಿರ್ಧಾರ ತೆಗೆದುಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಯಿತು. ಜೀವನದಲ್ಲಿ ಎಲ್ಲದಕ್ಕೂ ಆರಂಭ ಮತ್ತು ಅಂತ್ಯವಿದೆ ಎಂದು ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ 2024ರ ಬಳಿಕ ಕಳೆದ ತಿಂಗಳು ಲೇವರ್ ಕಪ್ 2024 ರಿಂದ ಹಿಂದೆ ಸರಿದಿದ್ದರು, ಈಗ ನಡಾಲ್ ಡೇವಿಸ್ ಕಪ್ 2024 ತಮ್ಮ ಮುಂದಿನ ಪ್ರವಾಸ ಎಂದು ದೃಢಪಡಿಸಿದ್ದಾರೆ. ರಾಫೆಲ್ ನಡಾಲ್ ಈ ಋತುವಿನಲ್ಲಿ 12-7 ಪಂದ್ಯಗಳ ದಾಖಲೆ ಹೊಂದಿದ್ದಾರೆ. ಕೊನೆಯ ಬಾರಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡಿದ್ದ ಅವರು, ಎರಡನೇ ಸುತ್ತಿನಲ್ಲಿ ನೊವಾಕ್ ಜೊಕೊವಿಕ್ ಎದುರು ಸೋತಿದ್ದರು.
ನವೆಂಬರ್ 19-21ರ ನಡುವೆ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಗಾಯದಿಂದ ಬಳಲುತ್ತಿದ್ದ ರಾಫೆಲ್ ನಡಾಲ್, ಗುಂಪು ಹಂತದ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಕ್ವಾರ್ಟರ್ ಫೈನಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ ನಂತರ ಅವರು ಟೆನಿಸ್ ಅಂಗಳದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ, 2004ರಲ್ಲಿ ಸ್ಪೇನ್ ಡೇವಿಸ್ ಪ್ರಶಸ್ತಿ ಗೆಲ್ಲಲು ನಡಾಲ್ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಆರಂಭದ ದಿನಗಳಲ್ಲಿ ಡೇವಿಸ್ ಕಪ್‌ನಲ್ಲಿ ಆಡಿದ್ದನ್ನು ನಿವೃತ್ತಿ ಘೋಷಣೆ ವೇಳೆ ಉಲ್ಲೇಖಿಸಿದ್ದಾರೆ.
ಜೀವನದಲ್ಲಿ ಪ್ರತಿಯೊಂದಕ್ಕೂ ಒಂದು ಆರಂಭ ಮತ್ತು ಅಂತ್ಯವಿದೆ. ನಾನು ಊಹಿಸಿರುವುದಕ್ಕಿಂತ, ಸುದೀರ್ಘ ಮತ್ತು ಹೆಚ್ಚಾಗಿ ಯಶಸ್ಸು ಕಂಡಿರುವ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನ ಕೊನೆಯ ಪಂದ್ಯಾವಳಿ ಡೇವಿಸ್ ಕಪ್ ಫೈನಲ್ ಆಗಿರುತ್ತದೆ. ನಾನು ನನ್ನ ದೇಶವನ್ನು ಪ್ರತಿನಿಧಿಸುತ್ತಿರುವುದು ಸಂತಸದ ವಿಚಾರ ಎಂದಿರುವ ಅವರು, ತಮ್ಮ ಪ್ರತಿಸ್ಪರ್ಧಿಗಳು ಮತ್ತು ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.












Click it and Unblock the Notifications