Paris Olympics: ಹ್ಯಾಟ್ರಿಕ್ ಪದಕ ಗೆಲ್ಲುವ ಸಿಂಧು ಕನಸು ಭಗ್ನ; ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ಅಭಿಯಾನ ಅಂತ್ಯವಾಗಿದೆ. ಮಹಿಳೆಯರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ನಿರಾಸೆಯನ್ನು ಅನುಭವಿಸಿದ್ದಾರೆ.
ಗುರುವಾರ ತಡ ರಾತ್ರಿ ನಡೆದ 16 ಘಟ್ಟದ ಪಂದ್ಯದಲ್ಲಿ ಸಿಂಧು 19-21, 14-21 ರಲ್ಲಿ ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ ಸೋಲು ಅನುಭವ ಅನುಭವಿಸಿದರು. ಲಕ್ಷ್ಯ ಸೇನ್ ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಪದಕದ ಆಸೆಯನ್ನು ಉಳಿಸಿರುವ ಏಕೈಕ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದ ಸಿಂಧು, ಈ ಬಾರಿ ಮೂರನೇ ಬಾರಿ ಪದಕದ ಆಸೆಯನ್ನು ಕಾಣುತ್ತಿದ್ದರು. ಆದರೆ ಚೀನಾದ ಹಿಂ ಬಿಂಗ್ ಅವರ ಆಟದ ಮುಂದೆ ಸೋಲು ಅನುಭವಿಸಿದರು.
ಜಿದ್ದಾ ಜಿದ್ದು
ಮೊದಲ ಗೇಮ್‌ನಲ್ಲಿ ಜಿದ್ದಾಜಿದ್ದಿನ ಪ್ರದರ್ಶನ ಕಂಡು ಬಂದಿತು. ಉಭಯ ಆಟಗಾರ್ತಿಯರು ಅಂಕಗಳನ್ನು ನೀಡಲು ಹಿಂದೇಟು ಹಾಕಿದರು. ಈ ವೇಳೆ ಚೀನಾ ಆಟಗಾರ್ತಿ ಆರಂಭದಲ್ಲಿ ಸತತ ಐದು ಅಂಕಗಳನ್ನು ಗಳಿಸಿ ಸಿಂಧು ಮೇಲೆ ಒತ್ತಡ ಹೇರಿದಳು. ಆ ಬಳಿಕ ಸುಲಭವಾಗಿ ಚೀನಾ ಆಟಗಾರ್ತಿ ಮೊದಲಾದರ್ಧದಲ್ಲಿ ಮೇಲುಗೈ ಸಾಧಿಸಿದರು.
ಮೊದಲ ಗೇಮ್‌ನ ಎರಡನೇ ಅವಧಿಯಲ್ಲಿ ಉಭಯ ಆಟಗಾರರು ಮನಮೋಹಕ ಬ್ಯಾಡ್ಮಿಂಟನ್ ಪ್ರದರ್ಶನ ನೀಡಿದರು. ಈ ವೇಳೆ 12-12, 13-13ರಿಂದ ಅಂಕಗಳು ಸಮಾನವಾಗಿ ಸಾಗುತ್ತಿದ್ದವು. ಅಲ್ಲದೆ 19-19 ರಿಂದಲೂ ಪಂದ್ಯ ಕುತೂಹಲ ಮೂಡಿಸಿತ್ತು. ಆದರೆ ಚೀನಾ ಆಟಗಾರ್ತಿ ಕೊನೆಯಲ್ಲಿ ಸತತ 2 ಅಂಕ ಕಲೆ ಹಾಕಿ ಪಂದ್ಯ ಗೆದ್ದರು.
ನಿರ್ಣಾಯಕ ಗೇಮ್
ಎರಡನೇ ಗೇಮ್‌ನಲ್ಲಿ ಸಿಂಧುಗೆ ಗೆಲುವು ಅನಿವಾರ್ಯವಾಗಿತ್ತು. ಈ ಪಂದ್ಯದಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸುವ ಗುರಿಯನ್ನು ಸಿಂಧು ಹೊಂದಿದರು. ಆದರೆ ಅದು ಫಲಿಸಲಿಲ್ಲ. ಚೀನಾದ ಹಿ ಬಿಂಗ್ ಜಿಯಾವೊ ಸೊಗಸಾದ ಗ್ಯಾಪ್ ಶಾಟ್‌ಗಳು ಹಾಗೂ ಕ್ರಾಸ್ ಕೋರ್ಟ್ ಶಾಟ್‌ಗಳ ಮೂಲಕ ಗಮನ ಸೆಳೆದರು. ಅಲ್ಲದೆ ಅಂಕಗಳನ್ನು ಬಾಚಿಕೊಂಡು ಅಬ್ಬರಿಸಿದರು.
ಎರಡನೇ ಗೇಮ್‌ನ ಯಾವುದೇ ಹಂತದಲ್ಲಿ ಸಿಂಧು, ಚೀನಾದ ಹಿ ಬಿಂಗ್ ಜಿಯಾವೊಗೆ ಸವಾಲು ಒಡ್ಡುವಂತಹ ಆಟವನ್ನು ಆಡಲಿಲ್ಲ. ಪರಿಣಾಮ ಪಂದ್ಯವನ್ನು ಕೈ ಚೆಲ್ಲಿದರು. ಈ ಮೂಲಕ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಪದಕದ ಆಸೆಯನ್ನು ಚಿಗುರಿಸಿದ್ದ ಸಿಂಧು ಅಭಿಯಾನ ಅಂತ್ಯವಾಯಿತು.
ಸಿಂಧು ಹೇಳಿದ್ದೇನು?
ಈ ಪಂದ್ಯದಲ್ಲಿ ತಪ್ಪುಗಳನ್ನು ನಿಯಂತ್ರಿಸಲು ಬಯಸಿದ್ದೆ. ಎರಡನೇ ಗೇಮ್‌ನಲ್ಲಿ ನಾನು ಎಡವಿದ್ದೇನೆ. ನಿರ್ಣಾಯಕ ಗೇಮ್ ಗೆಲ್ಲುವಲ್ಲಿ ವಿಫಲವಾಗಿದ್ದು ನೋವು ತಂದಿದೆ. ಈ ಹಂತದಲ್ಲಿ ಪ್ರತಿ ಪಾಯಿಂಟ್‌ಗೂ ಕಠಿಣ ಸವಾಲು ಎಸೆದಿದ್ದೇನೆ. ನಾನು ರಕ್ಷಣಾತ್ಮಕ ಆಟದ ವೇಳೆ ತಪ್ಪುಗಳನ್ನು ಮಾಡಿದ್ದೇನೆ. ನಾನು ಮಾಡಿದ ತಪ್ಪುಗಳಿಂದಲೇ ಅವಳ ಆತ್ಮವಿಶ್ವಾಸ ಬೆಳೆಯಿತು ಎಂದು ಸಿಂಧು ತಿಳಿಸಿದ್ದಾರೆ.












Click it and Unblock the Notifications