RCB vs PBKS: ಟಿಮ್ ಡೇವಿಡ್ ಹೋರಾಟ ವ್ಯರ್ಥ: ಆರ್‌ಸಿಬಿಗೆ ತವರಿನಲ್ಲಿ ಮುಂದುವರಿದ ಸೋಲು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಸೋಲಿನ ಸರಣಿ ಮುಂದುವರೆದಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ತವರಿನಲ್ಲಿ ಸತತ ಮೂರನೇ ಸೋಲು ಕಂಡ ಆರ್ ಸಿಬಿಗೆ ಪ್ಲೇಆಫ್ ಹಾದಿ ಕಠಿಣವಾಗುತ್ತಾ ಎನ್ನುವ ಆತಂಕ ಶುರುವಾಗಿದೆ.
ಮಳೆಯಿಂದ ತಡವಾಗಿ ಆರಂಭವಾಗಿದ್ದರಿಂದ ಪಂದ್ಯವನ್ನು 14 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಪಂಜಾಬ್ ಕಿಂಗ್ಸ್ ಬೌಲಿಂಗ್ ದಾಳಿಗೆ ಸಿಕ್ಕಿದ ಆರ್ ಸಿಬಿ 14 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿತು. ತವರಿನ ಅಂಗಳದಲ್ಲಿ ಆರ್ ಸಿಬಿ ಬ್ಯಾಟಿಂಗ್ ವೈಫಲ್ಯ ಮತ್ತೆ ಮುಂದುವರೆಯಿತು.

ಟಿಮ್ ಡೇವಿಡ್ ಮಾತ್ರ ಆರ್ ಸಿಬಿಗೆ ಆಪತ್ಭಾಂಧವನಾದರು. ರಜತ್ ಪಟಿದಾರ್ ಮತ್ತು ಟಿಮ್ ಡೇವಿಡ್ ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ಗಳಿಸಲಿಲ್ಲ. ಫಿಲ್ ಸಾಲ್ಟ್ 4 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಾಯಕ ರಜತ್ ಪಟಿದಾರ್ 23 ರನ್ ಗಳಿಸಿದರೂ ದೊಡ್ಡ ಸವಾಲಿನ ಮೊತ್ತ ಕಲೆಹಾಕಲು ಇದು ಸಾಕಾಗಲಿಲ್ಲ. ಲಿವಿಂಗ್‌ಸ್ಟೋನ್ 4 ರನ್ ಗಳಿಸಿ ಔಟಾದರೆ, ಜಿತೇಶ್ ಶರ್ಮಾ 2 ರನ್, ಕೃನಾಲ್ ಪಾಂಡ್ಯ ಕೇವಲ 1 ರನ್ ಗಳಿಸಿದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೊದಲ ಬಾರಿ ಆಡುವ ಅವಕಾಶ ಪಡೆದ ಕನ್ನಡಿಗ ಮನೋಜ್ ಭಾಂಡಗೆ ಕೇವಲ 1 ರನ್ ಗಳಿಸಿದರು.
ಟಿಮ್ ಡೇವಿಡ್ ಮಾತ್ರ ಆರ್ ಸಿಬಿಗೆ ಆಪದ್ಭಾಂಧವರಾದರು. ಏಕಾಂಗಿ ಹೋರಾಟ ನೀಡಿದ ಅವರು 26 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 50 ರನ್ ಗಳಿಸಿದರು. ಭುವನೇಶ್ವರ್ ಕುಮಾರ್ 8 ರನ್ ಗಳಿಸಿ ಔಟಾದರು. ಅರ್ಷದೀಪ್ ಸಿಂಗ್, ಮಾರ್ಕೋ ಯಾನ್ಸೆನ್, ಯುಜ್ವೇಂದ್ರ ಚಹಾಲ್, ಹಪ್ರೀತ್ ಬ್ರಾರ್ ತಲಾ ಎರಡು ವಿಕೆಟ್ ಪಡೆದರೆ, ಕ್ಸೇವಿಯರ್ ಬಾರ್ಲೆಟ್ ಒಂದು ವಿಕೆಟ್ ಪಡೆದರು.
ನೇಹಲ್ ವಧೇರಾ ಜವಾಬ್ದಾರಿಯುತ ಆಟ
ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಸಾಧಾರಣ ಆರಂಭ ಪಡೆಯಿತು. ಪ್ರಿಯಾಂಶ್ ಆರ್ಯ 16 ರನ್ ಗಳಿಸಿದರೆ, ಪ್ರಭ್‌ಸಿಮ್ರನ್ ಸಿಂಗ್ 13 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ ಕೇವಲ 7 ರನ್ ಗಳಿಸಿ ಔಟಾದರೆ, ಜೋಶ್ ಇಂಗ್ಲಿಸ್ 14 ರನ್ ಗಳಿಸಿದರು. 53 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಕಿಂಗ್ಸ್ ಆತಂಕಗೊಂಡರೂ ನೇಹಲ್ ವಧೇರಾ ತಂಡಕ್ಕೆ ಆಸರೆಯಾದರು. 19 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 33 ರನ್ ಗಳಿಸುವ ಮೂಲಕ ಪಂಜಾಬ್‌ಗೆ ಸುಲಭ ಗೆಲುವು ತಂದುಕೊಟ್ಟರು. ಜೋಶ್ ಹೇಜಲ್‌ವುಡ್ 3 ಓವರ್ ಗಳಲ್ಲಿ ಕೇವಲ 13 ರನ್ ನೀಡಿ 3 ವಿಕೆಟ್ ಪಡೆದರೂ ಆರ್ ಸಿಬಿ ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ.












Click it and Unblock the Notifications