ನಿಲ್ಲದ ರೆಸ್ಲರ್ಸ್ ಪ್ರತಿಭಟನೆ; ನೂತನ ಸಂಸತ್ ಭವನದ ಮುಂದೆ 'ಮಹಿಳಾ ಮಹಾಪಂಚಾಯತ್'

ಭಾರತೀಯ ರೆಸ್ಲರ್‌ಗಳು ಹಾಗೂ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (WFI) ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ನಡುವಿನ ವಿವಾದ ಸದ್ಯಕ್ಕೆ ಅಂತ್ಯಗೊಳ್ಳುವ ಹಾಗೆ ಕಾಣುತ್ತಿಲ್ಲ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿ ಕಿರುಕುಳದ ಗಂಭೀರ ಆರೋಪ ಮಾಡಿರುವ ಭಾರತದ ರೆಸ್ಲರ್‌ಗಳು ಕಳೆದ ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನ ಆಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಣ ತೊಟ್ಟಿದ್ದಾರೆ.
ಜಂತರ್ ಮಂತರ್‌ನಲ್ಲಿ ಹಲವಾರು ತೊಂದರೆ, ಅಡೆತಡೆಗಳು ಎದುರಾದರೂ ಸತತವಾಗಿ ಪ್ರತಿಭಟನೆ ನಡೆಸುತ್ತಾ ಬಂದಿರುವ ರೆಸ್ಲರ್‌ಗಳು ಇದೀಗ ಮೇ 28ರಂದು ನವದೆಹಲಿಯಲ್ಲಿ ಬರೋಬ್ಬರಿ 862 ಕೋಟಿ ವೆಚ್ಚದಲ್ಲಿ ತಯಾರಾಗಿರುವ ನೂತನ ಸಂಸತ್ ಭವನದ ಎದುರು 'ಮಹಿಳಾ ಮಹಾಪಂಚಾಯತ್' ನಡೆಸಲು ತೀರ್ಮಾನಿಸಿದ್ದಾರೆ.
ಎಷ್ಟೇ ಪ್ರತಿಭಟನೆ ನಡೆಸಿದರೂ ತಾವು ನಿರೀಕ್ಷಿಸಿದ ಫಲಿತಾಂಶ ಬಾರದ ಹಿನ್ನಲೆಯಲ್ಲಿ ಈ ತೀರ್ಮಾನವನ್ನು ರೆಸ್ಲರ್‌ಗಳು ತೆಗೆದುಕೊಂಡಿದ್ದಾರೆ ಎನ್ನಬಹುದಾಗಿದೆ. ಹೌದು, ರೆಸ್ಲರ್‌ಗಳು ಈ 'ಮಹಿಳಾ ಮಹಾಪಂಚಾಯತ್' ನಡೆಸಲು ತೀರ್ಮಾನಿಸಿರುವ ದಿನವೇ ಅಂದರೆ ಮೇ 28ರಂದು ಈ ಭವ್ಯ ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಕೂಡ ನಡೆಯಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೇಶದ ವಿವಿಧ ಪಕ್ಷಗಳ ವಿವಿಧ ನಾಯಕರು ಈ ಕಾರ್ಯಕ್ರಮಕ್ಕೆ ಹಾಜರಾಗಲಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ಕುರಿತಾದ ಸುದ್ದಿಗಳು ಪ್ರಸಾರವಾಗಲಿವೆ. ಇಂತಹ ದಿನದಂದು ನೂತನ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದಾಗಲಾದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಬೇಡಿಕೆಗಳನ್ನು ಆಲಿಸಬಹುದು ಎಂಬುದು ರೆಸ್ಲರ್‌ಗಳ ಉದ್ದೇಶ.
ಇನ್ನು ರೆಸ್ಲರ್‌ಗಳ ಪ್ರತಿಭಟನೆಗೆ ಹರಿಯಾಣದ ರೈತರ ಬೆಂಬಲ ಕೂಡ ಸಿಕ್ಕಿದೆ. ಈ 'ಮಹಿಳಾ ಮಹಾಪಂಚಾಯತ್'ನಲ್ಲಿ ಮೌನ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕುರಿತು ಪ್ರತಿಕ್ರಿಯಿಸಬೇಕೆಂದು ರೆಸ್ಲರ್‌ಗಳು ಪಟ್ಟುಹಿಡಿದಿದ್ದರು. ದೂರನ್ನು ಸ್ವೀಕರಿಸದ ಕಾರಣ ರೊಚ್ಚಿಗೆದ್ದಿದ್ದ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವವರೆಗೂ ಊಟ, ನಿದ್ರೆ ಎಲ್ಲಾ ಇಲ್ಲೇ ಎಂದು ಘೋಷಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಈ ಪ್ರಕರಣಗಳಲ್ಲಿ ಬಿಜೆಪಿ ಎಂಪಿಯ ಹೆಸರೂ ಸಹ ತಳುಕಿಹಾಕಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಪ್ರತಿಭಟನಾನಿರತ ರೆಸ್ಲರ್ಸ್ ನೇರವಾಗಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದರು.
"ಪ್ರಧಾನಿ ಮೋದಿ ಸರ್ 'ಬೇಟಿ ಬಚಾವೋ' ಮತ್ತು 'ಬೇಟಿ ಪಢಾವೋ' ಬಗ್ಗೆ ಮಾತನಾಡುತ್ತಾರೆ ಮತ್ತು ಪ್ರತಿಯೊಬ್ಬರ 'ಮನ್ ಕಿ ಬಾತ್' ಅನ್ನು ಆಲಿಸುತ್ತಾರೆ. ನಮ್ಮ 'ಮನ್ ಕಿ ಬಾತ್' ಕೇಳಲು ಆಗುವುದಿಲ್ವಾ? ನಾವು ಪದಕಗಳನ್ನು ಗೆದ್ದಾಗ ನಮ್ಮನ್ನು ಅವರ ಮನೆಗೆ ಆಹ್ವಾನಿಸುತ್ತಾರೆ ಮತ್ತು ನಮಗೆ ಗೌರವವನ್ನು ನೀಡುತ್ತಾರೆ. ನಮ್ಮನ್ನು ಅವರ ಮಕ್ಕಳು ಎಂದು ಕರೆಯುತ್ತಾರೆ. ಇಂದು ಅವರು ನಮ್ಮ ಮನ್ ಕಿ ಬಾತ್ ಕೇಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ" ಎಂದು ಸಾಕ್ಷಿ ಮಲಿಕ್ ಹೇಳಿದ್ದರು.
ಇನ್ನು ರೆಸ್ಲರ್‌ಗಳ ಪ್ರತಿಭಟನೆ ಕುರಿತು ಮಾತನಾಡಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಎಫ್ಐಆರ್ ದಾಖಲಾದ ನಂತರವೂ ಸಹ ರೆಸ್ಲರ್‌ಗಳು ಪ್ರತಿಭಟನೆಯನ್ನು ಏಕೆ ನಡೆಸುತ್ತಿದ್ದಾರೆ, ಅವರು ಹೇಳಿದಂತೆ ನಾನು ನಾರ್ಕೊ ಟೆಸ್ಟ್ ತೆಗೆದುಕೊಳ್ಳಲು ಸಿದ್ಧ, ಆದರೆ ಅದಕ್ಕೂ ಮೊದಲು ಅವರು ನಾರ್ಕೊ ಟೆಸ್ಟ್‌ಗೆ ಒಳಗಾಗಬೇಕು ಎಂದು ಹೇಳಿಕೆ ನೀಡಿ ತಮ್ಮ ವಿರುದ್ಧದ ಆರೋಪಗಳನ್ನೆಲ್ಲಾ ತಳ್ಳಿಹಾಕಿದ್ದರು.












Click it and Unblock the Notifications