Vinesh Phogat: ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ; ತೀರ್ಪಿಗಾಗಿ ಮತ್ತಷ್ಟು ದಿನ ಕಾಯಬೇಕು!
ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಪಟ್ಟಂತೆ ಇಂದು ತೀರ್ಪು ಬರುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಪ್ಯಾರಿಸ್‌ನ ಮಧ್ಯಸ್ಥಿಕೆ ನ್ಯಾಯಾಲಯವು ವಿನೇಶ್ ಫೋಗಟ್ ಅನರ್ಹತೆಯ ಪ್ರಕರಣದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲು ಸಮಯವನ್ನು ಆಗಸ್ಟ್ 16, ರಾತ್ರಿ 9.30 ರವರೆಗೆ ವಿಸ್ತರಣೆ ಮಾಡಲಾಗಿದೆ. ಇದೀಗ ಅಭಿಮಾನಿಗಳು ಶುಕ್ರವಾರದವರೆಗೆ ಕಾಯಬೇಕಾಗಿದೆ.
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನೇಶ್ ಫೋಗಟ್ ಮನವಿ ಸಲ್ಲಿಸಿದ್ದಾರೆ. ಈ ಮನವಿ ಮೇಲಿನ ತೀರ್ಪು ಕೊಡಲು ಕ್ರೀಡಾ ನ್ಯಾಯ ಮಂಡಳಿ (ಸಿಎಎಸ್) ತಾತ್ಕಾಲಿಕ ವಿಭಾಗವು ಮತ್ತೆ ವಿಸ್ತರಣೆ ಮಾಡಿದೆ. ಆಗಸ್ಟ್ 16 ರಂದು ಸ್ಥಳೀಯ ಕಾಲಮಾನ 6 ಗಂಟೆಗೆ ತೀರ್ಪು ನೀಡುವುದಾಗಿ ಹೇಳಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ಮುಗಿಯುವ ಮೊದಲು ತೀರ್ಪು ನೀಡುವುದಾಗಿ ಹೇಳಿದ್ದರೂ ಈಗ ಅದನ್ನು ಎರಡನೇ ಬಾರಿಗೆ ಮುಂದೂಡಲಾಗಿದೆ.

ಆಗಸ್ಟ್ 10ರಂದೇ ತೀರ್ಪು ನೀಡುವ ನಿರೀಕ್ಷೆ ಇತ್ತಾದರೂ ಅದನ್ನು ಆಗಸ್ಟ್ 13ಕ್ಕೆ ಮುಂದೂಡಲಾಗಿತ್ತು, ಈಗ ಮತ್ತೆ ದಿನಾಂಕವನ್ನು ಆಗಸ್ಟ್ 16ಕ್ಕೆ ಮುಂದೂಡಿದೆ. ಈಗ ಶುಕ್ರವಾರದವರೆಗೆ ಭಾರತೀಯ ಕ್ರೀಡಾಭಿಮಾನಿಗಳು ತೀರ್ಪಿಗಾಗಿ ಕಾಯಬೇಕಾಗಿದೆ.
ಸಿಎಎಸ್ ತಾತ್ಕಾಲಿಕ ವಿಭಾಗದ ಅಧ್ಯಕ್ಷರು ಡಾ. ಅನ್ನಾಬೆಲ್ಲೆ ಬೆನೆಟ್, ವಿನೇಶ್ ಫೋಗಾಟ್ ವರ್ಸಸ್ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW) ಮತ್ತು ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ (IOC) ವಿಷಯದಲ್ಲಿ ಏಕೈಕ ಮಧ್ಯಸ್ಥಗಾರರಿಗೆ ಅವಕಾಶ ನೀಡಿದ್ದು, ತೀರ್ಪನ್ನು ಆಗಸ್ಟ್ 16ರಂದು ಸಂಜೆ 6 ರವರೆಗೆ ವಿಸ್ತರಿಸಲಾಗಿದೆ ಎಂದು ಐಒಎ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
100 ಗ್ರಾಂ ಹೆಚ್ಚಾಗಿದ್ದೇ ಸಮಸ್ಯೆ
ವಿನೇಶ್ ಫೋಗಟ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇನ್ನೇನು ಅವರು ಚಿನ್ನವನ್ನು ಗೆದ್ದು ತರುತ್ತಾರೆ ಎಂದು ಹಾರೈಸಿದ್ದ ಕೋಟ್ಯಂತರ ಭಾರತೀಯರಿಗೆ ಫೈನಲ್ ದಿನವೇ ಆಘಾತ ಎದುರಾಗಿತ್ತು. ನಿಗದಿಗಿಂತ ಅವರು 100 ಗ್ರಾಂ ಅಧಿಕ ತೂಕ ಹೊಂದಿದ್ದರು ಎನ್ನುವ ಕಾರಣಕ್ಕೆ ಒಲಿಂಪಿಕ್ಸ್‌ನಿಂದ ಅನರ್ಹತೆಗೊಳಿಸಲಾಗಿತ್ತು.
ಬಳಿಕ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ 1984 ರಲ್ಲಿ ಸ್ಥಾಪಿತವಾದ ಮಧ್ಯಸ್ಥಿಕೆಯ ಮೂಲಕ ಕ್ರೀಡೆಗೆ ಸಂಬಂಧಿಸಿದ ವಿವಾದಗಳನ್ನು ಬಗರೆಹರಿಸುವ ಅಂತರರಾಷ್ಟ್ರೀಯ ಸಂಸ್ಥೆಯಾದ ಸಿಎಎಸ್‌ಗೆ ಮನವಿ ಮಾಡಿದ್ದರು. ಸ್ಪರ್ಧೆಯ ಮೊದಲ ದಿನದಂದು ಅನುಮತಿಸುವ ತೂಕದ ಮಿತಿಯಲ್ಲಿದ್ದರು ಎನ್ನುವ ಆಧಾರದ ಮೇಲೆ ಬೆಳ್ಳಿ ಪದಕ ನೀಡುವಂತೆ ಮನವಿ ಮಾಡಲಾಗಿದೆ.












Click it and Unblock the Notifications