Champions Trophy: ಹೈಬ್ರಿಡ್ ಮಾಡೆಲ್ ಓಕೆ! ಆದರೆ ಮೂರು ಷರತ್ತುಗಳಿವೆ ಎಂದ ಪಾಕಿಸ್ತಾನ
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆಯೋಜನೆ ಬಗ್ಗೆ ಇದ್ದ ಗೊಂದಲ ಬಹುತೇಕ ನಿವಾರಣೆಯಾಗಿದೆ. ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಪ್ಪಿಕೊಂಡಿದೆ. ಪಾಕಿಸ್ತಾನದಲ್ಲಿ ಭಾರತದ ಆಟಗಾರರ ಭದ್ರತೆಯ ಕಾಳಜಿಯನ್ನು ಉಲ್ಲೇಖಿಸಿದ್ದು ತಂಡವನ್ನು ಪಾಕಿಸ್ತಾನಕ್ಕೆ ಕಳಿಸಲು ನಿರಾಕರಿಸಿತ್ತು.
ಮೊದ ಮೊದಲು ಯಾವುದೇ ಕಾರಣಕ್ಕೂ ಹೈಬ್ರಿಡ್ ಮಾದರಿಗೆ ಒಪ್ಪಲ್ಲ ಎಂದು ಹಠ ಹಿಡಿದು ಕೂತಿದ್ದ ಪಾಕಿಸ್ತಾನ ಕೊನೆಗೂ ದಾರಿಗೆ ಬಂದಂತೆ ಕಾಣುತ್ತಿದೆ. ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬರುವುದಿಲ್ಲ ಎನ್ನುವುದನ್ನು ಅರಿತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜನೆ ಮಾಡಲು ಒಪ್ಪಿಕೊಂಡಿದೆ. ಆದರೆ ಅದಕ್ಕೆ ಮೂರು ಷರತ್ತುಗಳನ್ನು ಮುಂದಿಟ್ಟಿದೆ.

ಹೌದು, ಭಾರತದ ವಿರುದ್ಧ ಸಿಟ್ಟಿಗೆದ್ದಿರುವ ಪಾಕಿಸ್ತಾನ, ಇದೀಗ ತನಗೂ ಹೈಬ್ರಿಡ್ ಮಾದರಿ ಬೇಕು ಎಂದು ಬೇಡಿಕೆ ಇಟ್ಟಿದೆ. 2026ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದನ್ನು ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿದೆ. ಪಾಕಿಸ್ತಾನಕ್ಕೆ ಭಾರತ ತಂಡ ಬರದಿದ್ದ ಮೇಲೆ, ಪಾಕಿಸ್ತಾನ ತಂಡವನ್ನು ಕೂಡ ಭಾರತಕ್ಕೆ ಕಳಿಸಲ್ಲ, 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪಂದ್ಯಗಳನ್ನು ಭಾರತದಿಂದ ಹೊರಗಡೆ ಆಯೋಜಿಸಬೇಕು ಎಂದು ಕೇಳಿದೆ.
ಪಾಕಿಸ್ತಾನದ ಬೇಡಿಕೆಗಳೇನು?
- 2031 ರವರೆಗೆ ಭಾರತ ಆಯೋಜಿಸಿರುವ ಎಲ್ಲಾ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಬೇಕು.
- 2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಸೆಮಿಫೈನಲ್, ಫೈನಲ್ ಪ್ರವೇಶಿಸದೇ ಇದ್ದರೆ ಈ ಪಂದ್ಯಗಳು ಲಾಹೋರ್ ನಲ್ಲಿ ನಡೆಯಲಿದೆ.
- ಭಾರತದ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗುತ್ತದೆ. ಆದರೆ ಆದಾಯದ ಪಾಲನ್ನು 5.75% ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದೆ.
ಪಿಸಿಬಿ ಅಧ್ಯಕ್ಷರು ಹೇಳಿದ್ದೇನು?
2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಹೈಬ್ರಿಡ್ ದರಿಯ ಚರ್ಚೆಯ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮುಬಾಶಿರ್ ಉಸ್ಮಾನಿಯನ್ನು ದುಬೈನಲ್ಲಿ ಭೇಟಿಯಾಗಿದ್ದಾರೆ.
ಪಾಕಿಸ್ತಾನದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸಲಾಗುವುದು ಎಂದು ನಖ್ವಿ ಹೇಳಿದ್ದಾರೆ. ಪಂದ್ಯಾವಳಿಗೆ ಆತಿಥ್ಯ ವಹಿಸುವ ಕ್ರೀಡಾಂಗಣಗಳ ನಿರ್ಮಾಣ ಕಾರ್ಯವೂ ನಿಗದಿತ ಸಮಯಕ್ಕೆ ಮುಗಿಯಲಿದೆ. ಪಾಕ್ ಜನತೆ ಪಂದ್ಯಾವಳಿಗಾಗಿ ಕಾಯುತ್ತಿದ್ದಾರೆ ಎಂದರು.
ಕ್ರಿಕೆಟ್ ಗೆಲ್ಲಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ ಪಾಕಿಸ್ತಾನದ ಘನತೆ ಕೂಡ ಉಳಿಯಬೇಕು. ನಾನು ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ನಾವು ನಮ್ಮ ಅನಿಸಿಕೆಗಳನ್ನು ತಿಳಿಸಿದ್ದೇವೆ. ಭಾರತ ಕೂಡ ತಮ್ಮ ಅನಿಸಿಕೆಯನ್ನು ತಿಳಿಸಿದೆ ಎಂದು ದುಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.












Click it and Unblock the Notifications