ಪದೆ ಪದೇ ಪಾಕ್ ನಾಯಕನನ್ನು ಬದಲೀಸಿದರೂ, ಕೈ ಹಿಡಿಯದ ಲಕ್: ತವರಿನಲ್ಲಿ ಸರಣಿ ಸೋಲಿನ ಭೀತಿ
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದ ಬೆನ್ನಲ್ಲೆ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ತಂಡದ ನಾಯಕರನ್ನು ಬದಲಿಸಿತು. ನೂತನ ನಾಯಕರು ಸಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇದ್ದಾಗ, ಹಳೇಯ ಗಂಡನ ಪಾದವೇ ಗತಿ ಎಂಬಂತೆ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಬಾಬರ್ ಅಜಮ್‌ಗೆ ಪಟ್ಟ ಕಟ್ಟಿತು.
ಭಾರತದಲ್ಲಿ ಏಕದಿನ ವಿಶ್ವಕಪ್‌ನ ಲೀಗ್ ಹಂತದಲ್ಲೇ ಪಾಕ್ ತಂಡ ತವರು ಪ್ರಯಾಣ ಬೆಳೆಸುತ್ತಿದ್ದಂತೆ ಆಗಿನ ಪಿಸಿಬಿ ಅಧ್ಯಕ್ಷರು ನಾಯಕನ ಬದಲಾವಣೆಗೆ ಹಸಿರು ನಿಶಾನೆ ತೋರಿಸಿದರು. ಅದರಂತೆ, ಟಿ20 ತಂಡಕ್ಕೆ ಶಾಹೀನ್ ಶಾ ಅಫ್ರಿದಿ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಪಾಕ್ ಟೆಸ್ಟ್ ತಂಡದ ನಾಯಕತ್ವವನ್ನು ಶಾನ್ ಮಸೂದ್‌ಗೆ ನೀಡಲಾಯಿತು. ಇವರು ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಲ್ಲದೆ ಪಿಸಿಬಿ ಅಧ್ಯಕ್ಷರು ಬದಲಾದರು. ಪಿಸಿಬಿ ಅಧ್ಯಕ್ಷರು ಬದಲಾಗುತ್ತಿದ್ದಂತೆ ಬಾಬಾರ್‌ಗೆ ರೆಡ್ ಕಾರ್ಪೆಟ್ ಹಾಕಲಾಯಿತು.

ಟಿ20 ಸರಣಿ ಹಿನ್ನಡೆ
ಸತತ ಪ್ರಯತ್ನ ಪಟ್ಟರು ಪಾಕ್ ಗೆಲುವಿನ ಟ್ರ್ಯಾಕ್‌ಗೆ ಮರಳಲು ಸಾಧ್ಯವೇ ಆಗುತ್ತಿಲ್ಲ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಟಿ 20 ಸರಣಿ ಆಡುತ್ತಿದೆ. ಈ ಸರಣಿಯಲ್ಲಿ ಪಾಕ್ ತಂಡವನ್ನು ಬಾಬಾರ್ ಅಜಮ್ ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಭಾರೀ ಬದಲಾವಣೆ ಮಾಡಿದರೂ, ಯಾವುದೇ ಪರಿಣಾಮ ಬೀರುತ್ತಿಲ್ಲ. ನ್ಯೂಜಿಲೆಂಡ್‌ನ ಬಿ ತಂಡ ಪಾಕಿಸ್ತಾನವನ್ನು ಮಣಿಸಿ ಅಬ್ಬರಿಸಿತು.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್ ಗೆದ್ದ ನಾಯಕ ಬಾಬರ್ ಅಜಮ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕಿವೀಸ್ 20 ಓವರ್‌ಗಳಲ್ಲಿ 178 ರನ್ ಸೇರಿಸಿತು. ಪ್ರವಾಸಿ ತಂಡದ ಪರ ಟಿಮ್ ರಾಬಿನ್ಸನ್ 51 ರನ್ ಸೇರಿಸಿದರು.

179 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಮೈದಾನಕ್ಕಿಳಿಯಿತು. ನಾಯಕ ಬಾಬರ್ ಅಜಮ್ 5 ರನ್ ಗಳಿಸಿ ಇಲ್ಲದ ಶಾಟ್ ಹೊಡೆಯಲು ಹೋಗಿ ಔಟ್ ಆದರು. ಪಾಕ್ ತಂಡದ ಮೊತ್ತ 13 ರನ್ ಆಗಿದ್ದಾಗ ನಾಯಕ ಜವಾಬ್ದಾರಿಯನ್ನು ಮರೆತರು. ಸ್ಯಾಮ್ ಅಯೂಬ್ ಮತ್ತು ಉಸ್ಮಾನ್ ಖಾನ್ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿದರು. ಇದಾದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬಂದ ಫಖರ್ ಜಮಾನ್ 61 ರನ್ ಗಳ ಉತ್ತಮ ಇನ್ನಿಂಗ್ಸ್ ಆಡಿದರು. ಆದರೂ ಪಾಕ್ 174 ರನ್‌ಗಳನ್ನು ಮಾತ್ರ ಸೇರಿಸಲು ಶಕ್ತವಾಗಿ, ಪಂದ್ಯ ಸೋತಿತು.
ಸರಣಿ ಸೋಲಿನ ಅಪಾಯ
ಇದೀಗ ನ್ಯೂಜಿಲೆಂಡ್‌ನ ತಂಡದ ವಿರುದ್ಧ ಪಾಕಿಸ್ತಾನ ತಂಡಕ್ಕೆ ಸರಣಿ ಸೋಲಿನ ಭೀತಿ ಎದುರಾಗಿದೆ. ಮಳೆಯಿಂದಾಗಿ ಸರಣಿಯ ಮೊದ ಪಂದ್ಯ ರದ್ದಾಗಿತ್ತು. ಎರಡನೇ ಪಂದ್ಯ ಪಾಕ್ ಗೆದ್ದರೆ, ನ್ಯೂಜಿಲೆಂಡ್ ಮೂರನೇ ಹಾಗೂ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಪಾಕಿಸ್ತಾನ ತಂಡ ಸರಣಿಯ ಕೊನೆಯ ಪಂದ್ಯವನ್ನು ಗೆದ್ದರೂ, ಸರಣಿಯು ಟೈನಲ್ಲಿ ಕೊನೆಗೊಳ್ಳುತ್ತದೆ. ಆದರೆ ಕೊನೆಯ ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದರೆ, ಪಾಕ್‌ಗೆ ತವರಿನಲ್ಲಿ ಸರಣಿ ಸೋಲು ಅನುಭವಿಸುತ್ತದೆ.












Click it and Unblock the Notifications