Olympics: ಭಾರತದ ಹಾಕಿ ತಂಡದ ಜಯದ ಆರಂಭ
ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಶುಭಾರಂಭ ಮಾಡಿದೆ. ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದಿದ್ದ ಭಾರತ 3-2ರಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು.
ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಪುಟಿದ್ದೆದು ಸೊಗಸಾದ ಪ್ರದರ್ಶನ ನೀಡಿದ ಟೀಮ್ ಇಂಡಿಯಾ, ಅರ್ಹ ಗೆಲುವು ಸಾಧಿಸಿತು. ಮೊದಲಾವಧಿಯಲ್ಲಿ ನ್ಯೂಜಿಲೆಂಡ್ ತಂಡ, ಭಾರತದ ರಕ್ಷಣಾ ವಿಭಾಗಕ್ಕೆ ಮಣ್ಣು ಮುಕ್ಕಿಸಿ ಎಂಟನೇ ನಿಮಿಷದಲ್ಲೇ ಪೆನಾಲ್ಟಿ ಗೋಲ್ ಅವಕಾಶ ಪಡೆಯಿತು.

ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಿಸಿಕೊಂಡ ನ್ಯೂಜಿಲೆಂಡ್ ಮೊದಲಾವಧಿಯ ಆರಂಭದಲ್ಲಿ ಭಾರತದ ಗೋಲ್ ಕೀಪರ್ ಶ್ರೀಜೇಶ್ ಅವರನ್ನು ವಂಚಿಸುವಲ್ಲಿ ಸಫಲವಾಯಿತು. ಪರಿಣಾಮ ನ್ಯೂಜಿಲೆಂಡ್ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಗೋಲು ಬಾರಿಸುವ ಭಾರತದ ಯೋಜನೆ ಫಲಿಸಲಿಲ್ಲ. ಪರಿಣಾಮ ಮೊದಲಾವಧಿಯಲ್ಲಿ ಕಿವೀಸ್ ಮುನ್ನಡೆ ಸಾಧಿಸಿತು.
ಭಾರತದ ಅಬ್ಬರ
ಎರಡನೇ ಅವಧಿಯಲ್ಲಿ ಭಾರತ ಭರ್ಜರಿ ಪ್ಲ್ಯಾನ್ ಮೂಲಕ ಮೈದಾನ ಪ್ರವೇಶಿಸಿತು. ಮೊದಲಾವಧಿಯಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ನ್ಯೂಜಿಲೆಂಡ್, ಎರಡನೇ ಅವಧಿಯಲ್ಲಿ ಕೊಂಚ ಹಿನ್ನಡೆ ಅನುಭವಿಸಿತು. ಸೊಗಸಾದ ಪ್ಲ್ಯಾನ್ ಮಾಡುವ ಮೂಲಕ ಭಾರತ, ನ್ಯೂಜಿಲೆಂಡ್ ತಂಡದ ರಕ್ಷಣಾ ವಿಭಾಗವನ್ನು ವಂಚಿಸುತ್ತಾ ಸಾಗಿತು.
ಎರಡನೇ ಅವಧಿಯ ಕೊನೆಯ ಕ್ಷಣದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಮಂದೀಪ್ ಸಿಂಗ್ ಸೊಗಸಾದ ಫೀಲ್ಡ್ ಗೋಲು ಬಾರಿಸಿ ತಂಡಕ್ಕೆ ಆಧಾರವಾದರು. ಈ ಮೂಲಕ ಟೀಮ್ ಇಂಡಿಯಾ ಅಂಕದ ಖಾತೆ ಓಪನ್ ಮಾಡಿತು. ಅಲ್ಲದೆ ಗೋಲ್ ಸಂಖ್ಯೆಯನ್ನು ಸಮನಾಗಿಸಿತು.

ಇನ್ನು ಮೂರನೇ ಅವಧಿಯಲ್ಲೂ ಭಾರತ ತಂಡ ಬ್ರೇಕ್ ವೇಳೆ ಹಾಕಿಕೊಂಡ ಯೋಜನೆಯಂತೆ ಆಡಿತು. ಇದರ ಫಲವಾಗಿ ನಾಲ್ಕನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಲು ಸಾಧ್ಯವಾಯಿತು. ಈ ಅವಧಿಯಲ್ಲಿ ವಿವೇಕ್ ಸಾಗರ್ ಪ್ರಸಾದ್ ಅಮೋಘ ಚಾಣಕ್ಯತನ ಮೆರೆದು ಗೋಲು ಬಾರಿಸಿದರು. ಈ ಮೂಲಕ ಭಾರತ ಪಂದ್ಯದಲ್ಲಿ 2-1ರಿಂದ ಮುನ್ನಡೆ ಸಾಧಿಸಿತು.
ರೋಚಕ ಘಟ್ಟ
ನಾಲ್ಕನೇ ಅವಧಿಯ ಆಟ ರೋಚಕತೆಯಿಂದ ಕೂಡಿತ್ತು. ಈ ವೇಳೆ ಭಾರತ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಆದರೆ ಗೋಲುಗಳ ಸಂಖ್ಯೆಯನ್ನು ಸಮಾನಿಗಿಸಿಕೊಳ್ಳುವ ಆಶಯ ಹೊಂದಿದ್ದ ನ್ಯೂಜಿಲೆಂಡ್ ಅಟ್ಯಾಕಿಂಗ್ ಆಟಕ್ಕೆ ಮೊರೆ ಹೋಯಿತು. ಈ ವೇಳೆ 53ನೇ ನಿಮಿಷದಲ್ಲಿ ಕಿವೀಸ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸಿದರು. ಈ ಮೂಲಕ ಗೋಲುಗಳ ಸಂಖ್ಯೆ ಸಮನಾಯಿತು.

ಕೊನೆಯ ಕ್ಷಣದಲ್ಲಿ ರೋಚಕತೆ ಹೆಚ್ಚಿತು. ಈ ಪಂದ್ಯದ ಕೊನೆಯ ಘಟ್ಟದಲ್ಲಿ ಟೀಮ್ ಇಂಡಿಯಾ ಅಮೋಘ ಆಟದ ಪ್ರದರ್ಶನ ನೀಡಿ, ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಇನ್ನೇನು ಪಂದ್ಯ ಮುಗಿಯಲು ಒಂದು ನಿಮಿಷ ಇರುವಾಗ ಹರ್ಮನ್ ಪ್ರೀತ್ ಸಿಂಗ್ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸಿದರು.
ಭಾರತದ ಖುಷಿಗೆ ಪಾರವೇ ಇರಲಿಲ್ಲ. ಭಾರತ ಬಿ ಗುಂಪಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಅಬ್ಬರದ ಜಯ ಸಾಧಿಸುವ ಮೂಲಕ ಗೆಲುವಿನ ಆರಂಭವನ್ನು ಮಾಡಿದೆ.












Click it and Unblock the Notifications