Ind Vs NZ: ಭಾರತ - ನ್ಯೂಜಿಲೆಂಡ್ ಸೆಮಿಫೈನಲ್ ಮಳೆಯಿಂದ ರದ್ದಾದರೆ ಮುಂದೇನು?
ಏಕದಿನ ವಿಶ್ವಕಪ್ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಿವೆ. ನವೆಂಬರ್ 15 ಮತ್ತು 16ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ಈ ಬಾರಿ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಲೀಗ್ ಹಂತದಲ್ಲಿ ಆಡಿರುವ 9 ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ವಿರುದ್ಧ ಭಾರತ ಸೆಮಿಫೈನಲ್‌ನಲ್ಲಿ ಸೆಣೆಸಲಿದೆ.

ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ನ್ಯೂಜಿಲೆಂಡ್ ಮುಖಾಮುಖಿಯಾಗಲಿದ್ದು, ಭಾರತಕ್ಕೆ ಇದು ಸವಾಲಿನ ಪಂದ್ಯ ಎನಿಸಲಿದೆ. ಲೀಗ್ ಹಂತದಲ್ಲಿ ಭಾರತ ಅಮೋಘ ಆಟವಾಡಿತ್ತು, ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ಮಾತ್ರ ಭಾರತಕ್ಕೆ ಪೈಪೋಟಿ ನೀಡಿದ್ದರೂ ಕೊನೆಯ ಹಂತದಲ್ಲಿ ಸೋಲನುಭವಿಸಿತ್ತು, ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಹೊಂದಿರುವ ನ್ಯೂಜಿಲೆಂಡ್ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಸವಾಲಾಕಲು ಸಜ್ಜಾಗಿದೆ.
ಮಳೆಯಿಂದ ರದ್ದಾಗುತ್ತಾ ಸೆಮಿಫೈನಲ್!
ಒಂದು ವೇಳೆ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಮುಂದೇನು ಎನ್ನುವ ಪ್ರಶ್ನೆ ಕಾಡುವುದು ಸಹಜ. ಸೆಮಿಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿಯಾದರೆ ಐಸಿಸಿ ಮೀಸಲು ದಿನವನ್ನು ನಿಗದಿ ಮಾಡಿದೆ, ಒಂದು ವೇಳೆ ಮೀಸಲು ದಿನ ಕೂಡ ಮಳೆಯಿಂದ ರದ್ದಾದರೆ ಐಸಿಸಿ ನಿಯಮ ಹೇಳೋದೇನು?
ಆ ಸಂದರ್ಭದಲ್ಲಿ ನಿಯಮದ ಪ್ರಕಾರ ಲೀಗ್ ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಹೆಚ್ಚಿನ ಸ್ಥಾನ ಪಡೆಯುವ ತಂಡವು ಫೈನಲ್‌ಗೆ ಮುನ್ನಡೆಯುತ್ತದೆ. ಆ ನಿಯಮದ ಪ್ರಕಾರ, ಭಾರತ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಭಾರತ ಫೈನಲ್‌ಗೆ ಪ್ರವೇಶ ಪಡೆದುಕೊಳ್ಳಲಿದೆ.
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೂ ಕೂಡ ಮೇಲಿನ ನಿಯಮ ಅನ್ವಯವಾಗಲಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಪಂದ್ಯ ರದ್ದಾದರೆ ಫೈನಲ್ ಪ್ರವೇಶಿಸಲಿದೆ.
ಭಾರತಕ್ಕೆ ನ್ಯೂಜಿಲೆಂಡ್ ಸವಾಲು
ಭಾರತಕ್ಕೆ ನ್ಯೂಜಿಲೆಂಡ್ ಮೊದಲಿಂದಲೂ ತಲೆನೋವಾಗಿರುವ ತಂಡ, 2019ರ ವಿಶ್ವಕಪ್ ಸೆಮಿಫೈನಲ್ ಸೋಲು ಭಾರತವನ್ನು ಇನ್ನೂ ಕಾಡುತ್ತಿದೆ. ಎಂಎಸ್ ಧೋನಿ ರನೌಟ್ ಭಾರತದ ಪ್ರಶಸ್ತಿ ಗೆಲ್ಲುವ ಕನಸನ್ನು ನುಚ್ಚು ನೂರು ಮಾಡಿತ್ತು. 20 ವರ್ಷಗಳ ಬಳಿಕ ಭಾರತ ನ್ಯೂಜಿಲೆಂಡ್ ತಂಡವನ್ನು ಐಸಿಸಿ ಪಂದ್ಯಾವಳಿಯಲ್ಲಿ ಸೋಲಿಸಿದೆ.
ನ್ಯೂಜಿಲೆಂಡ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದ್ದು ಸಮತೋಲನವನ್ನು ಹೊಂದಿರುವ ತಂಡ, ಭಾರತಕ್ಕೆ ಸವಾಲಾಕಲು ಹಲವು ತಂತ್ರಗಳನ್ನು ಮಾಡಿದೆ, ಭಾರತ ಕೂಡ ಅಮೋಘ ಪ್ರದರ್ಶನ ನೀಡುತ್ತಿದ್ದು, ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಮುಂಬೈನಲ್ಲಿ ಕ್ರಿಕೆಟ್ ಅಭಿಮಾನಿಗಳು ರೋಚಕ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ.












Click it and Unblock the Notifications