ವೆಲ್ ಡನ್ ಸುನೀಲ್ ಛೇಟ್ರಿ; ಪ್ರಧಾನಿ ಮೋದಿ ಶ್ಲಾಘನೆ
ನವದೆಹಲಿ, ಸೆ. 29: ಭಾರತದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಿರುವ ಹಾಗೂ ಜೀವಂತ ಫುಟ್ಬಾಲ್ ಲೆಜೆಂಡ್ ಎನಿಸಿರುವ ಸುನೀಲ್ ಛೇಟ್ರಿ ಬಗ್ಗೆ ಸಾಕ್ಷ್ಯ ಚಿತ್ರಗಳು ತಯಾರಾಗಿದ್ದು, ಫೀಫಾ ಬಿಡುಗಡೆ ಮಾಡಿದೆ.
ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿಗೆ ಫೀಫಾ ನೀಡಿರುವ ಗೌರವಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಸುನೀಲ್ ಛೇಟ್ರಿಯನ್ನು ಶ್ಲಾಘಿಸಿ ಮೋದಿ ಟ್ವೀಟ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಸುನೀಲ್ ಛೇಟ್ರಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೇಷ್ಠ ಫುಟ್ಬಾಲಿಗರಾದ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಬಿಟ್ಟರೆ ಅತಿ ಹೆಚ್ಚು ಗೋಲು ಗಳಿಸಿರುವುದು ಸುನೀಲ್ ಛೇಟ್ರಿಯೇ.
ಸುನೀಲ್ ಛೇಟ್ರಿಯ ಗೋಲುಗಳಿಗೂ ರೊನಾಲ್ಡೊ, ಮೆಸ್ಸಿ ಗಳಿಸಿರುವ ಗೋಲುಗಳಿಗೂ ಆಟದ ಮಟ್ಟಕ್ಕೂ ಹೋಲಿಕೆ ಮಾಡಲು ಸಾಧ್ಯ ಇಲ್ಲ ಎಂಬುದು ನಿಜ. ಆದರೂ ಛೇಟ್ರಿಯ ಫುಟ್ಬಾಲ್ ದಾಖಲೆ ಸಾಮಾನ್ಯವಂತೂ ಅಲ್ಲ, ಅಂತೆಯೇ ಫೀಫಾ ಸಂಸ್ಥೆ ಸುನೀಲ್ ಛೇಟ್ರಿ ಬಗ್ಗೆ ಮೂರು ಎಪಿಸೋಡ್‌ನ ಡಾಕ್ಯುಮೆಂಟರಿ ಮಾಡಿಸಿರುವುದರಲ್ಲಿ ಯಾವ ಅಚ್ಚರಿಯೂ ಅನಿಸದು.
|
ಫೀಫಾ ವರ್ಲ್ಡ್‌ಕಪ್ ಟ್ವೀಟ್
"ನಿಮಗೆಲ್ಲಾ ರೊನಾಲ್ಡೊ ಮತ್ತು ಮೆಸ್ಸಿ ಬಗ್ಗೆ ಗೊತ್ತು. ಈಗ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಕ್ರಿಯವಾಗಿರುವ ಆಟಗಾರರಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಮೂರನೇ ವ್ಯಕ್ತಿ ಬಗ್ಗೆ ತಿಳಿದುಕೊಳ್ಳಿ" ಎಂದು ಫೀಫಾ ವರ್ಲ್ಡ್‌ಕಪ್‌ನ ಅಧಿಕೃತ ಖಾತೆಯಿಂದ ಮಂಗಳವಾರ (ಸೆ. 27) ಟ್ವೀಟ್ ಆಗಿದೆ.
ಸುನೀಲ್ ಛೇಟ್ರಿ, ಕ್ಯಾಪ್ಟನ್ ಫೆಂಟ್ಯಾಸ್ಟಿಕ್ ಎಂಬ ಹೆಸರಿನ ಈ ಮೂರು ಸರಣಿಯ ಸಾಕ್ಷ್ಯಚಿತ್ರಗಳನ್ನು ಫೀಫಾ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.
ಅಂದಹಾಗೆ, ಈ ಡಾಕ್ಯುಮೆಂಟರಿಯಲ್ಲಿ ಸುನೀಲ್ ಛೇಟ್ರಿಯ ಫುಟ್ಬಾಲ್ ಪ್ರಯಾಣದ ಬಗ್ಗೆ ಹೇಳಲಾಗಿದೆ. ಫುಟ್ಬಾಲ್ ಅಭಿಮಾನಿಗಳು, ಕ್ರೀಡಾ ಪ್ರೇಮಿಗಳು ಮಾತ್ರವಲ್ಲ ಪ್ರತಿಯೊಬ್ಬ ಭಾರತೀಯರೂ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸುವುದು ಉತ್ತಮ.
|
ನರೇಂದ್ರ ಮೋದಿ ಶ್ಲಾಘನೆ
ವಿಶ್ವ ಫುಟ್ಬಾಲ್‌ನ ಅಧಿಕೃತ ಸಂಸ್ಥೆ ಫೀಫಾ ಸುನೀಲ್ ಛೇಟ್ರಿಗೆ ಗೌರವ ಸಲ್ಲಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ವೆಲ್ ಡನ್ ಸುನೀಲ್ ಛೇಟ್ರಿ..! ಇದು ಭಾರತದಲ್ಲಿ ಫುಟ್ಬಾಲ್‌ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವುದು ಹೌದು" ಎಂದು ಫೀಫಾ ಟ್ವೀಟ್ ಅನ್ನು ಉಲ್ಲೇಖಿಸಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾರತದ ವಿವಿಧ ಕ್ರೀಡಾ ಸಾಧಕರ ಬಗ್ಗೆ ಆಗಾಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ಹುರಿದುಂಬಿಸುವ ಕೆಲಸವನ್ನು ಮಾಡುತ್ತಿರುತ್ತಾರೆ.

ಸುನೀಲ್ ಛೇಟ್ರಿ ಅಸಾಮಾನ್ಯ ಫುಟ್ಬಾಲಿಗ
34 ವರ್ಷದ ಸುನೀಲ್ ಛೇಟ್ರಿ ನಿಸ್ಸಂಶಯವಾಗಿ ಭಾರತ ಕಂಡ ಸಾರ್ವಕಾಲಿಕ ಸರ್ವಶ್ರೇಷ್ಠ ಫುಟ್ಬಾಲ್ ಆಟಗಾರ ಎನಿಸಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಹಲವು ವರ್ಷಗಳ ಕಾಲ ಭಾರತ ತಂಡದ ಪ್ರಮುಖ ಆಧಾರ ಸ್ತಂಭ ಎನಿಸಿದ್ದಾರೆ. ತಂಡದ ಬೆಸ್ಟ್ ಸ್ಟ್ರೈಕರ್ ಆಗಿರುವ ಅವರು 131 ಪಂದ್ಯಗಳನ್ನು ಆಡಿ 84 ಗೋಲು ಗಳಿಸಿದ್ದಾರೆ. ಸಕ್ರಿಯವಾಗಿರುವ ಫುಟ್ಬಾಲ್ ಆಟಗಾರರ ಪೈಕಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 84ಕ್ಕಿಂತ ಹೆಚ್ಚು ಗೋಲು ಗಳಿಸಿರುವುದು ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಯೋನೆಲ್ ಮೆಸ್ಸಿ ಮಾತ್ರವೇ.

ತಂಡಕ್ಕೆ ಆಧಾರ
ಬೆಂಗಳೂರು ಎಫ್‌ಸಿ ತಂಡದಲ್ಲಿರುವ ಸುನೀಲ್ ಛೇಟ್ರಿ ಬೆಂಗಳೂರು ಫುಟ್ಬಾಲ್ ಫ್ಯಾನ್‌ಗಳ ಫೇವರಿಟ್ ಕೂಡ ಹೌದು. ಮೊನ್ನೆಮೊನ್ನೆ ಬೆಂಗಳೂರು ಎಫ್‌ಸಿ ಡುರಾಂಡ್ ಕಪ್ ಅನ್ನು ಮೊದಲ ಬಾರಿಗೆ ಗೆದ್ದು ಬೀಗಿದೆ. ಈ ಗೆಲುವಿನಲ್ಲಿ ಛೇಟ್ರಿ ಪಾತ್ರ ದೊಡ್ಡದು.
ರಾಷ್ಟ್ರೀಯ ತಂಡವಾಗಲೀ, ಕ್ಲಬ್ ತಂಡವಾಗಲೀ ಸುನೀಲ್ ಛೇಟ್ರಿ ಗೋಲಿಲ್ಲದೇ ಗೆಲುವು ಸಾಧ್ಯವಿಲ್ಲ ಎನ್ನುವಷ್ಟು ಕ್ಯಾಪ್ಟನ್ ಪಾತ್ರ ಪ್ರಮುಖವಾಗಿದೆ. ಎಐಎಫ್‌ಎಫ್‌ನಿಂದ ದಾಖಲೆಯ ಏಳು ಬಾರಿ ಅವರು ವರ್ಷದ ಫುಟ್ಬಾಲ್ ಆಟಗಾರ ಎಂಬ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಭಾರತೀಯ ಕ್ರೀಡೆಯ ಸರ್ವೋತ್ಕೃಷ್ಟವೆಂದು ಪರಿಗಣಿಸಲಾದ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಫುಟ್ಬಾಲ್ ಆಟಗಾರ ಅವರಾಗಿದ್ದಾರೆ.
ಏಷ್ಯನ್ ಫುಟ್ಬಾಲ್ ಒಕ್ಕೂಟ ಎಎಫ್‌ಸಿಯಿಂದ ಸುನೀಲ್ ಛೇಟ್ರಿಗೆ ಏಷ್ಯನ್ ಐಕಾನ್ ಬಿರುದು ಕೂಡ ಸಿಕ್ಕಿದೆ. 38 ವರ್ಷದ ಸುನೀಲ್ ಛೇಟ್ರಿಗೆ ಈಗ ನಿವೃತ್ತಿಯ ವಯಸ್ಸು. ವಿಶ್ವದ ಬಹುತೇಕ ಫುಟ್ಬಾಲ್ ಆಟಗಾರರು 35 ವರ್ಷ ದಾಟುವುದರೊಳಗೆ ನೇಪಥ್ಯಕ್ಕೆ ಸರಿದುಬಿಡುತ್ತಾರೆ. ಆದರೆ, 20 ವರ್ಷಗಳ ಹಿಂದಿನ ಅದೇ ಚುರುಕುತನವನ್ನು ಸುನೀಲ್ ಛೇಟ್ರಿ ಈಗಲೂ ಉಳಿಸಿಕೊಂಡಿದ್ದಾರೆ. ಅವರ ಆಟದ ಮಟ್ಟದಲ್ಲಿ ಒಂದಿನಿತೂ ಕುಂದಾಗಿಲ್ಲ. ಇಷ್ಟು ಸುದೀರ್ಘ ಕಾಲ ಆಡಿದ ಯಾರೇ ಆದರೂ ಉತ್ಸಾಹ ಕಳೆದುಕೊಳ್ಳುವುದೋ ಅಥವಾ ಲಯ ಕಳೆದುಕೊಳ್ಳುವುದೋ ಸಹಜ. ಆದರೆ, ಸುನೀಲ್ ಛೇಟ್ರಿ ಮಾತ್ರ ಇದಕ್ಕೆ ಅಪವಾದ. ಈ ವಿಚಾರಕ್ಕೆ ಅವರು ನಿಜಕ್ಕೂ ಭಾರತೀಯ ಕ್ರೀಡೆಯ ದಂತಕಥೆ ಎನ್ನಲಡ್ಡಿ ಇಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications