ಮೈಸೂರಿನ 7 ವರ್ಷದ ಬಾಲಕಿ ವುಶು ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಮೈಸೂರು, ನವೆಂಬರ್ 22; ಸಾಧನೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಏಕಾಗ್ರತೆ ಹಾಗೂ ನಿರಂತರ ಕಲಿಕೆ ಇದ್ದರೆ ಬಂಡೆ ಕೂಡ ಹೂವಿನಂತೆ ಹಗುರಾಗುತ್ತದೆ ಎಂಬುದಕ್ಕೆ ಮೈಸೂರು ಗಾಯಿತ್ರಿಪುರಂನ ಜಿ. ಪ್ರಣತಿ ಎಂಬ ಬಾಲಕಿಯೇ ಉತ್ತಮ ಉದಾಹರಣೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತು ಪ್ರಣತಿಗೆ ಚೆನ್ನಾಗಿಯೇ ಒಪ್ಪುತ್ತದೆ. ನಗರದ 7 ವರ್ಷದ ಬಾಲಕಿ ರಾಜ್ಯಮಟ್ಟದ ವುಶು ಚಾಂಪಿಯನ್ ಶಿಪ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಜಯಿಸುವ ಮೂಲಕ ಭವಿಷ್ಯದ ಕ್ರೀಡಾ ಸ್ಟಾರ್ ಆಗುವ ಮುನ್ಸೂಚನೆ ನೀಡಿದ್ದಾಳೆ. ಛಾಯಾಗ್ರಾಹಕ ಗಿರಿಧರ್ ಹಾಗೂ ಸಂಗೀತ ದಂಪತಿ ಪುತ್ರಿ ಜಿ. ಪ್ರಣತಿ ನಗರದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಕೊನೆಗೂ ಕೊಡಗು ಬಾಲಕಿ ಕೈ ಸೇರಿದ ಅಮ್ಮನ ನೆನಪಿನ ಮೊಬೈಲ್!
ವುಶು ಅಸೋಸಿಯೇಷನ್ ಕರ್ನಾಟಕದಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ತರಬೇತುದಾರ ಎಂ. ಕೆ. ಆಶಿಫ್ ಪ್ರಣತಿಗೆ ತರಬೇತಿ ನೀಡುತ್ತಿದ್ದಾರೆ. ತರಬೇತಿಗೆ ಸೇರಿದಾಗ ಆಕೆಗೆ ಕೇವಲ 3 ವರ್ಷ. ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಕಲೆಯನ್ನು ಮೈಗೂಡಿಸಿಕೊಳ್ಳಬೇಕೆಂಬ ಇರಾದೆಯಿಂದ ತಂದೆ ಗಿರಿಧರ್ ಈಕೆಯನ್ನು ವುಶು ತರಬೇತಿಗೆ ಸೇರಿಸಿದ್ದರು.
ಲಾಕ್ಡೌನ್ ಅನುಭವದ ಪುಸ್ತಕ ಬರೆದು ಮೆಚ್ಚುಗೆ ಪಡೆದ ಬೆಂಗಳೂರಿನ ಬಾಲಕಿ
ಆಟದ ಜತೆ ಪಾಠದಲ್ಲೂ ಮುಂದಿರುವ ಪ್ರಣತಿ ಸಂಗೀತ, ಈಜಿನಲ್ಲೂ ಕೌಶಲ ಮೈಗೂಡಿಸಿಕೊಂಡಿರುವ ಬಹುಮುಖ ಪ್ರತಿಭೆ. ರಾಜ್ಯಮಟ್ಟ ವುಶು ಚಾಂಪಿಯಶಿಪ್‌ಗೆ ಪ್ರವೇಶ ಕೊಟ್ಟಿರುವ ಪ್ರಣತಿ ತನ್ನ ಆರನೇ ವಯಸ್ಸಿನಲ್ಲೇ ಪದಕ ಪಡೆದುಕೊಂಡಿದ್ದಾಳೆ. ಗಾಯಿತ್ರಿಪುರಂನ ಜಿ. ಪ್ರಣತಿ ವಯಸ್ಸಿಗೂ ಮೀರಿದಂತೆ ಸಾಧನೆ ಮಾಡಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾಳೆ.
ನವೆಂಬರ್ನಿಂದ ಕರಾವಳಿಯಲ್ಲಿ ಕಂಬಳ ಕಲರವ
ಭವಿಷ್ಯದ ಕ್ರೀಡಾ ಪ್ರತಿಭೆಯಾಗಿ ಅರಳುತ್ತಿದ್ದಾಳೆ. ಜಿಲ್ಲಾ, ವಲಯ ಹಾಗೂ ಪ್ರಾದೇಶಿಕ ಮಟ್ಟದ ವುಶು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವುಶು ಅಸೋಸಿಯೇಷನ್ ಕರ್ನಾಟಕ ಕಳೆದ ಬಾರಿ ಬಾಗಲಕೋಟೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವುಶು ಕ್ರೀಡೆಯಲ್ಲಿ ಸಬ್ ಜೂನಿಯರ್ (20 ಕೆಜಿ ) ವಿಭಾಗದಲ್ಲಿ ಈಕೆಗಿಂತ ಹಿರಿಯ ವಯಸ್ಸಿನ ಪಟುಗಳನ್ನು ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಳು.

ಪ್ರಸ್ತಕ ಸಾಲಿನಲ್ಲಿ ಮೂಡುಬಿದಿರೆಯ ಆಳ್ವಾಸ್‌ನಲ್ಲಿ ನಡೆದ 20ನೇ ಕರ್ನಾಟಕ ರಾಜ್ಯ ವುಶು ಚಾಂಪಿಯನ್‌ಶಿಪ್‌ನ ಸಬ್ ಜ್ಯೂನಿಯರ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಣತಿ ರಾಜ್ಯಮಟ್ಟದಲ್ಲಿ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾಳೆ.
ಈ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವುಶು ಅಸೋಸಿಯೇಷನ್ ಇಂಡಿಯಾ ಜನವರಿಯಲ್ಲಿ ಕೋಲ್ಕತ್ತಾದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಪಂದ್ಯದಲ್ಲಿ ಪ್ರಣತಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾಳೆ.
"ವುಶು ಕ್ರೀಡೆ ತರಬೇತಿ ಪಡೆಯುತ್ತಾ ಇದರಲ್ಲಿ ನನ್ನ ಆಸಕ್ತಿ ಹೆಚ್ಚಾಯಿತು. ನಾನು ಹಲವು ಕಡೆ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದೇನೆ. ಕ್ರೀಡೆ ಜತೆ ಓದಿನತ್ತಲೂ ಆಸಕ್ತಿ ವಹಿಸುವಂತೆ ಪೋಷಕರು ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರೀಡೆ ಜತೆಗೆ ಐಎಎಸ್ ಅಥವಾ ಐಪಿಎಸ್ ಮಾಡುವ ಕನಸು ನನ್ನದು" ಎಂದು ಜಿ. ಪ್ರಣತಿ ಸಂತಸ ವ್ಯಕ್ತಪಡಿಸಿದ್ದಾಳೆ.
"ಪ್ರಣತಿ ವಯಸ್ಸಿಗೆ ಮೀರಿ ಸಾಧನೆ ಮಾಡಿದ್ದಾಳೆ. ತರಗತಿಯಲ್ಲಿ ಎಲ್ಲರಿಗಿಂತಲೂ ಕ್ರಿಯಾಶೀಲವಾಗಿರುತ್ತಾಳೆ. ಕಠಿಣ ಪರಿಶ್ರಮ ವಹಿಸುತ್ತಾಳೆ. ಕಿರಿಯ ವಯಸ್ಸಿನಲ್ಲೇ ರಾಜ್ಯಮಟ್ಟದಲ್ಲಿ ವುಶು ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಚಿನ್ನ ಪಡೆದ ಅತಿ ಕಿರಿಯ ಸಾಧಕಿ" ಎಂದು ತರಬೇತುದಾರ ಎಂ. ಕೆ. ಆಶಿಫ್ ತಿಳಿಸಿದ್ದಾರೆ.
ವುಶು ಕ್ರೀಡೆ ಕುರಿತು; ವುಶೂ ಅಥವಾ ವುಶು ಕ್ರೀಡೆ ಚೀನಾ ದೇಶದ ಸಾಂಪ್ರದಾಯಿಕ ಸಮರಕಲೆ. ಇದು ಸುಮಾರು 5 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಕಲೆಯ ಜನಕರು ದಕ್ಷಿಣ ಭಾರತೀಯ ಕ್ಷತ್ರಿಯ ಅರಸು. ಬೌದ್ಧ ಧರ್ಮಿಯರು ತಮ್ಮ ಮೇಲೆ ಅನ್ಯ ಧರ್ಮಿಯರು ನಡೆಸುತ್ತಿದ್ದ ಅಕ್ರಮಣಗಳನ್ನು ಎದುರಿಸಲು ಸಮರ ಕಲೆ ವುಶುವನ್ನು ಕರಗತ ಮಾಡಿಕೊಂಡಿದ್ದರು ಎಂದು ಇತಿಹಾಸ ಹೇಳುತ್ತದೆ.