DC vs MI: ಕರುಣ್ ನಾಯರ್ ಅಬ್ಬರದ ನಡುವೆಯೂ ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು
ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ಕೊನೆಗೂ ಈ ಆವೃತ್ತಿಯಲ್ಲಿ ಎರಡನೇ ಬಾರಿ ಗೆಲುವು ಸಾಧಿಸಿ ನಿಟ್ಟುಸಿರು ಬಿಟ್ಟಿದೆ. ಸತತ 4 ಪಂದ್ಯಗಳನ್ನು ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸೋಲು ಕಂಡಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು. ರಿಯಾನ್ ರಿಕಲ್‌ಟನ್ 25 ಎಸೆತಗಳಲ್ಲಿ 41 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 40 ರನ್ ಗಳಿಸಿದರು. ತಿಲಕ್ ವರ್ಮಾ 33 ಎಸೆತಗಳಲ್ಲಿ 59 ರನ್ ಗಳಿಸಿದರೆ, ನಮನ್ ಧಿರ್ 17 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರು. ವಿಪ್ರಜ್ ನಿಗಮ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಮುಖೇಶ್ ಕುಮಾರ್ 1 ವಿಕೆಟ್ ಪಡೆದರು.

ಕರುಣ್ ನಾಯರ್ ಅಬ್ಬರದ ಬ್ಯಾಟಿಂಗ್
206 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಎಸೆತದಲ್ಲೇ ಆರಂಭಿಕ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಕರುಣ್ ನಾಯರ್ ಮತ್ತು ಅಭಿಷೇಕ್ ಪೊರೆಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಸರೆಯಾದರು.
ಅಭಿಷೇಕ್ ಪೊರೆಲ್ 25 ಎಸೆತಗಳಲ್ಲಿ 33 ರನ್ ಗಳಿಸಿದರೆ, ಕರುಣ್ ನಾಯರ್ ಅಬ್ಬರಿಸಿದರು. ಮೂರು ವರ್ಷಗಳ ಬಳಿಕ ಮೊದಲ ಬಾರಿ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದ ಕರುಣ್ ನಾಯರ್, ಎರಡೂ ಕೈಗಳಿಂದ ಸಿಕ್ಕ ಅವಕಾಶ ಬಾಚಿಕೊಂಡರು. ಜಸ್ಪ್ರೀತ್ ಬುಮ್ರಾರಿಗೂ ಬೌಂಡರಿ ಸಿಕ್ಸರ್ ಬಾರಿಸಿ ಮುಂಬೈ ಇಂಡಿಯನ್ಸ್‌ಗೆ ದಂಗಾಗುವಂತೆ ಮಾಡಿದರು.
40 ಎಸೆತಗಳಲ್ಲೇ 12 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ 89 ರನ್ ಗಳಿಸಿದರು. ಶತಕ ಗಳಿಸುವ ಸನಿಹದಲ್ಲಿದ್ದ ಅವರು, ಸ್ಯಾಂಟ್ನರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಹಾದಿ ಕಳೆದುಕೊಂಡಿತು. ಮುಂಬೈ ಇಂಡಿಯನ್ ಬೌಲರ್ ಗಳು ಉತ್ತಮ ಬೌಲಿಂಗ್ ಮಾಡುವ ಮೂಲಕ ಸತತವಾಗಿ ವಿಕೆಟ್ ಪಡೆದರು.
19ನೇ ಓವರ್ ನಲ್ಲಿ ಕೊನೆಯ ಮೂರು ಎಸೆತಗಳಲ್ಲಿ ಸತತ ಮೂರು ಆಟಗಾರರು ರನೌಟ್ ಆಗುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡಿತು. ಮೂರು ಮಿಂಚಿನ ರನೌಟ್ ಮಾಡಿದ ಮುಂಬೈ ಇಂಡಿಯನ್ಸ್ 12 ರನ್‌ಗಳ ರೋಚಕ ಗೆಲುವು ಸಾಧಿಸಿತು.












Click it and Unblock the Notifications