MI vs GT: ಮುಂಬೈ ಇಂಡಿಯನ್ಸ್‌ಗೆ ಅಹಮದಾಬಾದ್ ಟಿಕೆಟ್! ಐಪಿಎಲ್‌ನಿಂದ ಹೊರಬಿದ್ದ ಗುಜರಾತ್ ಟೈಟಾನ್ಸ್
ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ 2025ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 20 ರನ್‌ಗಳ ಗೆಲುವು ಸಾಧಿಸುವ ಮೂಲಕ ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ರಿಯಾನ್ ರಿಕಲ್ಟನ್ ಬದಲಾಗಿ ಕಣಕ್ಕಿಳಿದ ಜಾನಿ ಬೈರ್ ಸ್ಟೋ ಅಬ್ಬರದ ಆರಂಭ ಒದಗಿಸಿದರು. ರೋಹಿತ್ ಶರ್ಮಾಗೆ ಕೂಡ ಎರಡು ಬಾರಿ ಗುಜರಾತ್ ಟೈಟಾನ್ಸ್ ಫೀಲ್ಡರ್ ಗಳು ಜೀವದಾನ ನೀಡಿದ್ದು ಮುಂಬೈ ಇಂಡಿಯನ್ಸ್‌ಗೆ ವರವಾಯಿತು.
ಬೈರ್ ಸ್ಟೋ 22 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 47 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 50 ಎಸೆತಗಳಲ್ಲಿ 9 ಬೌಂಡರಿ 4 ಸಿಕ್ಸರ್ ಸಹಿತ 81 ರನ್ ಗಳಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 33 ರನ್ ಗಳಿಸಿದರೆ, ತಿಲಕ್ ವರ್ಮಾ 11 ಎಸೆತಗಳಲ್ಲಿ 25 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೊನೆಯಲ್ಲಿ 9 ಎಸೆತಗಳಲ್ಲಿ 3 ಸಿಕ್ಸರ್ ಸಹಿತ ಅಜೇಯ 22 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ 228 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಹಾಯ ಮಾಡಿದರು.

ಪಂದ್ಯಾವಳಿಯಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದ ಪ್ರಸಿದ್ಧ್ ಕೃಷ್ಣ 4 ಓವರ್ ಗಳಲ್ಲಿ 2 ವಿಕೆಟ್ ಪಡೆದರೂ 53 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಮೊಹಮ್ಮದ್ ಸಿರಾಜ್ 4 ಓವರ್ ಗಳಲ್ಲಿ 37 ರನ್ ನೀಡಿ 1 ವಿಕೆಟ್ ಪಡೆದರೆ, ಸಾಯಿ ಕಿಶೋರ್ 4 ಓವರ್ ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದರು.
ಸಾಯಿ ಸುದರ್ಶನ್, ಸುಂದರ್ ಹೋರಾಟ
229 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್‌ಗೆ ಮೊದಲ ಓವರ್ ನಲ್ಲೇ ದೊಡ್ಡ ಆಘಾತ ಎದುರಾಯಿತು. ನಾಯಕ ಶುಭಮನ್ ಗಿಲ್ ಕೇವಲ 1 ರನ್ ಗಳಿಸಿ ಔಟಾದರು. ಬಳಿಕ ಸಾಯಿ ಸುದರ್ಶನ್ ಮತ್ತು ಕುಸಾಲ್ ಮೆಂಡಿಸ್ ಎರಡನೇ ವಿಕೆಟ್‌ಗೆ 64 ರನ್ ಕಲೆಹಾಕಿದರು. ಉತ್ತಮವಾಗಿ ಆಡುತ್ತಿದ್ದ ಕುಸಾಲ್ ಮೆಂಡಿಸ್ ಹಿಟ್ ವಿಕೆಟ್ ಆಗಿದ್ದು ಮತ್ತೊಂದು ಹೊಡೆತವಾಯಿತು.
ಬಳಿಕ ಬಂದ ವಾಷಿಂಗ್ಟನ್ ಸುಂದರ್ ಜೊತೆಗೂಡಿದ ಸಾಯಿ ಸುದರ್ಶನ್ 4ನೇ ವಿಕೆಟ್‌ಗೆ 84 ರನ್ ಕಲೆಹಾಕಿದರು. ವಾಷಿಂಗ್ಟನ್ ಸುಂದರ್ 24 ಎಸೆತಗಳಲ್ಲಿ 48 ರನ್ ಗಳಿಸಿದರೆ, ಸಾಯಿಸುದರ್ಶನ್ 49 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್ ಸಹಿತ 80 ರನ್ ಗಳಿಸಿ ಔಟಾದರು.
ಶೆರ್ಫಾನೆ ರುಥರ್ ಫೋರ್ಡ್ 15 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಶಾರುಖ್ ಖಾನ್ ಮತ್ತು ರಾಹುಲ್ ತೆವಾಟಿಯಾ ಇದ್ದರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.












Click it and Unblock the Notifications