ಬೆಟ್ಟಿಂಗ್ ತನಿಖಾಧಿಕಾರಿ ವಿರುದ್ಧ ಕೇಸ್ ದಾಖಲಿಸಿದ ಎಂಎಸ್ ಧೋನಿ
ಚೆನ್ನೈ, ನ.6: ಟೀಂ ಇಂಡಿಯಾ ಹಾಗೂ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಅವರು ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖಾಧಿಕಾರಿ ಜಿ ಸಂಪತ್ ಕುಮಾರ್ ಅವರ ವಿರುದ್ಧ ಎಂ ಎಸ್ ಧೋನಿ ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. 2013ರ ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ಬೆಟ್ಟಿಂಗ್ ಆರೋಪ ಕೇಳಿ ಬಂದಿತ್ತು.
ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ತನಿಖಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ ತಮ್ಮ ವಿರುದ್ಧ ಕೆಲ ಮಾನಹಾನಿಕರ ಟೀಕೆ ಮಾಡಿದ್ದು ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಧೋನಿ ತಮ್ಮ ದೂರಿನಲ್ಲಿ ಹೇಳಿದ್ದಾರೆ. ನವೆಂಬರ್ 4ರಂದು ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಕೈಗೆತ್ತಿಕೊಂಡರೂ ಸಮಯಾವಕಾಶ ಕೊರತೆಯಿಂದ ಮುಂದೂಡಿದೆ.

2013ರಲ್ಲಿ ಐಪಿಎಲ್ ಪಂದ್ಯಗಳ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಧೋನಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ದೋಷಪೂರಿತ ಹೇಳಿಕೆ ಹಾಗೂ ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ ಎಂದು ಆಕ್ಷೇಪಿಸಿ ಸಂಪತ್ ಸೇರಿದಂತೆ, ಒಂದು ಟಿವಿ ಚಾನೆಲ್ ಕಂಪೆನಿ ಹಾಗೂ ಇನ್ನಿತರರ ವಿರುದ್ಧ ಧೋನಿ 2021ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆರಂಭದಲ್ಲಿ ಐಪಿಎಲ್ ಹಗರಣದ ತನಿಖೆ ನಡೆಸಿದ್ದ ಸಂಪತ್ ಅವರೂ ಸೇರಿದಂತೆ ಪ್ರತಿವಾದಿಗಳು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧಿಸಬೇಕು ಎಂದು ಕೋರಿದ್ದರು. ಮಾನನಷ್ಟ ಉಂಟುಮಾಡುವಂತಹ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಆಗ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಇದೀಗ, ನ್ಯಾಯಾಂಗ ನಿಂದನೆ ಮೊಕದ್ದಮೆ ನಡೆಸುವ ಸಲುವಾಗಿ ಸಂಪತ್ ವಿರುದ್ಧ ಕ್ರಮ ಕೈಗೊಳ್ಳಲು ಈ ವರ್ಷ ಜುಲೈನಲ್ಲಿ ತಮಿಳುನಾಡು ಅಡ್ವೊಕೇಟ್ ಜನರಲ್ ಅವರ ಒಪ್ಪಿಗೆ ಪಡೆದಿರುವುದಾಗಿ ಧೋನಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಸಂಪತ್ ಅವರಿಗೆ ಸಮನ್ಸ್ ಜಾರಿ ಮಾಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
100 ಕೋಟಿರು ಮಾನನಷ್ಟ ಮೊಕದ್ದಮೆ ರದ್ದುಪಡಿಸುವಂತೆ ಕೋರಿ ಈ ಹಿಂದೆ ಸಂಪತ್ ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ಲಿಖಿತ ಹೇಳಿಕೆಗಳನ್ನು ನೀಡಿದ್ದ ಅವರು ತಮ್ಮ ಬಾಯಿ ಮುಚ್ಚಿಸಲು ಧೋನಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
2013ರ ಐಪಿಎಲ್ ವೇಳೆಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ದೆಹಲಿ ಪೊಲೀಸರು ಮೂವರು ಕ್ರಿಕೆಟಿಗರಾದ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕೀತ್ ಚವಾಣ್ ಅವರನ್ನು ಬಂಧಿಸಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಆಟಗಾರರು, 11 ಬುಕ್ಕಿಗಳನ್ನು ಬಂಧಿಸಿದ್ದು, ಭಾರಿ ಸಂಚಲನ ಮೂಡಿಸಿತ್ತು. ನಟ ವಿಂದು ದಾರಾ ಸಿಂಗ್ ನೀಡಿದ ಹೇಳಿಕೆ ಬಳಿಕ ತನಿಖೆ ತೀವ್ರಗೊಂಡಿತ್ತು. ಆದರೆ, ಅಂತಿಮವಾಗಿ ಮೂವರು ಕ್ರಿಕೆಟಿಗರನ್ನು ಖುಲಾಸೆಗೊಂಡರು.
ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಮತ್ತಿತರರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಯ ವಿವರ ಒಳಗೊಂಡಿರುವ ಮುದ್ಗಲ್ ಸಮಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸೂಚಿಸಿದ್ದ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಕೂಡ ಧೋನಿ ಪ್ರಶ್ನಿಸಿದ್ದರು.












Click it and Unblock the Notifications