ಮನೆ ನೆನಪಾಗಲಿಲ್ವಾ?, ಮೊದಲು ಹೋಗಿ ಹೇರ್ ಕಟ್ ಮಾಡಿಸ್ಕೋ; ಸಿರಾಜ್-ಬುಮ್ರಾ ತಮಾಷೆಯ ಸಂಭಾಷಣೆ ಭಾರಿ ವೈರಲ್
IPL 2026: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 20) ರಾತ್ರಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 99 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಪಂದ್ಯದ ನಂತರ, ಮೊಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬುಮ್ರಾ ನಡುವೆ ನಡೆದ ತಮಾಷೆ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್‌ಗಳನ್ನು ಕಲೆಹಾಕಿತು. ಎಂಐ ನೀಡಿದ 200 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ಜಿಟಿ ವಿಫಲವಾಯಿತು. 100 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಹೀನಾಯ ಸೋಲನುಭವಿಸಿತು.

ಸಿರಾಜ್, ಬುಮ್ರಾ ಸಂಭಾಷಣೆ ಭಾರೀ ವೈರಲ್
ಪಂದ್ಯದ ಮುಕ್ತಾಯದ ನಂತರ ಸಿರಾಜ್ ಅವರು "ಜಸ್ಸಿ, ನಿನಗೆ ಮನೆಯ ನೆನಪಾಗಲಿಲ್ವಾ?" ("Ghar ki yaad nahi aayi tujhe, Jassi?") ಎಂದು 'ಧುರಂಧರ್' ಚಿತ್ರದ ಡೈಲಾಗ್ ಹೊಡೆದು ಬುಮ್ರಾ ಅವರನ್ನು ತಮಾಷೆ ಮಾಡಿದರು. ಬಳಿಕ ಬುಮ್ರಾ ಇದಕ್ಕೆ ನಗುತ್ತಲೇ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದು, "ಮೊದಲು ಹೋಗಿ ಹೇರ್ ಕಟ್ ಮಾಡಿಸ್ಕೋ" ಎಂದು ಸಿರಾಜ್ ಕಾಲೆಳೆದಿದ್ದಾರೆ.
ಮೊದಲ ವಿಕೆಟ್ ಪಡೆದು ಸಂಭ್ರಮಿಸಿದ ಬುಮ್ರಾ
ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ, 99 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಅದರಲ್ಲೂ ಕಳೆದ ಐದು ಪಂದ್ಯಗಳಿಂದ ವಿಕೆಟ್ ಪಡೆಯಲು ಪರದಾಡುತ್ತಿದ್ದ ಬುಮ್ರಾ, ಈ ಪಂದ್ಯದಲ್ಲಿ ವಿಕೆಟ್ ಕಿತ್ತು ಮತ್ತೆ ಫಾರ್ಮ್‌ಗೆ ಮರಳಿದರು. ಈ ಸೀಸನ್‌ನಲ್ಲಿ ಪಡೆದ ಮೊದಲ ವಿಕೆಟ್ ಆಗಿದ್ದರಿಂದ, ಬುಮ್ರಾ ಕ್ರೀಡಾಂಗಣದಲ್ಲಿ ಕುಣಿದಾಡಿ ಸಂಭ್ರಮಿಸಿದರು.
ಮುಂಬೈ ಇಂಡಿಯನ್ಸ್ ನೀಡಿದ್ದ 199 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಬುಮ್ರಾ ಆರಂಭದಲ್ಲೇ ಆಘಾತ ನೀಡಿರು. ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಅವರನ್ನು ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಮಾಡಿದರು. ಅವರು ಮೂರು ಓವರ್ ಎಸೆದು ಕೇವಲ 15 ರನ್ ನೀಡಿ 1 ವಿಕೆಟ್ ಪಡೆದು ಮಿಂಚಿದರು.
ಜಿಟಿ ಪರ ಸಿರಾಜ್ ಉತ್ತಮ ಬೌಲಿಂಗ್ ಪ್ರದರ್ಶನ
ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ಹೀನಾಯ ಸೋಲು ಕಂಡರೂ ಸಹ, ಸಿರಾಜ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ನಾಲ್ಕು ಓವರ್ ಬೌಲಿಂಗ್ ಎಸೆದು ಕೇವಲ 25 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದರು. ಒಟ್ಟಿನಲ್ಲಿ ಈ ಮುಂಬೈ ಪರ ಬುಮ್ರಾ ಮಿಂಚಿದರೆ, ಜಿಟಿ ಪರ ಮೊಹ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿ ಗಮನ ಸೆಳೆದರು. ಜೊತೆಗೆ ಪಂದ್ಯ ಮುಗಿದರೂ ಸಹ ಇವರಿಬ್ಬರ ನಡುವೆ ನಡೆದ ತಮಾಷೆಯ ಸಂಭಾಷಣೆ ಮಾತ್ರ ಈಗಲೂ ಎಲ್ಲಡೆ ಸಖತ್ ಸದ್ದು ಮಾಡುತ್ತಿದೆ.












Click it and Unblock the Notifications