8 ತಿಂಗಳ ಮಗುವಿನ ಜೀವ ಉಳಿಸಲು ಒಲಿಂಪಿಕ್ ಪದಕವನ್ನೇ ಹರಾಜಿಗಿಟ್ಟ ವೀರ ವನಿತೆ; ಮೆಚ್ಚುಗೆಗಳ ಸುರಿಮಳೆ
ಸಾಮಾನ್ಯವಾಗಿ ಕ್ರೀಡೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದವರನ್ನು ನಾವು ನೋಡಿಯೇ ಇರುತ್ತೇವೆ. ಈ ನಡುವೆಯೇ ಮಹಿಳಾ ಕ್ರೀಡಾಪಟುವೊಬ್ಬರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ 8 ತಿಂಗಳ ಮಗುವನ್ನು ಉಳಿಸಿಕೊಳ್ಳಲು ತಾವು ಗೆದ್ದ ಪದಕವನ್ನು ಹರಾಜು ಹಾಕಿ ಮಾನವೀಯತೆ ಮೆರೆದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಪದಕ ಕೇವಲ ಲೋಹದ ತುಂಡು, ಆದರೆ ಅದರಿಂದ ಉಳಿಯುವ ಜೀವ ಅಮೂಲ್ಯ. ಈ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸಿದವರು ಪೋಲೆಂಡ್‌ನ ಒಲಿಂಪಿಕ್ ಕ್ರೀಡಾಪಟು ಮರಿಯಾ ಆಂಡ್ರೇಜಿಕ್. ಕ್ಯಾನ್ಸರ್ ಗೆದ್ದು ಬಂದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಈ ವೀರ ವನೀತೆ 8 ತಿಂಗಳ ಮಗುವಿನ ತುರ್ತು ಶಸ್ತ್ರಚಿಕಿತ್ಸೆಗೆ ತಮ್ಮ ಪದಕವನ್ನೇ ಹರಾಜಿಗಿಟ್ಟು ಮಾನವೀಯತೆ ಮೆರೆದಿದ್ದಾರೆ.

ಕಂದಮ್ಮನ ಜೀವ ಉಳಿಸಿದ ಮರಿಯಾ ಮ್ಯಾಗ್ಡಲೀನಾ
ಟೋಕಿಯೊ 2020ರ ಒಲಿಂಪಿಕ್ಸ್‌ನಲ್ಲಿ ಪೋಲೆಂಡ್‌ನ ಜಾವೆಲಿನ್ ಥ್ರೋ (Javelin thrower) ಆಟಗಾರ್ತಿ ಮರಿಯಾ ಮ್ಯಾಗ್ಡಲೀನಾ ಆಂಡ್ರೇಜಿಕ್ ಗಳಿಸಿದ ಬೆಳ್ಳಿ ಪದಕವು ಕೇವಲ ಅವರ ಕ್ರೀಡಾ ಸಾಧನೆಯ ಪ್ರತಿರೂಪವಾಗಿರಲಿಲ್ಲ. ಅದು ಒಬ್ಬ ಎಂಟೂವರೆ ತಿಂಗಳ ಕಂದಮ್ಮನ ಜೀವ ಉಳಿಸಿದ ಮಹತ್ವದ ಕಾರ್ಯಕ್ಕೆ ಸಾಕ್ಷಿಯಾಯಿತು.
ಮರಿಯಾ ಅವರು ಹೃದಯಸಂಬಂಧಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ Miłoszek Małysa ಎಂಬ ಎಂಟು ತಿಂಗಳ ಮಗುವಿನ ತುರ್ತು ಚಿಕಿತ್ಸೆಯ ಬಗ್ಗೆ ತಿಳಿದುಕೊಂಡರು. ಮಗುವಿನ ಚಿಕಿತ್ಸೆಗೆ ಅಮೆರಿಕದ ಬಾಸ್ಟನ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು ಮತ್ತು ಅದಕ್ಕೆ ಸುಮಾರು $3,85,000 (ಅಂದಾಜು 92 ಲಕ್ಷ ರೂಪಾಯಿಗೂ ಹೆಚ್ಚು) ಹಣದ ಅಗತ್ಯವಿತ್ತು. ಮಗುವಿನ ಕುಟುಂಬಕ್ಕೆ ಈ ದೊಡ್ಡ ಮೊತ್ತವನ್ನು ಸಂಗ್ರಹಿಸುವುದೇ ದೊಡ್ಡ ಸವಾಲಾಗಿತ್ತು.
ಬೆಳ್ಳಿ ಪದಕ ಹರಾಜು ಹಾಕಲು ನಿರ್ಧಾರ
ಇದನ್ನು ಅರಿತ ಮರಿಯಾ ತಮ್ಮ ಕ್ರೀಡಾ ಜೀವನದ ಅತ್ಯುನ್ನತ ಸಾಧನೆಯಾದ ಒಲಿಂಪಿಕ್ ಬೆಳ್ಳಿ ಪದಕವನ್ನು ಹರಾಜು ಹಾಕಲು ನಿರ್ಧರಿಸಿದರು. 'ಪದಕದ ನಿಜವಾದ ಮೌಲ್ಯವು ಯಾವಾಗಲೂ ಹೃದಯದಲ್ಲಿ ಇರುತ್ತದೆ. ಪದಕವು ಕೇವಲ ಒಂದು ವಸ್ತು, ಆದರೆ ಅದು ಮತ್ತೊಬ್ಬರ ಜೀವ ಉಳಿಸಲು ನೆರವಾದರೆ ಅದಕ್ಕಿಂತ ದೊಡ್ಡ ತೃಪ್ತಿ ಇನ್ನೊಂದಿಲ್ಲ,' ಎಂಬುದು ಅವರ ನಿಲುವಾಗಿತ್ತು.
ಮಹತ್ವದ ಕಾರ್ಯಕ್ಕೆ ಮುಂದಾದ ಝಾಬ್ಕಾ ಕಂಪನಿ
ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಪೋಲೆಂಡ್‌ನ ಪ್ರಸಿದ್ಧ ಸೂಪರ್‌ಮಾರ್ಕೆಟ್ ಸರಣಿ ಸಂಸ್ಥೆ 'Zabka' (ಝಾಬ್ಕಾ) ಈ ಪದಕವನ್ನು ಹರಾಜಿನಲ್ಲಿ ಸುಮಾರು $125,000 ನೀಡಿ ಖರೀದಿಸಲು ಮುಂದೆ ಬಂದಿತು. ಅಷ್ಟೇ ಅಲ್ಲದೆ, ಸಾರ್ವಜನಿಕ ಕೊಡುಗೆಯ ಮೂಲಕ ಮಗುವಿನ ಚಿಕಿತ್ಸೆಗೆ ಬೇಕಾದ ಪೂರ್ತಿ ಹಣ ಸಂಗ್ರಹವಾಯಿತು.
ಪದಕ ಹಿಂತಿರುಗಿಸಿದ ಝಾಬ್ಕಾ ಸಂಸ್ಥೆ
ಆದರೆ ಕಥೆಯ ನಿಜವಾದ ತಿರುವು ಇಲ್ಲಿದೆ. Zabka ಸಂಸ್ಥೆಯು ಮರಿಯಾ ಅವರ ಈ ನಿಸ್ವಾರ್ಥ ತ್ಯಾಗ ಮತ್ತು ಮಾನವೀಯತೆಗೆ ಗೌರವ ಸಲ್ಲಿಸಿ, ಹರಾಜಿನಲ್ಲಿ ಗೆದ್ದ ಬೆಳ್ಳಿ ಪದಕವನ್ನು ಅವರಿಗೇ ಹಿಂತಿರುಗಿಸಿತು. ಸಂಸ್ಥೆಯು, 'ನಾವು ಮರಿಯಾ ಅವರ ನಿಸ್ವಾರ್ಥ ನಿರ್ಧಾರದಿಂದ ಪ್ರೇರಿತರಾಗಿದ್ದೇವೆ. ಪದಕವು ಅದನ್ನು ಗೆದ್ದ ಕ್ರೀಡಾಪಟುವಿನ ಬಳಿಯೇ ಇರಬೇಕು,' ಎಂದು ಘೋಷಿಸಿತು.
ಕ್ಯಾನ್ಸರ್ ಗೆದ್ದ ಮರಿಯಾ ಆಂಡ್ರೇಜಿಕ್
ವಿಶೇಷ ಅಂದ್ರೆ ಮರಿಯಾ ಆಂಡ್ರೇಜಿಕ್ ತಮ್ಮ ಜೀವನದುದ್ದಕ್ಕೂ ಕಠಿಣ ಸವಾಲುಗಳನ್ನು ದಾಟಿ ಬಂದವರು. 2018ರಲ್ಲಿ ಅವರು 'ಆಸ್ಟಿಯೋಸಾರ್ಕೋಮಾ' ಎಂಬ ಮೂಳೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕ್ಯಾನ್ಸರ್ ಅನ್ನು ಮೆಟ್ಟಿ ನಿಂತು, ಮತ್ತೆ ಕ್ರೀಡಾ ಅಖಾಡಕ್ಕೆ ಇಳಿದು ಒಲಿಂಪಿಕ್ ಪದಕ ಗೆದ್ದರು. ನೋವು ಮತ್ತು ಜೀವನ್ಮರಣದ ಹೋರಾಟ ಏನೆಂಬುದನ್ನು ಹತ್ತಿರದಿಂದ ಕಂಡಿದ್ದರಿಂದಲೇ, ಅವರಿಗೆ ಆ ಮಗುವಿನ ಜೀವದ ಮೌಲ್ಯ ಅರಿವಾಗಿತ್ತು.
ನಾವು ಸಾಮಾನ್ಯವಾಗಿ ಕ್ರೀಡಾಪಟುಗಳನ್ನು ಅವರು ಗಳಿಸುವ ಪದಕಗಳು, ದಾಖಲೆಗಳು ಮತ್ತು ಸಾಧಿಸುವ ವಿಜಯಗಳ ಆಧಾರದ ಮೇಲೆ ಕೊಂಡಾಡುತ್ತೇವೆ. ಆದರೆ, ಸಾಧಿಸಿದ ವಿಜಯಕ್ಕಿಂತಲೂ, ಆ ವಿಜಯದ ಸಂಕೇತವನ್ನು ಇತರರ ಒಳಿತಿಗಾಗಿ ಹೇಗೆ ಬಳಸುತ್ತೇವೆ ಎಂಬುದು ನಿಜವಾದ ವ್ಯಕ್ತಿತ್ವವನ್ನು ತೋರಿಸುತ್ತದೆ. ಮರಿಯಾ ಅವರಿಗೆ ಬೆಳ್ಳಿ ಪದಕವು ಕೇವಲ ಲೋಹದ ತುಂಡಾಗಿರಲಿಲ್ಲ, ಅದು ಒಬ್ಬ ಅಮಾಯಕ ಮಗುವಿಗೆ ದೊರೆತ ಹೊಸ ಜೀವನದ ಸಂಕೇತವಾಯಿತು. ಕ್ರೀಡಾಲೋಕ ಕಂಡ ಅತ್ಯಂತ ಪ್ರೇರಣಾದಾಯಿ ನೈಜ ಘಟನೆಗಳಲ್ಲಿ ಇದೂ ಒಂದಾಗಿದೆ ಅಂತಲೇ ಹೇಳಬಹುದು.


Click it and Unblock the Notifications
