Manu Bhaker: ಸೋನಿಯಾ ಗಾಂಧಿ ಭೇಟಿ ಮಾಡಿದ ಮನು ಭಾಕರ್, ರೊಚ್ಚಿಗೆದ್ದ ‘ಭಕ್ತರು’!
ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 2 ಕಂಚಿನ ಪದಕ ಗೆದ್ದುಕೊಟ್ಟು, ಭಾರಿ ಭರವಸೆ ಮೂಡಿಸಿರುವ ಭಾರತೀಯರ ಹೆಮ್ಮೆಯ ಕುವರಿ ಮನು ಭಾಕರ್ ಭಾರತಕ್ಕೆ ಬಂದು ಇಳಿದಿದ್ದಾರೆ. ಹೀಗಿದ್ದಾಗ ಮೊದಲಿಗೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿ ಮಾಡಿರುವ ಮನು ಭಾಕರ್ ಅವರು, ಚರ್ಚೆ ನಡೆಸಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ, ಕೆಲವರು ಬಂದು ಕೆಟ್ಟದಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ. ಇದಕ್ಕೆ ನೆಟ್ಟಿಗರು ಅವರ ರೀತಿಯೇ ಉತ್ತರ ಕೊಟ್ಟು, ರೊಚ್ಚಿಗೆದ್ದ 'ಭಕ್ತರು' ಅಂತಾ ಲೇವಡಿ ಮಾಡುತ್ತಿದ್ದಾರೆ!
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲಿನಿಂದ ಕೂಡ ಭಾರತ ತೀರಾ ಹಿಂದೆ ಉಳಿದಿದೆ. ಯಾಕೆ ಅಂದ್ರೆ ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪ ಮೊದಲಿನಿಂದ ಕೂಡ ಇದೆ. ಹೀಗಿದ್ದಾಗಲೇ ಭಾರತದ ಕ್ರೀಡಾಪಟುಗಳು ಎಲ್ಲಾ ಸಮಸ್ಯೆಗಳ ಗಡಿ ಮೀರಿ, ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿ ಇಟ್ಟು ಪದಕ ಬೇಟೆ ಆಡ್ತಿದ್ದಾರೆ. ಅದ್ರಲ್ಲೂ ಕಳೆದ 20 ವರ್ಷಗಳಲ್ಲಿ ಭಾರತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೊಡ್ಡ ಸಾಧನೆ ಮಾಡುತ್ತಿದೆ. ಈ ಪೈಕಿ 2024ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶೂಟರ್ ಮನು ಭಾಕರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಸೋನಿಯಾ ಗಾಂಧಿ ಭೇಟಿಗೆ ಆಕ್ರೋಶ?
2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ, ಶೂಟರ್ ಮನು ಭಾಕರ್ ಬರೋಬ್ಬರಿ 2 ಮೆಡಲ್ ಗೆದ್ದಿದ್ದಾರೆ. ಈ ಮೂಲಕ ಒಂದೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟು ಒಬ್ಬರು ಎರಡೆರಡು ಪದಕ ಗೆದ್ದ ಸಾಧನೆ ಮಾಡಿದ್ದಾರೆ ಮನು ಭಾಕರ್. ಇಂತಹ ಮಹಾನ್ ಸಾಧನೆ ಮಾಡಿ ಭಾರತಕ್ಕೆ ಬಂದಿರುವ ಮನು ಭಾಕರ್ ವಿರುದ್ಧ ಇದೀಗ ಆಕ್ರೋಶ ಮೊಳಗಿದೆ. ಯಾಕೆ ಅಂದ್ರೆ ಮನು ಭಾಕರ್ ಭಾರತಕ್ಕೆ ಬಂದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ ಮಾತನಾಡಬಹುದಿತ್ತು, ಆದರೂ ಸೋನಿಯಾ ಗಾಂಧಿ ಅವರನ್ನು ಮೊದಲಿಗೆ ಭೇಟಿ ಮಾಡಿದ್ದು ಏಕೆ? ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ ಕೆಲವರು.
ಪೊಲೀಸರು ಕ್ರಮ ಕೈಗೊಳ್ಳಲು ಆಗ್ರಹ!
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಜಗಳ ಕೂಡ ಶುರುವಾಗಿದೆ. ಯಾಕಂದ್ರೆ ಒಂದು ಕಡೆ ಮನು ಭಾಕರ್ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಅಂತಾ ಕೆಲವರು ಈಗ ಊಹೆ ಮಾಡುತ್ತಿದ್ದರೆ, ಮತ್ತೊಂದು ಕಡೆ ಇನ್ನೂ ಕೆಲವರು ಬಾಯಿಗೆ ಬಂದಂತೆ ಕಮೆಂಟ್ಸ್ ಹಾಕುತ್ತಿದ್ದಾರೆ. ಇದೇ ಸಮಯದಲ್ಲಿ ಪ್ರಬುದ್ಧ ಭಾರತೀಯರು ಮಾತ್ರ, ಈ ವಿಚಾರದಲ್ಲಿ ಕೂಡ ರಾಜಕೀಯ ತರಬೇಡಿ ನೀವು ಅಂತಾ ಆಗ್ರಹಿಸುತ್ತಿದ್ದಾರೆ. ಇದು ದೊಡ್ಡ ಮಟ್ಟಿಗೆ ಚರ್ಚೆಗೂ ವೇದಿಕೆ ಒದಗಿಸಿದೆ. ಅಲ್ಲದೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವವರ ವಿರುದ್ಧ ಮನು ಭಾಕರ್ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೆ, ಪೊಲೀಸರು ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications