12,715 ಕೋಟಿ ರು ಗೆ ಎರಡು ಹೊಸ ಐಪಿಎಲ್ ತಂಡಗಳ ಖರೀದಿ
ದುಬೈ, ಅಕ್ಟೋಬರ್ 25: ಐಷಾರಾಮಿ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ತಂಡಗಳ ಪಟ್ಟಿಗೆ ಇನ್ನೆರಡು ಹೊಸ ತಂಡಗಳು ಇಂದು ಸೇರ್ಪಡೆಗೊಂಡಿವೆ. ಎರಡು ಹೊಸ ತಂಡಗಳ ಸೃಷ್ಟಿಗೆ ಕರೆಯಲಾಗಿದ್ದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾರಿ ಮೊತ್ತದ ವಹಿವಾಟು ದಾಖಲಾಗಿದೆ. ಎರಡು ಹೊಸ ತಂಡಗಳ ಖರೀದಿಗೆ 12,715 ಕೋಟಿ ರು ವ್ಯಯಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸುಮಾರು 10, 000 ಕೋಟಿ ರು ನಿರೀಕ್ಷೆ ಹೊಂದಿತ್ತು. ನಿರೀಕ್ಷೆಗೂ ಮೀರಿ ಬಿಡ್ಡಿಂಗ್ ಸಲ್ಲಿಕೆಯಾಗಿ, ಕುತೂಹಲ ಕೆರಳಿಸಿತ್ತು. ಅಂತಿಮವಾಗಿ, ಅಹಮದಾಬಾದ್ ಹಾಗೂ ಲಕ್ನೋ ಎರಡು ಹೊಸ ತಂಡಗಳಿಗಾಗಿ ದೇಶ, ವಿದೇಶಗಳ ಉದ್ಯಮಿಗಳು ಪೈಪೋಟಿ ನಡೆಸಿದ್ದರು.
ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ನಿಷೇಧಕ್ಕೆ ಒಳಗಾಗಿದ್ದಾಗ ಹೊಸ ತಂಡಗಳನ್ನು ಕಾಣಲಾಗಿತ್ತು. 2016 ಹಾಗೂ 2017ರಲ್ಲಿ ಸಂಜೀವ್ ಗೊಯೆಂಕಾ ನೇತೃತ್ವದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಒಡೆತನವನ್ನು ಆರ್ ಪಿ ಎಸ್ ಜಿ ಹೊಂದಿತ್ತು. ಈಗ ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿದಿದ್ದು, 7090 ಕೋಟಿ ರು ಬಿಡ್ ಸಲ್ಲಿಸಿ ಲಕ್ನೋ ತಂಡವನ್ನು ತನ್ನದಾಗಿಸಿಕೊಂಡಿದೆ. ಆರ್ ಪಿ ಎಸ್ ಗೊಯೆಂಕಾ ಸಮೂಹ ಸಂಸ್ಥೆಯ ಒಡೆತನದಲ್ಲಿ ಲಕ್ನೋ ತಂಡ ಕಣಕ್ಕಿಳಿಯಲಿದೆ.

ಅಹಮದಾಬಾದ್ ತಂಡಕ್ಕೆ 5,625 ಕೋಟಿ ರು ಬಿಡ್ ಸಲ್ಲಿಕೆಯಾಗಿದ್ದು, ಸಿವಿಸಿ ಕ್ಯಾಪಿಟಲ್ ತಂಡಕ್ಕೆ ಮಾಲೀಕತ್ವ ಸಿಕ್ಕಿದೆ. ಒಟ್ಟಾರೆ ಎರಡು ತಂಡಗಳಿಂದ 1.7 ಬಿಲಿಯನ್ ಡಾಲರ್ (ಸುಮಾರು 12, 715 ಕೋಟಿ ರು) ಮೊತ್ತ ಬಿಸಿಸಿಐಗೆ ಸಂದಾಯವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳ ಮೌಲ್ಯ (ಮಿಲಿಯನ್ ಯುಎಸ್ ಡಾಲರ್)
- ಲಕ್ನೋ- 950
- ಅಹಮದಾಬಾದ್- 710
- ಪುಣೆ ವಾರಿಯರ್ಸ್ ಇಂಡಿಯನ್- 370
- ಕೊಚ್ಚಿ ಟಸ್ಕರ್ಸ್ ಕೇರಳ- 333
- ಮುಂಬೈ ಇಂಡಿಯನ್ಸ್ -111.9
- ರಾಯಲ್ ಚಾಲೆಂಜರ್ಸ್ ಬೆಂಗಳೂರು- 111.6
- ಡೆಕ್ಕನ್ ಚಾರ್ಜರ್ಸ್- 107
- ಚೆನ್ನೈ ಸೂಪರ್ ಕಿಂಗ್ಸ್- 91
- ಡೆಲ್ಲಿ ಕ್ಯಾಪಿಟಲ್ಸ್- 84
- ಸನ್ ರೈಸರ್ಸ್ ಹೈದರಾಬಾದ್- 79.5 (ಐದು ವರ್ಷದ ಒಪ್ಪಂದ)
- ಪಂಜಾಬ್ ಕಿಂಗ್ಸ್ -76
- ಕೋಲ್ಕತ್ತಾ ನೈಟ್ ರೈಡರ್ಸ್- 75.1
- ರಾಜಸ್ಥಾನ್ ರಾಯಲ್ಸ್ -67
ಈ ಪೈಕಿ ಪುಣೆ ವಾರಿಯರ್ಸ್ ಇಂಡಿಯನ್, ಕೊಚ್ಚಿ ಟಸ್ಕರ್ಸ್ ಕೇರಳ, ಡೆಕ್ಕನ್ ಚಾರ್ಜರ್ಸ್ ತಂಡಗಳು ಅಸ್ತಿತ್ವದಲ್ಲಿಲ್ಲ. ಇಲ್ಲಿ ನೀಡಿರುವ ಅಂಕಿ ಅಂಶ ತಂಡ ಅಸ್ತಿತ್ವದಲ್ಲಿದ್ದಾಗ ತಂಡದ ಮೌಲ್ಯವನ್ನು ಆಧಾರಿಸಿ ನೀಡಲಾಗಿರುವ ಮೊತ್ತವಾಗಿದೆ.
ಕೊನೆ ಹಂತದ ಬಿಡ್ಡಿಂಗ್‌ನಲ್ಲಿ 10 ಕಂಪನಿಗಳು
ಈ ಹರಾಜಿನಲ್ಲಿ ಸುಮಾರು 22 ವಿವಿಧ ಕಂಪನಿಗಳು ಪಾಲ್ಗೊಂಡಿದ್ದವು. ಸುಮಾರು 10 ಕಂಪನಿಗಳು ಕೊನೆ ಹಂತದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು. ಈ ಪೈಕಿ ಅದಾನಿ ಸಂಸ್ಥೆ ಪ್ರಮುಖವಾಗಿದ್ದರೆ, ಎಚ್ ಟಿ ಮೀಡಿಯಾ ಪ್ರೈ ಲಿಮೆಟೆಡ್, ಟೊರೆಂಟ್ ಫಾರ್ಮಾ, ಅರಬಿಂದೋ ಫಾರ್ಮಾ, ಆಲ್ ಕಾರ್ಗೊ, ಕೊಟಕ್ ಗ್ರೂಪ್ ಅಲ್ಲದೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ಪ್ರಮುಖ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ದ ಮಾಲೀಕರಾದ ಗ್ಲೇಜರ್ಸ್ ಈಕ್ವಿಟಿ ಸಂಸ್ಥೆ ಕೂಡಾ ಪೈಪೋಟಿಯಲ್ಲಿತ್ತು.
ಒಂದು ಫ್ರಾಂಚೈಸಿ 2000 ಕೋಟಿಂದ -3000 ಕೋಟಿಗೆ ಮಾರಾಟವಾಗಬಹುದು ಎಂದು ಲೆಕ್ಕಾಚಾರ ಹೊಂದಿದ್ದ ಬಿಸಿಸಿಐ, ಕೊನೆ ದಿನದಂದು 7000-10,000 ಕೋಟಿಗೆ ಎರಡು ತಂಡಗಳು ಹರಾಜಾಗಬಹುದು ಎಂದು ಅಂದಾಜಿಸಿತ್ತು. ಈ ಮೂಲಕ ಭಾರೀ ಮೊತ್ತದ ಲಾಭದ ನಿರೀಕ್ಷೆ ಹೊಂದಿದ್ದ ಬಿಸಿಸಿಐ, ನಿರೀಕ್ಷೆ ಕೊನೆಗೂ ಸುಳ್ಳಾಗಲಿಲ್ಲ.
ವಿಶೇಷವೆಂದರೆ ಮಾಜಿ ನಾಯಕ ಎಂಎಸ್ ಧೋನಿ ಹೂಡಿಕೆ ಹೊಂದಿರುವ ರಿತಿ ಸ್ಫೋಟ್ಸ್ ಕೂಡಾ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿತ್ತು. ಆದರೆ, ತಾಂತ್ರಿಕ ಕಾರಣಗಳಿಗಾಗಿ ಕೊನೆ ಹಂತಕ್ಕೆ ತಲುಪಲಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications