Rohit Sharma: ರೋಹಿತ್-ಹಾರ್ದಿಕ್ ನಡುವಿನ ಮುನಿಸು ದೂರಾಗಲು ಈ ಇಬ್ಬರು ಕಾರಣ
ಐಪಿಎಲ್ 2024ರ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಭಾರಿ ಸುದ್ದಿ ಮಾಡಿದ ಫ್ರಾಂಚೈಸಿ ಆಗಿದೆ. ತಂಡದಲ್ಲಿ ಮಾಡಿದ ಬದಲಾವಣೆ ಭಾರಿ ವಿವಾದಕ್ಕೆ ಕಾರಣವಾಗಿದ್ದಲ್ಲದೆ, ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಿತ್ತು. ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ನೇಮಿಸಿದ ಬಳಿಕ ಅಭಿಮಾನಿಗಳೇ ರೊಚ್ಚಿಗೆದ್ದಿದ್ದರು. ಹೋದಲ್ಲೆಲ್ಲಾ ರೋಹಿತ್ ಶರ್ಮಾ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರನ್ನು ಅವಮಾನಿಸಿದ್ದರು.
ರೋಹಿತ್ ಶರ್ಮಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ, ಹಾರ್ದಿಕ್ ಪಾಂಡ್ಯ ನಗು ನಗುತ್ತಲೇ ಎಲ್ಲವನ್ನೂ ಸಂಭಾಳಿಸಲು ಪ್ರಯತ್ನ ಪಟ್ಟಿದ್ದರು. ತಂಡ ಹೀನಾಯ ಪ್ರದರ್ಶನ ನೀಡಿದ್ದು ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ನಡುವಿನ ಮುಸುಕಿನ ಗುದ್ದಾಟ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿತ್ತು, ಆದರೆ ಇಬ್ಬರ ನಡುವಿನ ಮುನಿಸು ಕಡಿಮೆ ಮಾಡಿದ್ದು ಇಬ್ಬರು ದಿಗ್ಗಜರು.

ಪತ್ರಕರ್ತ ವಿಮಲ್ ಕುಮಾರ್ ಹೇಳಿಕೆ ಪ್ರಕಾರ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಆರಂಭದಲ್ಲಿ ಅಭ್ಯಾಸ ಮಾಡಲಿಲ್ಲ ಆದರೆ ಭಾರತ ತಂಡಕ್ಕಾಗಿ ಆಡುವಾಗ ಒಟ್ಟಿಗೆ ಬಂದರು. ಈ ಸಂದರ್ಭದಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ದೊಡ್ಡ ಪಾತ್ರ ವಹಿಸಿದರು ಎಂದು ಹೇಳಿದ್ದಾರೆ.
ವಿಮಲ್ ಕುಮಾರ್ ಹೇಳಿದ್ದೇನು?
ನಾನು ನೆಟ್ಸ್‌ಗೆ ಹೋದಾಗ ಹಾರ್ದಿಕ್ ಮತ್ತು ರೋಹಿತ್ ನಡುವೆ ಏನು ನಡೆಯುತ್ತಿದೆ ಎನ್ನುವುದನ್ನು ಗಮನಿಸಿದೆ. ಮೊದಲ ದಿನ ಅಭ್ಯಾಸದ ವೇಳೆ ಇಬ್ಬರೂ ಮಾತನಾಡಲಿಲ್ಲ, ಅಂತರ ಕಾಯ್ದುಕೊಂಡಿದ್ದರು. ಆದರೆ ಎರಡನೇ ದಿನ ಇಬ್ಬರು ಅಕ್ಕಪಕ್ಕ ಕುಳಿತು ಚರ್ಚೆ ಮಾಡುವುದನ್ನು ನೋಡಿದೆ. ಆ ಕ್ಷಣದಲ್ಲೇ ಭಾರತ ತಂಡ ಗೆಲ್ಲುವ ಬಗ್ಗೆ ವಿಶ್ವಾಸ ಮೂಡಿದೆ. ಅಲ್ಲಿ ಕ್ಯಾಮರಾ ಕೂಡ ಇರಲಿಲ್ಲ. ಮುಂದಿನ ಮೂರು ದಿನಗಳ ಇಬ್ಬರು ತುಂಬಾ ಹೊತ್ತು ಚರ್ಚೆ ಮಾಡುತ್ತಾ ಅಭ್ಯಾಸ ಮಾಡಿದರು. ರೋಹಿತ್ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಗಮನಸೆಳೆದರು. ತಂಡದ ವಾತಾವರಣ ಸರಿಹೋಗಿತ್ತು ಎಂದು ವಿಮಲ್ ಕುಮಾರ್ 2 ಸ್ಲೋಗರ್ಸ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.
ಇದರ ಸಂಪೂರ್ಣ ಕ್ರೆಡಿಟ್ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ನಡುವೆ ಉತ್ತಮ ಬಾಂಧವ್ಯವಿದೆ. ಎಲ್ಲರೂ ಒಗ್ಗಟ್ಟಾಗಿದ್ದರು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಎಲ್ಲರಿಗೂ ನಂಬಿಕೆಯಿತ್ತು ಎಂದು ಹೇಳಿದ್ದಾರೆ.












Click it and Unblock the Notifications