KL Rahul: ರಣಜಿ ಟ್ರೋಫಿ ಆಡಲು ಸಜ್ಜಾದ ಕೆಎಲ್ ರಾಹುಲ್; 5 ವರ್ಷಗಳ ಬಳಿಕ ಕರ್ನಾಟಕ ತಂಡಕ್ಕೆ ವಾಪಸ್
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ತಕ್ಕ ಮಟ್ಟಿಗೆ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಬಳಿಕ ಮೊಣಕೈ ಗಾಯಕ್ಕೆ ತುತ್ತಾಗಿದ್ದರು. ಈಗ ಗಾಯದಿಂದ ಚೇತರಿಸಿಕೊಂಡಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ ರಣಜಿ ಟ್ರೋಫಿಯಲ್ಲಿ ಆಡಲು ನಿರ್ಧರಿಸಿದ್ದಾರೆ. 5 ವರ್ಷಗಳ ಬಳಿಕ ಕರ್ನಾಟಕ ತಂಡಕ್ಕೆ ಮರಳಿದ್ದು, ಜನವರಿ 30ರಿಂದ ಆರಂಭವಾಗುವ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಜನವರಿ 30ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಅಂತಿಮ ಲೀಗ್ ಪಂದ್ಯದಲ್ಲಿ ಕರ್ನಾಟಕ ಹರಿಯಾಣ ತಂಡವನ್ನು ಎದುರಿಸಲಿದೆ. ಎಲೈಟ್ ಸಿ ಗುಂಪಿನಲ್ಲಿರುವ ಕರ್ನಾಟಕ ಅಂಕಪಟ್ಟಿಯಲ್ಲಿ ಈಗ ಮೂರನೇ ಸ್ಥಾನದಲ್ಲಿದ್ದು ಅಗ್ರಸ್ಥಾನದಲ್ಲಿರುವ ಹರಿಯಾಣದ ವಿರುದ್ಧ ಸೆಣೆಸಲಿದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಬಳಿಕ ಮೊಣಕೈ ನೋವಿನಿಂದ ಚೇತರಿಸಿಕೊಂಡಿದ್ದಾರೆ. 2020 ರಲ್ಲಿ ಕೋಲ್ಕತ್ತಾದಲ್ಲಿ ಬಂಗಾಳ ವಿರುದ್ಧ ಆಡಿದ ನಂತರ ರಾಹುಲ್ ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಂಡಿಲ್ಲ. ಈಗ ಬಿಸಿಸಿಐ ಎಲ್ಲಾ ಆಟಗಾರರು ರಣಜಿಯಲ್ಲಿ ಆಡುವುದು ಕಡ್ಡಾಯಗೊಳಿಸಿರುವ ಕಾರಣ ಕೆಎಲ್ ರಾಹುಲ್ ಮತ್ತೆ ಕರ್ನಾಟಕ ಪರ ಆಡಲು ಸಜ್ಜಾಗಿದ್ದಾರೆ.
ಸ್ಟಾರ್ ಆಟಗಾರರಿಗೆ ರಣಜಿ ಕಡ್ಡಾಯ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಸ್ಟಾರ್ ಆಟಗಾರರು ಕೂಡ ರಣಜಿಯಲ್ಲಿ ಆಡಬೇಕು ಎಂದು ಬಿಸಿಸಿಐ ತಾಕೀತು ಮಾಡಿದೆ. ಈ ಬೆನ್ನಲ್ಲೇ ರೋಹಿತ್ ಶರ್ಮಾ, ರಿಷಬ್ ಪಂತ್, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ, ಶುಭಮನ್ ಗಿಲ್ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಿದ್ದಾರೆ.
ಕೆಎಲ್ ರಾಹುಲ್ ಪಂಜಾಬ್ ವಿರುದ್ಧದ ಪಂದ್ಯದಲ್ಲೇ ಆಡಬೇಕಿತ್ತಾದರೂ ಅವರು ವಿಶ್ರಾಂತಿ ಕೇಳಿದ್ದರಿಂದ ಆ ಪಂದ್ಯದಿಂದ ಹೊರಗುಳಿದಿದ್ದರು. ಜನವರಿ 30 ರಂದು ಆರಂಭವಾಗುವ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಮಂಗಳವಾರವೇ ಅವರು ಕರ್ನಾಟಕ ತಂಡದ ಜೊತೆ ಅಭ್ಯಾಸ ಆರಂಭಿಸುವ ನಿರೀಕ್ಷೆ ಇದೆ.
ಗಾಯದ ಸಮಸ್ಯೆಯಿಂದ ಹೊರುಗುಳಿದಿದ್ದ ವಿದ್ವತ್ ಕಾವೇರಪ್ಪ ಕೂಡ ಫಿಟ್ ಆಗಿದ್ದು ತಂಡಕ್ಕೆ ಮರಳಿದ್ದಾರೆ. ಬೋನಸ್ ಪಾಯಿಂಟ್‌ನೊಂದಿಗೆ ಗೆಲುವು ಸಾಧಿಸಿದರೆ ಮಾತ್ರ ಕರ್ನಾಟಕ ನಾಕೌಟ್ ಹಂತಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಗೋಪಾಲ್ (ಉಪನಾಯಕ), ದೇವದತ್ ಪಡಿಕ್ಕಲ್, ಕೆವಿ ಅನೀಶ್, ಆರ್ ಸ್ಮರನ್, ಕೆಎಲ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ಧ್ ಕೃಷ್ಣ, ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರಂತಪ್, ನಿಕಿನ್ ಜೋಸ್, ಸುಜಯ್ ಸತೇರಿ (ವಿಕೆಟ್ ಕೀಪರ್), ಮೊಹ್ಸಿನ್ ಖಾನ್.












Click it and Unblock the Notifications