KL Rahul: ವಿರಾಟ್ ಕೊಹ್ಲಿ, ಧೋನಿಯನ್ನೂ ಹಿಂದಿಕ್ಕಿ ಹೊಸ ದಾಖಲೆ ಬರೆದ ಕೆಎಲ್ ರಾಹುಲ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವೇಗವಾಗಿ 200 ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್ ಎನ್ನುವ ಸಾಧನೆ ಮಾಡಿದ್ದು, ವಿರಾಟ್ ಕೊಹ್ಲಿ, ಎಂಎಸ್ ಧೋನಿಯವರನ್ನೂ ಕೂಡ ಹಿಂದಿಕ್ಕಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ 28 ರನ್ ಗಳಿಸಿದಾಗ ಅವರು ಈ ಸಾಧನೆ ಮಾಡಿದರು.
ರಾಹುಲ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದೇ ಇದ್ದರೂ, ಕೆಲವು ಉತ್ತಮ ಹೊಡೆತಗಳನ್ನು ಹೊಡೆದರು. ಈ ಇನ್ನಿಂಗ್ಸ್ ಮೂಲಕ ಅವರು ಈಗ ಐಪಿಎಲ್ ನಲ್ಲಿ 200 ಸಿಕ್ಸರ್ ಗಳನ್ನು ಗಳಿಸಿದ ಅತ್ಯಂತ ವೇಗದ ಭಾರತೀಯ ಆಟಗಾರ ಎನ್ನುವ ದಾಖಲೆ ಮಾಡಿದ್ದಾರೆ. ಕೆಎಲ್ ರಾಹುಲ್ ಕೇವಲ 128 ಇನ್ನಿಂಗ್ಸ್ ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿದಾಗ ಕೆಎಲ್ ರಾಹುಲ್ ಅವರ 200ನೇ ಸಿಕ್ಸರ್ ಪೂರೈಸಿದ ಸಾಧನೆ ಮಾಡಿದರು. ಎಂಎಸ್ ಧೋನಿ 165 ಇನ್ನಿಂಗ್ಸ್‌ಗಳಲ್ಲಿ 200 ಸಿಕ್ಸರ್ ಬಾರಿಸಿದ್ದರೆ, ವಿರಾಟ್ ಕೊಹ್ಲಿ 180 ಇನ್ನಿಂಗ್ಸ್‌ನಲ್ಲಿ 200ನೇ ಸಿಕ್ಸರ್ ಬಾರಿಸಿದರು. ರೋಹಿತ್ ಶರ್ಮಾ 185 ಇನ್ನಿಂಗ್ಸ್‌ನಲ್ಲಿ ಮತ್ತು ಸುರೇಶ್ ರೈನಾ 193 ಇನ್ನಿಂಗ್ಸ್‌ನಲ್ಲಿ 200 ಸಿಕ್ಸರ್ ಬಾರಿಸಿದ್ದಾರೆ.
ಒಟ್ಟಾರೆ ಪಟ್ಟಿಯಲ್ಲಿ ಕೆಎಲ್ ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 69 ಇನ್ನಿಂಗ್ಸ್‌ಗಳಲ್ಲಿ 200 ಸಿಕ್ಸರ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ಆಂಡ್ರೆ ರಸೆಲ್ 97 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.
ಉತ್ತಮ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್
ಕೆಎಲ್ ರಾಹುಲ್ ಐಪಿಎಲ್ 2025ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ, ಆರು ಪಂದ್ಯಗಳಲ್ಲಿ 53.20 ಸರಾಸರಿ ಮತ್ತು 158.33 ಸ್ಟ್ರೈಕ್ ರೇಟ್‌ನಲ್ಲಿ 266 ರನ್ ಗಳಿಸಿದ್ದಾರೆ. ಅವರು ಇಲ್ಲಿಯವರೆಗೆ ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಜೇಯ 93 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿದರು.
ಕಳೆದ ಮೂರು ವರ್ಷಗಳು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಮೆಗಾ ಹರಾಜಿಗೆ ಮುನ್ನ ಎಲ್‌ಎಸ್‌ಜಿ ತಂಡದಿಂದ ಹೊರಬಂದಿದ್ದರು. ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು ಹಲವು ಪಂದ್ಯಗಳಲ್ಲಿ ಫಿನಿಶರ್ ಸ್ಥಾನವನ್ನು ನಿಭಾಯಿಸಿದರು. ಸದ್ಯ ಭಾರತ ಟಿ20 ತಂಡಕ್ಕೆ ವಾಪಸಾತಿ ಮಾಡುವ ವಿಶ್ವಾಸದಲ್ಲಿದ್ದು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.












Click it and Unblock the Notifications