KL Rahul: ಟಿ20 ವಿಶ್ವಕಪ್‌ಗೆ ಕೆಎಲ್ ರಾಹುಲ್ ಆಯ್ಕೆ ಮಾಡದ್ದಕ್ಕೆ ಕಾರಣ ಕೊಟ್ಟ ಅಜಿತ್ ಅಗರ್ಕರ್
2024ರ ಜೂನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದು, ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ಆಯ್ಕೆಯಾಗಿದ್ದಾರೆ.
ಕೆಎಲ್ ರಾಹುಲ್ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದೇ ಇರುವುದು ಚರ್ಚೆಯನ್ನು ಹುಟ್ಟುಹಾಕಿದೆ. ಅಪಘಾತದ ಬಳಿಕ 15 ತಿಂಗಳು ವಿಶ್ರಾಂತಿ ಪಡೆದಿದ್ದ ರಿಷಬ್ ಪಂತ್ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ತಂಡಕ್ಕೆ ಆಯ್ಕೆಯಾಗುಬಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕೂಡ ಈ ಆವೃತ್ತಿಯಲ್ಲಿ ಉತ್ತಮವಾಗಿ ಆಡುತ್ತಿದ್ದು, ಕೊನೆಗೂ ಭಾರತ ತಂಡಕ್ಕೆ ಮರಳಿದ್ದಾರೆ.

ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಕೆಎಲ್ ರಾಹುಲ್ ಆಯ್ಕೆ ಮಾಡದಿರಲು ಕಾರಣವೇನು ಎಂದು ಬಹಿರಂಗಪಡಿಸಿದ್ದಾರೆ. ಭಾರತ ಈಗಾಗಲೇ 15 ಮಂದಿಯ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಅವರಲ್ಲಿ ಆರಂಭಿಕ ಆಯ್ಕೆಗಳನ್ನು ಹೊಂದಿರುವುದರಿಂದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ತಂಡಕ್ಕೆ ಆಯ್ಕೆಯಾಗಿಲ್ಲ ಎಂದು ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.
ಸ್ಯಾಮ್ಸನ್ ಆಯ್ಕೆ ಮಾಡಿದ್ದೇಕೆ?
ರಾಹುಲ್ ಪ್ರತಿಭಾವಂತ ಆಟಗಾರ, ಆದರೆ ಇದೀಗ ಭಾರತೀಯ ಕ್ರಿಕೆಟ್ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಬೇಕಾಗಿದ್ದಾರೆ ಎಂದು ಅಗರ್ಕರ್ ಹೇಳಿದರು. ಸ್ಯಾಮ್ಸನ್ ಮತ್ತು ಪಂತ್ ಇಬ್ಬರೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಲ್ಲಿ ಬೇಕಾದರೂ ಬ್ಯಾಟ್ ಮಾಡಬಹುದು, ಆದರೆ ರಾಹುಲ್ ಮೊದಲಿನಂದಲೂ ಆರಂಭಿಕರಾಗಿ ಆಡುತ್ತಿದ್ದಾರೆ ಎಂದು ಟಿ20 ವಿಶ್ವಕಪ್ 2024 ತಂಡದ ಪ್ರಕಟಣೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೆಎಲ್ ರಾಹುಲ್ ಕ್ಲಾಸ್ ಮತ್ತು ಉತ್ತಮ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಅಗರ್ಕರ್ ಹೇಳಿದ್ದಾರೆ.
ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಆರಂಭಿಕರಾಗಿದ್ದಾರೆ. ನಾವು ಮುಖ್ಯವಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಯ್ಕೆಗಳನ್ನು ಹುಡುಕುತ್ತಿದ್ದೇವೆ. ಹಾಗಾಗಿ, ಸ್ಯಾಮ್ಸನ್ ಮತ್ತು ಪಂತ್ ಸೂಕ್ತ ಆಯ್ಕೆ ಎಂದು ನಾವು ಭಾವಿಸಿದ್ದೇವೆ. ಸ್ಯಾಮ್ಸನ್ ಯಾವ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟ್ ಮಾಡಬಹುದು. ಇದು ಯಾರು ಉತ್ತಮರು ಎನ್ನುವುದಲ್ಲ, ತಂಡಕ್ಕೆ ಏನು ಬೇಕು ಎನ್ನುವುದು ಮುಖ್ಯ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್












Click it and Unblock the Notifications