KKR vs RR: ರಾಜಸ್ಥಾನ ರಾಯಲ್ಸ್ ವಿರುದ್ಧ ಒಂದು ರನ್‌ನಿಂದ ರೋಚಕ ಗೆಲುವು ಸಾಧಿಸಿದ ಕೆಕೆಆರ್
ಐಪಿಎಲ್ 2025ರ ಆವೃತ್ತಿಯಲ್ಲಿ ಸತತವಾಗಿ ಎರಡು ರೋಚಕ ಪಂದ್ಯಗಳು ನಡೆದಿವೆ. ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ 2 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಭಾನುವಾರ ನಡೆದ ಮತ್ತೊಂದು ರೋಚಕ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 1 ರನ್‌ಗಳ ಗೆಲುವು ಸಾಧಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ರಹಮಾನುಲ್ಲಾ ಗುರ್ಬಾಜ್ 35 ರನ್ ಗಳಿಸಿದರೆ, ಸುನಿಲ್ ನರೈನ್ 11 ರನ್ ಗಳಿಸಿದರು.

ನಾಯಕ ಅಜಿಂಕ್ಯ ರಹಾನೆ 30 ರನ್ ಗಳಿಸಿದರೆ, ಆಂಗ್‌ಕ್ರಿಶ್ ರಘುವಂಶಿ 44 ರನ್ ಗಳಿಸಿದರು. ಕೊನೆಗೂ ಫಾರ್ಮ್‌ಗೆ ಮರಳಿದ ಆಂಡ್ರೆ ರಸೆಲ್ 25 ಎಸೆತಗಳಲ್ಲಿ 4 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 57 ರನ್ ಗಳಿಸಿ ಮಿಂಚಿದರು. ರಿಂಕು ಸಿಂಗ್ 6 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ಸಹಿತ 19 ರನ್ ಗಳಿಸಿದರು.
ರಿಯಾನ್ ಪರಾಗ್ ಹೋರಾಟ ವ್ಯರ್ಥ
207 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ನೀರಸ ಆರಂಭ ಪಡೆಯಿತು. ವೈಭವ್ ಸೂರ್ಯವಂಶಿ 4 ರನ್ ಗಳಿಸಿ ಔಟಾದರೆ, ಕುನಾಲ್ ಸಿಂಗ್ ರಾಥೋರ್ ರನ್ ಗಳಿಸುವ ಮುನ್ನವೇ ಔಟಾದರು. ಧ್ರುವ್ ಜುರೇಲ್, ವನಿಂದು ಹಸರಂಗ ಕೂಡ ಸೊನ್ನೆಗೆ ಔಟಾಗಿದ್ದು ರಾಜಸ್ಥಾನ ರಾಯಲ್ಸ್ ಹೀನಾಯ ಸೋಲಿನ ಭೀತಿಗೆ ಸಿಲುಕಿತ್ತು.
ಆದರೆ ನಾಯಕ ರಿಯಾನ್ ಪರಾಗ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ರಾಜಸ್ಥಾನ ರಾಯಲ್ಸ್‌ಗೆ ಗೆಲುವಿನ ಭರವಸೆ ಮೂಡಿಸಿದರು. 45 ಎಸೆತಗಳಲ್ಲಿ 6 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ 95 ರನ್ ಗಳಿಸಿದ ಅವರು ಶತಕದ ಸನಿಹದಲ್ಲಿ ಎಡವಿದರು. ಶಿಮ್ರಾನ್ ಹೆಟ್ಮೆಯರ್ 29 ರನ್ ಗಳಿಸಿದರೆ, ಶುಭಮ್ ದುಬೆ 14 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರೂ ತಂಡದ ಸೋಲನ್ನು ತಪ್ಪಿಸಲು ಆಗಲಿಲ್ಲ.
ಕೊನೆಯ ಎಸೆತದಲ್ಲಿ ಗೆಲುವಿಗೆ 3 ರನ್ ಬೇಕಿದ್ದಾಗ ವೈಭವ್ ಅರೋರಾ ಅವರು ಯಾರ್ಕರ್ ಎಸೆತವನ್ನು ಸರಿಯಾಗಿ ಹೊಡೆಯುವಲ್ಲಿ ವಿಫಲವಾದರು. ಎರಡು ರನ್ ಗಳಿಸಲು ಕೂಡ ವಿಫಲವಾದ ಕಾರಣ ಆರ್ ಆರ್ ಮತ್ತೊಮ್ಮೆ ಗೆಲುವಿನ ಸನಿಹಕ್ಕೆ ಬಂದು ಎಡವಿತು. ಈ ಗೆಲುವಿನ ಮೂಲಕ ಕೆಕೆಆರ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದು ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ.












Click it and Unblock the Notifications