Khel Ratna Award: ಮನುಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ
ಎರಡು ಒಲಿಂಪಿಕ್ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಶೂಟರ್ ಮನುಭಾಕರ್, ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಕಿರಿಯ ಕ್ರೀಡಾಪಟು ಡಿ ಗುಕೇಶ್ ಸೇರಿದಂತೆ ನಾಲ್ವರು ಸಾಧಕರಿಗೆ ಈ ಬಾರಿ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಒಲಿದು ಬಂದಿದೆ. ಗುರುವಾರ ಕೇಂದ್ರ ಕ್ರೀಡಾ ಸಚಿವಾಲಯ ಖೇಲ್ ರತ್ನ ಪ್ರಶಸ್ತಿ ಗೌರವ ಪಡೆಯುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಪ್ರವೀಣ್ ಕುಮಾರ್ ಕೂಡ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಖೇಲ್ ರತ್ನ ಭಾರತದ ಸಾಧಕ ಕ್ರೀಡಾಪಟುಗಳಿಗೆ ನೀಡುವ ಅತ್ಯುನ್ನತ ಗೌರವವಾಗಿದೆ. 17 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ 32 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಕ್ರೀಡಾಪಟುಗಳ ಪಟ್ಟಿಯಿಂದ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಹೆಸರು ಕಾಣೆಯಾಗಿದೆ ಎನ್ನುವ ವರದಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಮನು ಭಾಕರ್ ಹೆಸರು ಕೈಬಿಟ್ಟಿದ್ದಕ್ಕೆ ಆಕಯೆ ತಂದೆ ರಾಮ್ ಕಿಶನ್ ಮತ್ತು ಕೋಚ್ ಜಸ್ಪಾಲ್ ರಾಣಾ ಕೋಪಗೊಂಡಿದ್ದರು. ಆದರೆ ಮನು ಭಾಕರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವೇಳೆ ತಮ್ಮ ಕಡೆಯಿಂದ ಲೋಪವಾಗಿರಬಹುದು ಎಂದು ಬಳಿಕ ಒಪ್ಪಿಕೊಂಡಿದ್ದಾರೆ.
ತಮ್ಮ ಹೆಸರು ಕೈಬಿಟ್ಟ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ಮನು ಭಾಕರ್, "ಖೇಲ್ ರತ್ನ ಪ್ರಶಸ್ತಿಗೆ ನನ್ನ ಹೆಸರು ಆಯ್ಕೆ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗೆ ಸಂಬಂಧಪಟ್ಟಂತೆ - ಕ್ರೀಡಾಪಟುವಾಗಿ ದೇಶಕ್ಕಾಗಿ ಆಡುವುದು ಮಾತ್ರ ನನ್ನ ಗುರಿ. ಪ್ರಶಸ್ತಿಗಳು ನನಗೆ ಪ್ರೋತ್ಸಾಹ ನೀಡುತ್ತದೆ ಆದರೆ ಅದೇ ನನ್ನ ಗುರಿಯಲ್ಲ. ನಾಮನಿರ್ದೇಶನ ಸಲ್ಲಿಸುವಾಗ ಲೋಪವಾಗಿದೆ ಎಂದು ನಾನು ನಂಬುತ್ತೇನೆ. ಪ್ರಶಸ್ತಿ ವಿಚಾರವನ್ನು ಲೆಕ್ಕಿಸದೆ ನಾನು ದೇಶಕ್ಕಾಗಿ ಪದಕ ತರಲು ಶ್ರಮಿಸುತ್ತೇನೆ. ಈ ವಿಚಾರದ ಬಗ್ಗೆ ವಿವಾದ ಮಾಡಬೇಡಿ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮನವಿ ಮಾಡಿದ್ದರು.
22 ವರ್ಷದ ಮನು ಭಾಕರ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಕಂಚು ಗೆದ್ದ ಸಾಧನೆ ಮಾಡಿದರು. ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎನ್ನುವ ಸಾಧನೆ ಮಾಡಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡವನ್ನು ಮುನ್ನಡೆಸಿದ ಹರ್ಮನ್‌ಪ್ರೀತ್ ಸಿಂಗ್ ಅವರಿಗೂ ಖೇಲ್ ರತ್ನ ಪ್ರಶಸ್ತಿ ಒಲಿದುಬಂದಿದೆ. ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಚಿನ್ನ ಗೆದ್ದು ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆದ ಡಿ ಗುಕೇಶ್ ಅವರಿಗೂ ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಟಿ64 ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡ ಪ್ಯಾರಾ ಹೈ-ಜಂಪರ್ ಪ್ರವೀಣ್ ಅವರಿಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿದೆ.












Click it and Unblock the Notifications