Karnataka vs Punjab: ಗಿಲ್ ಹೋರಾಟ ವ್ಯರ್ಥ; 207 ರನ್‌ಗಳ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಭರ್ಜರಿ ಗೆಲುವು ಸಾಧಿಸಿದೆ. ಪಂಜಾಬ್ ನಾಯಕ ಶುಭಮನ್ ಗಿಲ್ ಶತಕ ಗಳಿಸುವ ಮೂಲಕ ಏಕಾಂಗಿ ಹೋರಾಟ ನೀಡಿದರು ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 55 ರನ್‌ಗಳಿಗೆ ಆಲೌಟ್ ಆಗಿದ್ದ ಪಂಜಾಬ್ ಎರಡನೇ ಇನ್ನಿಂಗ್ಸ್‌ನಲ್ಲಿ 213 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ ಇನ್ನಿಂಗ್ಸ್ ಮತ್ತು 207 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಗಿತ್ತು. ವಿ ಕೌಶಿಕ್ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 3 ವಿಕೆಟ್, ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದಿದ್ದರು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 475 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಬರೋಬ್ಬರಿ 420 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿತ್ತು. ಸ್ಮರಣ್ ರವಿಚಂದ್ರನ್ ಅಮೋಘ ದ್ವಿಶತಕ ಸಿಡಿಸುವ ಮೂಲಕ ಕರ್ನಾಟಕ ದೊಡ್ಡ ಮುನ್ನಡೆ ಪಡೆಯಲು ಕಾರಣವಾಗಿದ್ದರು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಎರಡನೇ ದಿನದಾಟದ ಅಂತ್ಯಕ್ಕೆ 23 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಶುಭಮನ್ ಗಿಲ್ ಶತಕ, ಪಂಜಾಬ್‌ಗೆ ಸೋಲು
ಮೊದಲ ಇನ್ನಿಂಗ್ಸ್‌ನಲ್ಲಿ ರನ್ ಗಳಿಸುವಲ್ಲಿ ವಿಫಲವಾಗಿದ್ದ ಪಂಜಾಬ್ ತಂಡದ ನಾಯಕ ಶುಭಮನ್ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ತಾಳ್ಮೆಯ ಆಟವಾಡಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಗಿಲ್ ನಿಧಾನವಾಗಿ ರನ್ ಕಲೆ ಹಾಕಿದರು. ಫಾರ್ಮ್‌ಗೆ ಮರಳಿದ ಅವರು ಶತಕ ಗಳಿಸುವಲ್ಲಿ ಯಶಸ್ವಿಯಾದರು. 171 ಎಸೆತಗಳಲ್ಲಿ 14 ಬೌಂಡರಿ 3 ಸಿಕ್ಸರ್ ಸಹಿತ 102 ರನ್ ಗಳಿಸಿದ ಅವರು ಶ್ರೇಯಸ್ ಗೋಪಾಲ್‌ಗೆ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
ಶುಭಮನ್ ಗಿಲ್ ಹೊರತುಪಡಿಸಿದರೆ ಉಳಿದ ಯಾವ ಪಂಜಾಬ್ ಬ್ಯಾಟರ್ ಕೂಡ ಕರ್ನಾಟಕದ ಬೌಲಿಂಗ್ ಎದುರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ ಪಂಜಾಬ್ ರನ್ 213 ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಯಶೋವರ್ಧನ್ ಪರಂತಾಪ್ ಮತ್ತು ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದರು. ವಾಸುಕಿ ಕೌಶಿಕ್ ಮತ್ತು ಅಭಿಲಾಷ್ ಶೆಟ್ಟಿ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.












Click it and Unblock the Notifications